ನಿಮಗಾಗಿ ಕಾದಿದೆ ಹಳೇ ವೈನಿನ ಒಗರೊಗರು ಆಹ್ಲಾದ!

ಯಾವುದೇ ಬಗೆಯ ಚಿತ್ರ ಮಾಡಿದರೂ ತಮ್ಮದು ವಿಶಿಷ್ಟವಾದ ಕಥೆ ಎಂದೇ ಬಿಲ್ಡಪ್ಪು ಕೊಡುವವರೇ ಹೆಚ್ಚು. ಆದರೆ ಕಥೆಯ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದೆ, ಬೇರೆ ವಿಚಾರಗಳಲ್ಲಿ ವೈವಿಧ್ಯ, ವಿಶೇಷತೆಗಳ ಸುಳಿವಿನೊಂದಿಗೆ ಒನ್ ಲವ್ ೨ ಸ್ಟೋರಿ ಚಿತ್ರವೀಗ ಆಕರ್ಷಣೆಯ ಕೇಂದ್ರಬಿಂದುವಾಗಿ ಬಿಟ್ಟಿದೆ. ಇದು ನಿರ್ದೇಶಕ ವಸಿಷ್ಟ ಬಂಟನೂರರ ಮೊದಲ ಚಿತ್ರ. ಇದರ ಕಥೆ ಹೊಸಾ ಬಾಟಲಿಯಲ್ಲಿ ನಳನಳಿಸೋ ಹಳೇ ವೈನಿನಂಥಾದ್ದೆಂಬ ವಿವರಣೆಯನ್ನು ವಸಿಷ್ಟ ಆರಂಭದಲ್ಲಿಯೇ ಕೊಟ್ಟಿದ್ದರು. ಈ ನಿಟ್ಟಿನಲ್ಲಿ ಹೇಳೋದಾದರೆ ಈ ವಾರ ಹಳೇ ವೈನಿನ ಒಗರೊಗರು ಆಹ್ಲಾದ ನಿಮಗಾಗಿ ಕಾದಿದೆ!


ಆರಂಭದಲ್ಲಿ ಟೈಟಲದಲಿನ ಮೂಲಕವೇ ಈ ಚಿತ್ರ ಒಂದಷ್ಟು ಸುದ್ದಿ ಮಾಡಿತ್ತು. ಆ ನಂತರದಲ್ಲಿ ಟ್ರೇಲರ್ ಮತ್ತು ಹಾಡುಗಳ ಮೂಲಕವೇ ಪ್ರೇಕ್ಷಕರ ಮನಸುಗಳಲ್ಲಿ ರಿಜಿಸ್ಟರ್ ಆಗಿಬಿಟ್ಟಿರೋ ಲವ್ ೨ ಸ್ಟೋರಿ ಈ ವಾರ ತೆರೆಗಾಣುತ್ತಿದೆ. ಈ ಮೂಲಕವೇ ಸಂತೋಷ್ ಮತ್ತು ಮಧು ನಾಗ್ ನಾಯಕರಾಗಿ ಅಡಿಯಿರಿಸುತ್ತಿದ್ದಾರೆ. ಪ್ರಕೃತಿ ಮತ್ತು ಆರಾಧನಾ ನಾಯಕಿಯರಾಗಿ ಮತ್ತೆರಡು ಮುದ್ದಾದ ಪಾತ್ರಗಳ ಮೂಲಕ ಸಾಥ್ ಕೊಟ್ಟಿದ್ದಾರೆ. ಈ ಜೋಡಿಗಳೆಲ್ಲ ಈಗಾಗಲೇ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಈ ಕಾರಣದಿಂದಲೇ ಸಿನಿಮಾ ಪ್ರೇಮಿಗಳು ಒನ್ ಲವ್ ೨ ಸ್ಟೋರಿ ಬಿಡುಗಡೆಯ ಕ್ಷಣಕ್ಕಾಗಿ ಕಾಯಲಾರಂಭಿಸಿದ್ದಾರೆ.


ಪ್ರೀತಿಯ ಭಾವಗಳು ಯಾವತ್ತಿಗೂ ಹಳತಾಗೋದಿಲ್ಲ ಅನ್ನೋದು ಲೋಕರೂಢಿಯ ಮಾತು. ಸಿನಿಮಾಗಳ ಪಾಲಿಗಂತೂ ಇದು ಹೆಚ್ಚು ಅನ್ವರ್ಥಕ. ಅದನ್ನು ಹೊಸಾ ಪರಿಭಾಷೆಯಲ್ಲಿ ಕಟ್ಟಿ ಕೊಡೋ ಪ್ರಯತ್ನಗಳು ನಡೆದರಂತೂ ಅಂಥಾ ಚಿತ್ರ ಗೆಲ್ಲೋದರಲ್ಲಿ ಯಾವ ಸಂಶಯವೂ ಇಲ್ಲ. ಒನ್ ಲ್ವವ ೨ ಸ್ಟೋರಿ ಕೂಡಾ ಅಂಥಾದ್ದೇ ಕ್ರಿಯೇಟಿವ್ ಆಲೋಚನೆಗಳೊಂದಿಗೆ ಮೂಡಿ ಬಂದಿದೆ. ನಿರ್ದೇಶಕ ವಸಿಷ್ಟ ಬಂಟನೂರು ಹೇಳೋ ಪ್ರಕಾರ ಈ ಚಿತ್ರದ ಕಥೆ ನವೀನ ಮಾದರಿಯ ಸ್ಕ್ರೀನ್‌ಪ್ಲೇ ಮೂಲಕವೇ ಮೆರುಗು ಪಡೆದುಕೊಂಡಿದೆ. ಕನ್ನಡದ ಮಟ್ಟಿಗೆ ಹೊಸಾ ಬಗೆಯದ್ದಾಗಿ ದಾಖಲಾಗುವಂಥಾ ಸ್ಕ್ರೀನ್ ಪ್ಲೇ ಕೈಚಳಕವನ್ನಿಲ್ಲಿ ಪ್ರದರ್ಶಿಸಲಾಗಿದೆಯಂತೆ.


ಈ ಚಿತ್ರದ ಶೀರ್ಷಿಕೆ ಮತ್ತು ಈ ವರೆಗೆ ಜಾಹೀರಾಗಿರೋ ಕೆಲ ವಿಚಾರಗಳನ್ನು ಗಮನಿಸಿದರೆ ಇದೊಂದು ಯುವ ಆವೇಗದ ಚಿತ್ರವೆಂಬುದು ಸ್ಪಷ್ಟವಾಗುತ್ತದೆ. ಆದರೆ ಇದು ಕೇವಲ ಯುವ ಸಮೂಹವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರೋ ಚಿತ್ರವಲ್ಲ. ಯಾವ ವಯೋಮಾನದ, ಯಾವ ವರ್ಗದ ಪ್ರೇಕ್ಷಕರೇ ನೋಡಿದರೂ ಆಪ್ತವಾಗುವಂತೆ ಇದನ್ನು ಕಟ್ಟಿ ಕೊಡಲಾಗಿದೆಯಂತೆ. ಕುಟುಂಬ ಸಮೇತರಾಗಿ ಪ್ರೇಕ್ಷಕರು ಬಂದು ನೋಡುವಂತಾದರೆ ಪುಷ್ಕಳ ಗೆಲುವು ಸಿಗುತ್ತದೆ ಎಂಬ ಸತ್ಯ ನಿರ್ದೇಶಕರಿಗೆ ಗೊತ್ತಿಲ್ಲದಿರೋದೇನಲ್ಲ. ಆ ನಿಟ್ಟಿನಲ್ಲಿಯೇ ದೃಷ್ಯ ಕಟ್ಟಿರೋ ವಸಿಷ್ಟ ಬಂಟನೂರು ಈ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಾಗಿ ನೆಲೆ ಕಂಡುಕೊಳ್ಳುವ ಕನಸು ಹೊಂದಿದ್ದಾರೆ.

LEAVE A REPLY

Please enter your comment!
Please enter your name here