ಮುಳುಗಿದೂರಲ್ಲಿ ತೆಪ್ಪಹತ್ತಿ ಮುಲುಕಿದ ಹೊನ್ನಾಳ್ಳಿ ಹೋರಿ! ಕಣ್ಣೀರ ಮಡುವಲ್ಲೂ ರೇಣುಕಾಚಾರ್ಯನ ಗಿಮಿಕ್ಕು!

ಕಣ್ಣೀರ ಮಡುವಲ್ಲೂ ರೇಣುಕಾಚಾರ್ಯನ ಗಿಮಿಕ್ಕು!
ಯಾರದ್ದೋ ಬದುಕಿಗೆ ಬೆಂಕಿ ಬಿದ್ದಾಗಲೂ ಲಕ್ಷಣವಾಗಿ ಕೂತು ಚಳಿ ಕಾಯಿಸಿಕೊಳ್ಳೋ ಕಯಾಲಿ ಕೆಲ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳನ್ನಿಸಿಕೊಂಡಿರೋ ಅವಿವೇಕಿಗಳಿಗೆ ಅಂಟಿಕೊಂಡಿರುತ್ತದೆ. ಪರಿಸ್ಥಿತಿ ಎಂಥಾದ್ದೇ ಇದ್ದರೂ ತಮಗೆ ಪ್ರಚಾರ ಸಿಗಬೇಕು, ತಾವೇ ಹೀರೋ ಆಗಿ ಮಿಂಚಬೇಕೆಂಬ ಬಯಕೆಯಿಂದ ಕೆಲ ಮಂದಿ ಜನಸಾಮಾನ್ಯರಲ್ಲಿಯೂ ವಾಕರಿಕೆ ಹುಟ್ಟಿಸುವಂಥಾ ನಡವಳಿಕೆ ಪ್ರದರ್ಶಿಸುತ್ತಾರೆ. ಸದ್ಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಕೂಡಾ ನೆರೆಯಿಂದ ಕಂಗಾಲಾಗಿರೋ ಜನರೆದುರು ಇಂಥಾದ್ದೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಮೊಳಕಾಲುದ್ದ ನೀರಲ್ಲಿ ತೆಪ್ಪವೇರಿ ಯಾರನ್ನೋ ಕಾಪಾಡುವ ಪೋಸು ಕೊಡಲು ಹೋಗೆ ಜಲರಾಶಿಯ ನಡುವಲ್ಲಿ ನಿಂತೇ ಮಹಾಮಂಗಳಾರತಿಯನ್ನೂ ಮಾಡಿಸಿಕೊಂಡಿದ್ದಾರೆ.


ರೇಣುಕಾಚಾರ್ಯನ ಇಂಥಾ ಯಡವಟ್ಟಿನ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ. ಜನರ ಬದುಕೇ ತಲ್ಲಣಿಸುತ್ತಿದ್ದರೂ ಜನಪ್ರತಿನಿಧಿಯಾಗಿ ರೇಣುಕಾಚಾರ್ಯ ಮಾಡಿರೋ ಈ ಗಿಮಿಕ್ಕಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ರೇಣುಕಾಚಾರ್ಯ ಮುಟ್ಟಿ ನೋಡಿಕೊಳ್ಳುವಂತೆ ಗೇಲಿ ಮಾಡಲಾಗುತ್ತಿದೆ. ಅಷ್ಟಕ್ಕೂ ಜನರೇಕೆ ರೇಣುಕನ ವಿರುದ್ಧ ಈ ಪಾಟಿ ರೊಚ್ಚಿಗೆದ್ದಿದ್ದಾರೆಂಬುದು ಈ ವಿಡಿಯೋ ನೋಡಿದರೇನೇ ಸ್ಪಷ್ಟವಾಗುತ್ತೆ.


ಅತ್ತ ಇತ್ತ ಎಲ್ಲ ದಿಕ್ಕುಗಳಲ್ಲಿಯೂ ನಿರು ತುಂಬಿರೋ ಪ್ರದೇಶದಲ್ಲಿ ರೇಣುಕಾಚಾರ್ಯ ಥೇಟು ಹೀರೋನಂತೆ ಒಂದಷ್ಟು ಜನರನ್ನು ತೆಪ್ಪದಲ್ಲಿ ಕೂರಿಸಿಕೊಂಡು ಕಾಪಾಡೋ ಪ್ರಯತ್ನ ಮಾಡೋ ದೃಷ್ಯ ಈ ವಿಡಿಯೋದಲ್ಲಿದೆ. ಆದರೆ ಹೀರೋ ರೇಣುಕಾಚಾರ್ಯ ತೆಪ್ಪದ ಸಾಹಸ ಮಾಡಿರೋದು ತುಂಬಿ ಹರಿಯುತ್ತಿರೋ ಪ್ರವಾಹದಲ್ಲೇನಲ್ಲ. ಮೊಣಕಾಲಿನಷ್ಟೆತ್ತರ ನೀರು ತುಂಬಿಕೊಂಡಿದ್ದ ರಸ್ತೆಯ ಮೇಲೆಯೇ ರೇಣುಕನ ತೆಪ್ಪದ ಸಾಹಸ ಸಂಪನ್ನಗೊಂಡಿದೆ. ಯಾರಿಗೇ ಆದರೂ ಇದು ಪೋಸು ಕೊಡುವ ಉದ್ದೇಶದಿಂದಲೇ ಮಾಡಿರೋ ಕೆಲಸ ಅನ್ನೋದು ತಕ್ಷಣಕ್ಕೇ ಗೊತ್ತಾಗಿ ಬಿಡುತ್ತದೆ.


ಶಾಸಕನೆಂದ ಮೇಲೆ ಇಂಥಾ ಪೋಸು ಕೊಡಲು ಪ್ರೇರೇಪಿಸಿ ಅಟ್ಟ ಹತ್ತಿಸಲು ಕಾಯುವ ಬಾಲ ಬಡುಕರ ದಂಡು ಸುತ್ತ ನೆರೆದಿರುತ್ತದೆ. ಆದರೆ ಅದರಿಂದ ಪಾರಾಗಿ ಗಂಭೀರವಾಗಿ, ಮಾನವೀಯವಾಗಿ ನಡೆದುಕೊಳ್ಳುವಂತೆ ಮಾಡೋದು ಆಯಾ ವ್ಯಕ್ತಿತ್ವಗಳಷ್ಟೇ. ಇಲ್ಲಿಯೂ ರೇಣುಕಾಚಾರ್ಯನನ್ನು ಯಾರೋ ತೆಪ್ಪ ಹತ್ತಿಸಿದ್ದಾರೆ. ಅವರು ಮೊಳಕಾಲುದ್ದ ನೀರಿನಲ್ಲಿ ತೆಪ್ಪದ ಮೇಲೆ ಮುಲುಕಿದಂತೆ ಹುಟ್ಟು ಹಾಕಲು ಯತ್ನಿಸಿದ್ದಾರೆ. ಈ ಮೂಲಕವೇ ನಗೆಪಾಟಲಿಗೀಡಾಗಿದ್ದಾರೆ. ಆದರೆ ಹೀಗೆ ಪ್ರವಾಹದಿಂದ ಜನ ಕಂಗಾಲೆದ್ದಾಗ ಯಾವ ಕಿಸುರೂ ಇಲ್ಲದೆ ಜನರಲ್ಲೊಂದು ಭರವಸೆ ಮೂಡಿಸೋದು, ಅವರಿಗೆ ಬೇಕಾದ ಸಹಾಯ ಮಾಡೋದಷ್ಟೇ ಜನಪ್ರತಿನಿಧಿಯಾದಾತ ಮಾಡಬೇಕಾದ ಕೆಲಸ. ಅಂಥಾ ನಿಸ್ವಾರ್ಥ ಮನಸ್ಥಿತಿ ಮಾತ್ರವೇ ಜನಮಾನಸದಲ್ಲಿಯೂ ನೆಲೆಗೊಳಿಸುತ್ತದೆ. ಆದರೆ ನರ್ಸ್ ರೇಣುಕಾಚಾರ್ಯರಿಗೆ ಅಂಥಾ ಜ್ಞಾನೋದಯವಾಗೋ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ ಎಂಬುದು ತೆಪ್ಪದ ಸಾಹಸಕ್ಕಿಂತಲೂ ದೊಡ್ಡ ದುರಂತ!

LEAVE A REPLY

Please enter your comment!
Please enter your name here