ನನ್ನಪ್ರಕಾರ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್!

ಪ್ರಿಯಾಮಣಿ ಮತ್ತು ಕಿಶೋರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನಪ್ರಕಾರ ಚಿತ್ರ ಇದೇ ತಿಂಗಳ ಇಪ್ಪತ್ಮೂರರಂದು ಬಿಡುಗಡೆಯಾಗಲಿದೆ. ಈಗಾಗಲೇ ಭಿನ್ನಾತಿ ಭಿನ್ನವಾದ ಪೋಸ್ಟರ್‌ಗಳು ಮತ್ತು ಹಾಡಿನ ಮೂಲಕವೇ ಈ ಸಿನಿಮಾ ಪ್ರೇಕ್ಷಕರು ಕಾತರದಿಂದ ಕಾಯುವಂತೆ ಮಾಡಿ ಬಿಟ್ಟಿದೆ. ಇದೀಗ ನನ್ನಪ್ರಕಾರದ ಟ್ರೈಲರ್ ಬಿಡುಗಡೆಗೊಳಿಸಲು ಚಿತ್ರತಂಡ ಅಣಿಗೊಂಡಿದೆ. ವಿಶೇಷವೆಂದರೆ ಹೊಸಬರ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಲಿದ್ದಾರೆ!


ಇದೇ ಹದಿನೈದನೇ ತಾರೀಕು ಗುರುವಾರದಂದು ನನ್ನಪ್ರಕಾರ ಟ್ರೈಲರ್ ಲಾಂಚ್ ಆಗಲಿದೆ. ಖುದ್ದು ದರ್ಶನ್ ಅವರೇ ಇದನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿದ್ದಾರೆ. ಒಂದು ಸಿನಿಮಾದ ಹಿಂದೆ ಉತ್ಸಾಹಿಗಳ ತಂಡವಿದ್ದರೆ, ಆ ಚಿತ್ರ ಕಮಾಲ್ ಸೃಷ್ಟಿಸೋ ಸೂಚನೆ ಕಂಡರೆ ತಾವೆಷ್ಟೇ ಬ್ಯುಸಿಯಾಗಿದ್ದರೂ ಬೆಂಬಲಿಸೋದು ದರ್ಶನ್ ಅವರ ವ್ಯಕ್ತಿತ್ವ. ಅವರು ಆರಂಭ ಕಾಲದಿಂದಲೂ ಕೂಡಾ ನನ್ನಪ್ರಕಾರ ಸೃಷ್ಟಿಸುತ್ತಾ ಬಂದಿರೋ ಕ್ರೇಜ್ ಅನ್ನವರು ಗಮನಿಸುತ್ತಾ ಬಂದಿದ್ದಾರೆ. ಈ ಸಿನಿಮಾ ಬಗ್ಗೆ ನಿಗಿನಿಗಿಸುತ್ತಿರೋ ನಿರೀಕ್ಷೆಗಳನ್ನು ಕಂಡು ಖುಷಿಗೊಂಡಿದ್ದಾರೆ. ಆದ್ದರಿಂದಲೇ ಅವರು ಟ್ರೈಲರ್ ಲಾಂಚ್ ಮಾಡಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನನ್ನಪ್ರಕಾರದ ಬೆನ್ನಿಗೆ ನಿಲ್ಲುವ ಭರವಸೆಯನ್ನೂ ನೀಡಿದ್ದಾರೆ.


ಇದು ನವ ನಿರ್ದೇಶಕ ವಿನಯ್ ಬಾಲಾಜಿ ಮತ್ತವರ ತಂಡಕ್ಕೆ ಆನೆ ಬಲ ತಂದುಕೊಟ್ಟಿರೋದಂತೂ ನಿಜ. ಈಗಾಗಲೇ ತನ್ನ ಕ್ರಿಯೇಟಿವ್ ಆಲೋಚನೆ, ಗುಣಮಟ್ಟದ ಕೆಲಸ ಕಾರ್ಯಗಳಿಂದಲೇ ವಿನಯ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿದ್ದಾರೆ. ಆದರೆ ಬಿಡುಗಡೆಯ ಹಂತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊಟ್ಟಿರೋ ಸಾಥ್ ಚಿತ್ರತಂಡದಲ್ಲಿದ್ದ ಕೆಲವಾರು ಆತಂಕಗಳನ್ನೂ ದೂರವಾಗಿಸಿದೆ. ನಾಡಿದ್ದು ಹದಿನೈದನೇ ತಾರೀಕಿನಂದು ಚಾಲೆಂಜಿಂಗ್ ಸ್ಟಾರ್ ಕೈಲಿ ಬಿಡುಗಡೆಯಾಗಲಿರೋ ಈ ಚಿತ್ರದ ಟ್ರೈಲರ್‌ನತ್ತಲೇ ಈಗ ಎಲ್ಲರ ಗಮನ ನೆಟ್ಟುಕೊಂಡಿದೆ.


ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರೋ ನನ್ನ ಪ್ರಕಾರ ಆ ಚೌಕಟ್ಟಿಗಾಗಲಿ, ಸಿದ್ಧ ಸೂತ್ಗಳಿಗಾಗಲೀ ಕಟ್ಟುಬಿದ್ದಿರೋ ಚಿತ್ರವಲ್ಲ. ಇದು ಹೊಸಾ ಅಲೆಯ ಚಿತ್ರವಾಗಿ ಸಂಚಲನ ಸೃಷ್ಟಿಸೋದು ಈಗಾಗಲೇ ಖಾತರಿಯಾಗಿದೆ. ಪ್ರಿಯಾಮಣಿ ಮದುವೆಯಾದ ಬಳಿಕ ಈ ಚಿತ್ರದ ಮೂಲಕವೇ ಮತ್ತೆ ವಾಪಾಸಾಗಿದ್ದಾರೆ. ಅವರಿಗೆ ಕಿಶೋರ್, ಮಯೂರಿ ಮುಂತಾದವರೂ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಪ್ರಿಯಾಮಣಿ ಸೇರಿದಂತೆ ಎಲ್ಲರ ಪಾತ್ರಗಳೂ ಕೂಡಾ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದಾರೆ. ಚಿತ್ರತಂಡದ ತುಂಬಾ ಖುಷಿ ತಾಂಡವವಾಡಲು ಮತ್ತೇನು ಬೇಕು?

LEAVE A REPLY

Please enter your comment!
Please enter your name here