ಕಪಟನಾಟಕ ಪಾತ್ರಧಾರಿಯ ರೊಮ್ಯಾಂಟಿಕ್ ಲಿರಿಕಲ್ ಸಾಂಗ್!

ಹುಲಿರಾಯ ಚಿತ್ರದಲ್ಲಿನ ಅಮೋಘ ನಟನೆಯಿಂದ ನಾಯಕ ನಟನಾಗಿ ಗುರುತಿಸಿಕೊಂಡಿರುವವರು ಬಾಲು ನಾಗೇಂದ್ರ. ಅದಕ್ಕೂ ಮುನ್ನ ಕಡ್ಡಿಪುಡಿ ಮುಂತಾದ ಚಿತ್ರಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಬಾಲು ನಾಗೇಂದ್ರ ಇದೀಗ ನಾಯಕ ನಟನಾಗಿಯೇ ಮುಂದುವರೆಯುತ್ತಿದ್ದಾರೆ. ಅವರು ಹುಲಿರಾಯ ನಂತರದಲ್ಲಿ ಕಪಟನಾಟಕ ಪಾತ್ರಧಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಸಿನಿಮಾದ ಲಿರಿಕಲ್ ವೀಡಿಯೋ ಇದೀಗ ಬಿಡುಗಡೆಯಾಗಿದೆ. ಅದೀಗ ವ್ಯಾಪಕ ಮೆಚ್ಚುಗೆಗಳನ್ನೂ ತನ್ನದಾಗಿಸಿಕೊಳ್ಳುತ್ತಿದೆ.


ಕ್ರಿಶ್ ನಿರ್ದೇಶನದ ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಬಾಲು ನಾಗೇಂದ್ರ ಮತ್ತೆ ವಿಶಿಷ್ಟವಾದ ಪಾತ್ರದಲ್ಲಿ ಪ್ರೇಕ್ಷಕರನ್ನು ತಲುಪಲು ರೆಡಿಯಾಗಿದ್ದಾರೆ. ಇದೀಗ ಈ ಚಿತ್ರ ಲಿರಿಕಲ್ ವೀಡಿಯೋ ಮೂಲಕ ಜನರನ್ನು ಸೆಳೆದುಕೊಂಡಿದೆ. ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಳು ಸುಂದ್ರಿ ಎಂಬ ಈ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಸಾಂಗ್ ಈಗ ಟ್ರೆಂಡ್ ಸೆಟ್ ಮಾಡೋ ಲಕ್ಷಣಗಳೊಂದಿಗೆ ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುನ್ನುಗ್ಗುತ್ತಿದೆ.


ನದಾಫ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ವೇನು ಹಸ್ರಳ್ಳಿ ಸಾಹಿತ್ಯವಿದೆ. ಹರಿಚರಣ್ ಶೇಶಾದ್ರಿಯವರ ಕಂಠದಲ್ಲಿ ಮೂಡಿ ಬಂದಿರೋ ಈ ಲಿರಿಕಲ್ ವೀಡಿಯೋ ಹೊಸಾ ಫೀಲ್‌ನೊಂದಿಗೇ ಕೇಳುಗರಿಗೆಲ್ಲ ಕಚಗುಳಿಯಿಡುತ್ತಿದೆ. ಇದರಲ್ಲಿ ಬಾಲು ನಾಗೇಂದ್ರ ಮತ್ತು ಸಂಗೀತ ಭಟ್ ನಾಯಕ ನಾಯಕಿಯರಾಗಿ ಅಷ್ಟೇ ಮೋಹಕವಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಮೂಲಕವೇ ಈ ಚಿತ್ರದ ಕಥೆ ಯಾವ ಬಗೆಯದ್ದೆಂಬ ಕುತೂಹಲವೂ ಮೂಡಿಕೊಂಡಿದೆl


ಬಾಲು ನಾಗೇಂದ್ರ ಎಂಥಾ ಪಾತ್ರಗಳನ್ನಾದರೂ ನುಂಗಿಕೊಂಡು ನಟಿಸಬಲ್ಲ ಪ್ರತಿಭಾವಂತ ನಟ. ರಂಗಭೂಮಿಯಲ್ಲಿ ಪಳಗಿಕೊಂಡಿರೋ ಬಾಲು ಪಾಲಿಗೆ ನಟನೆ ಲೀಲಾಜಾಲ. ಈತ ಎಂಥಾ ಅದ್ಭುತ ನಟ ಅನ್ನೋದಕ್ಕೆ ಅರವಿಂದ ಕೌಶಿಕ್ ನಿರ್ದೇಶನದ ಹುಲಿರಾಯ ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಮೇಲುನೋಟಕ್ಕೆ ಅವರು ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಆಟೋ ಡ್‌ರೈವರ್ ಆಗಿ ನಟಿಸಿರೋ ಲಕ್ಷಣಗಳು ಕಾಣಿಸುತ್ತವೆ. ಆದರೆ ಇಲ್ಲಿನ ಕಥೆ ಭಿನ್ನವಾಗಿದೆಯಂತೆ. ನಿರ್ದೇಶಕ ಕ್ರಿಶ್ ಪಾಲಿಗೂ ಇದು ಮೊದಲ ಚಿತ್ರ. ಅಷ್ಟಕ್ಕೂ ಹುಲಿರಾಯ ಚಿತ್ರದ ನಂತರದಲ್ಲಿ ಬಾಲು ನಾಗೇಂದ್ರರ ಮುಂದೆ ಹಲವಾರು ಅವಕಾಶಗಳು ಬಂದಿದ್ದವು. ಕಥೆಯನ್ನು ಆಯ್ಕೆ ಮಾಡಿಕೊಳ್ಳೋದರಲ್ಲಿಯೂ ಚೂಸಿಯಾಗಿರೋ ಅವರು ಕಪಟನಾಟಕ ಪಾತ್ರಧಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಿದ್ದ ಮೇಲೆ ಈ ಕಥೆ ಡಿಫರೆಂಟಾಗಿದೆ ಎಂದೇ ಅರ್ಥ.

LEAVE A REPLY

Please enter your comment!
Please enter your name here