ಇಳಿವಯಸಿನಲ್ಲೂ ಸಂತ್ರಸ್ತರ ಸಂಕಟಕ್ಕೆ ಮಿಡಿದ ಲೀಲಾವತಿ!

ದಾ ಬರಗಾಲದಲ್ಲಿ ತಲ್ಲಣಿಸುತ್ತಾ ಹನಿನೀರಿಗೂ ತತ್ವಾರ ಪಡುವ ಪ್ರದೇಶಗಳನ್ನು ಒಡಲೊಳಗಿಟ್ಟುಕೊಂಡುರುವ ನಾಡು ಉತ್ತರ ಕರ್ನಾಟಕ. ಆದರೀಗ ಅಂಥಾ ಪ್ರದೇಶದ ಬಹುಭಾಗ ಪ್ರವಾಹದಲ್ಲಿ ಮುಳುಗಿ ಬಿಟ್ಟಿದೆ. ಮಹಾರಾಷ್ಟ್ರದ ಮೇಘಸ್ಫೋಟದ ಪರಿಣಾಮವಾಗಿ ಇಲ್ಲಿನ ಜನ ಅಕ್ಷರಶಃ ರೌರವ ನರಕ ಅನುಭವಿಸುತ್ತಿದ್ದಾರೆ. ಅಲ್ಲೀಗ ಮಡುಗಟ್ಟಿರುವ ಪರಿಸ್ಥಿತಿ ನೋಡಿದರೆ ಎಂಥವರಿಗಾದರೂ ಕಣ್ಣಾಲಿಗಳು ತುಂಬಿ ಬರುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲದೇ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಮೂಕರೋಧನೆ ಇಡೀ ಉತ್ತರ ಕರ್ನಾಟಕವನ್ನೇ ಆವರಿಸಿಕೊಂಡು ಬಿಟ್ಟಿದೆ. ಇದೀಗ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡಾ ಹಿರಿಯ ನಟಿ ಲೀಲಾವತಿ ಉತ್ತರ ಕರ್ನಾಟಕದ ಪರಿಸ್ಥಿತಿಗೆ ಮಿಡಿದಿದ್ದಾರೆ.


ಲೀಲಾವತಿ ಉತ್ತರ ಕರ್ನಾಟಕಕ್ಕೆ ಬಂದೊದಗಿರೋ ಜಲಕಂಟಕಕ್ಕೆ ಮರುಗುತ್ತಲೇ, ಅಲ್ಲಿ ಹಸಿವಿನಿಂದ ನರಳಾಡುತ್ತಿರೋ ಪಶುಗಳಿಗೆ ಮೇವು ಖರೀದಿಸಿ ಕಳುಹಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭರ್ತಿ ಒಂದು ಲಾರಿ ಮುಸುಕಿನ ಜೋಳದ ಮೇವನ್ನು ಖರೀದಿಸಿರೋ ಲೀಲಾವತಿ ಅದನ್ನು ಉತ್ತರಕರ್ನಾಟಕಕ್ಕೆ ರವಾನಿಸಿದ್ದಾರೆ. ಈ ಮೂಲಕ ನಾಡಿನ ಮತ್ತೊಂದಷ್ಟು ಮಂದಿಯೂ ಈ ಸಂಕಷ್ಟಕ್ಕೆ ಮಿಡಿದು ಕೈಲಾದ ಸಹಾಯ ಮಾಡಲು ಸ್ಫೂರ್ತಿಯಾಗಿದ್ದಾರೆ. ಈ ಒಳ್ಳೆ ಕೆಲಸಕ್ಕೆ ಲೀಲಾವತಿಯವರ ಪುತ್ರ ವಿನೋದ್ ರಾಜ್ ಕೂಡಾ ಜೊತೆಯಾಗಿದ್ದಾರೆ.


ಈಗ್ಗೆ ದಶಕದ ಹಿಂದೆಯೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ತಲೆದೋರಿತ್ತು. ಆದರೆ ಅದರ ತೀವ್ರತೆ ಈಗಿನಷ್ಟಿರಲಿಲ್ಲ. ಈಗಂತೂ ಇಡೀ ಉತ್ತರ ಕರ್ನಾಟಕ ಹರಸಾಹಸ ಪಟ್ಟು ಮತ್ತೆ ಕಟ್ಟಬೇಕಾದಷ್ಟು ಮಟ್ಟಿಗೆ ಜರ್ಜರಿತಗೊಂಡಿದೆ. ಇಲ್ಲಿನ ಜನರ ಮುಖ್ಯ ಕಸುಬೇ ವ್ಯವಸಾಯ. ಎತ್ತು, ಹಸುಗಳೆಲ್ಲ ಅವರ ಬದುಕಿನ ಭಾಗ. ತಾವು ಅರೆಹೊಟ್ಟೆಯಲ್ಲಿ ಮಲಗಿದರೂ ತಮಗಾಗಿ ದುಡಿಯುವ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸೋದರಲ್ಲಿಯೇ ಇಲ್ಲಿನ ಜನ ತೃಪ್ತಿ ಕಾಣುತ್ತಿದ್ದವರು. ಅಂಥಾ ಜನರೇ ಇಂದು ನಿಲ್ಲಲು ನೆಲೆ, ಉಡಲು ಬಟ್ಟೆ, ಆಹಾರವಿಲ್ಲದೆ ದಿಕ್ಕಾಪಾಲಾಗಿದ್ದಾರೆ. ನೆರೆಯಿಂದ ಬದುಕುಳಿದ ಜಾನುವಾರುಗಳಂತೂ ದಿಕ್ಕೆಟ್ಟು ಸೊರಗಿ ನಿಂತಿವೆ.


ಸಹನೀಯ ಅಂಶವೆಂದರೆ ಇಂಥಾ ಮೂಕ ಪ್ರಾಣಿಗಳಿಗೂ ಸ್ಥಳದಲ್ಲಿರೋ ಸ್ವಯಂ ಸೇವಕರು ನೆರವಾಗುತ್ತಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಿಂದ ಪಶು ಆಹಾರ ಉತ್ತರ ಕರ್ನಾಟಕದತ್ತ ರವಾನೆಯಾಗುತ್ತಿದೆ. ಇಂಥಾ ಮಾನವೀಯ ಮನಸುಗಳ ಕಾರಣದಿಂದಲೇ ರಕ್ಕಸ ಪ್ರವಾಹದಿಂದ ಬದುಕುಳಿದ ಪ್ರಾಣಿಗಳು ಹೊಟ್ಟೆಗಿಲ್ಲದೆ ಸಾಯೋ ನರಕದಿಂದ ಪಾರಾಗುತ್ತಿವೆ. ಹಿರಿಯ ನಟಿ ಲೀಲಾವತಿಯವರ ಮಾನವೀಯ ನಡವಳಿಕೆ ಇನ್ನೂ ಒಂದಷ್ಟು ಮಂದಿ ಮೂಕ ಪ್ರಾಣಿಗಳ ನೆರವಿಗೆ ನಿಲ್ಲಲು ಉತ್ತೇನಜ ನೀಡುವಂತಿದೆ. ಇಳೀವಯಸ್ಸಿನಲ್ಲಿಯೂ ಉತ್ತರಕರ್ನಾಟಕದ ಸಂಕಷ್ಟದ ಬಗ್ಗೆ ಮರುಗಿ ಜಾನುವಾರುಗಳಿಗೆ ಮೇವು ನೀಡಿದ ಲೀಲಾವತಿಯವರ ಮೇಲಿನ ಗೌರವ ಇನ್ನೂ ಇಮ್ಮಡಿಸಿದೆ.

LEAVE A REPLY

Please enter your comment!
Please enter your name here