ಮಿಲ್ಕಿಬ್ಯೂಟಿ ಮನಸು ಕದ್ದ ಹುಡುಗ ಯಾರು?

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಾಯಕಿಯಾಗಿ ಮೆರೆದಿದ್ದಾಕೆ ತಮನ್ನಾ ಭಾಟಿಯಾ. ಆದರೆ ಅದೇಕೋ ಇತ್ತೀಚಿನ ದಿನಗಳಲ್ಲಿ ಮಿಲ್ಕಿಬ್ಯೂಟಿಯ ಮುಖದಲ್ಲಿ ಸೊರಗಿದ ಕಳೆ ರಾರಾಜಿಸುತ್ತಿದೆ. ನಟನೆಯ ಕಸುವ, ಸೌಂದರ್ಯವಿದ್ದರೂ ತಮನ್ನಾ ಮುಂದೀಗ ಅವಕಾಶಗಳ ಕೊರತೆಯಿದೆ. ವರ್ಷಾಂತರಗಳ ಹಿಂದೆ ಈಕೆಯ ಮುಂದೆ ಒಂದಿಡೀ ದಕ್ಷಿಣ ಭಾರತೀಯ ಚಿತ್ರರಂಗದ ನಿರ್ಮಾಪಕರು ಕಾಲ್‌ಶೀಟ್‌ಗಾಗಿ ಗಿಜಿಗುಡುತ್ತಾ ಕಾಯುತ್ತಿದ್ದರು. ಆದರೀಗ ಅದೆಲ್ಲವೂ ತಮನ್ನಾ ಪಾಲಿಗೆ ಗತವೈಭವದಂತಾಗಿ ಬಿಟ್ಟಿವೆ. ತನ್ನ ಸ್ನಿಗ್ಧ ಸೌಂದರ್ಯದ ಮೂಲಕವೇ ಮೆರೆದಿದ್ದ ಈಕೆಯೀಯ ಖಾಲಿ ಕೈಲಿ ನಿಂತ ಬಹುತೇಕ ಯುವಕ ಯುವತಿಯರ ಕಟ್ಟಕಡೆಯ ನಿಲ್ದಾಣದಂಥಾ ಮದುವೆಯತ್ತ ಮನಸು ಮಾಡಿದ್ದಾಳೆ!


ತಮ್ಮನ್ನಾ ಭಾಟಿಯಾಳ ಮದುವೆ ಮ್ಯಾಟರಿನ ಬಗ್ಗೆ ಆಕೆಯ ಹೆತ್ತವರಿಗಿಂತ ಹೆಚ್ಚಾಗಿ ಮಾಧ್ಯಮಗಳು, ಅಭಿಮಾನಿಗಳೇ ತಲೆಕೆಡಿಸಿಕೊಂಡಂತಿತ್ತು. ಇದರ ಪರಿಣಾಮವಾಗಿ ಖುದ್ದು ತಮನ್ನಾಗೇ ತಲೆಕೆಟ್ಟು ಹೋಗುವಂಥಾ ರೂಮರ್‌ಗಳೂ ದಂಡಿ ದಂಡಿಯಾಗಿಯೇ ಹರಿದಾಡಿದ್ದವು. ಒಂದು ಸಲ ಈಕೆ ಕ್ರಿಕೆಟರ್ ಜೊತೆ ಲವ್ವಲ್ಲಿ ಬಿದ್ದಿದ್ದಾಳೆಂಬ ಸುದ್ದಿ ಹರಡಿದರೆ ಮತ್ತೊಂದು ಸಲ ಅಮೆರಿಕಾ ವೈದ್ಯನೊಂದಿಗೆ ಮದುವೆಯಾಗಲಿದ್ದಾಳೆಂಬ ರೂಮರ್ ಹಬ್ಬಿಕೊಳ್ಳುತ್ತಿತ್ತು. ಇಂಥಾ ಸುದ್ದಿಗಳು ಮೇರೆ ಮೀರುತ್ತಲೇ ಪ್ರತ್ಯಕ್ಷಳಾಗಿ ಇದೆಲ್ಲ ಸುಳ್ಳು ಎಂಬ ಸ್ಟೇಟ್‌ಮೆಂಟ್ ಕೊಟ್ಟು ತಮನ್ನಾ ಮಾಯವಾಗುತ್ತಿದ್ದಳು. ಇದೀಗ ಹೆಚ್ಚೂಕಮ್ಮಿ ಚಿತ್ರರಂಗದಿಂದಲೇ ಮಾಯವಾಗೋ ಹಂತದಲ್ಲಿರುವ ತಮನ್ನಾ ತಾನೇ ತನ್ನ ಮದುವೆ ಬಗ್ಗೆ ಹೇಳಿಕೊಂಡಿದ್ದಾಳೆ.


ಆ ಪ್ರಕಾರವಾಗಿ ಹೇಳೋದಾದರೆ ತಮನ್ನಾ ಮದುವೆಯಾಗಲು ಮನಸು ಮಾಡಿದ್ದಾಳೆ ಹಾಗಂತ ಆಕೆ ಯಾರನ್ನೂ ಪ್ರೀತಿಸುತ್ತಿಲ್ಲ. ಹುಡುಗನನ್ನು ಹುಡುಕೋ ಜವಾಬ್ದಾರಿಯನ್ನು ಹೆತ್ತವರಿಗೆ ಒಪ್ಪಿಸಿರೋದಾಗಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಮನ್ನಾ ಹೇಳಿಕೊಂಡಿದ್ದಾಳೆ. ಇದುವರೆಗೂ ಮದುವೆ ವಿಚಾರ ತೆಗೆದಾಗ ಕೊಸರಾಡುತ್ತಿದ್ದ ಮಗಳು ಏಕಾಏಕಿ ಗ್ರೀನ್ ಸಿಗ್ನಲ್ ನೀಡಿದ್ದರಿಂದ ತಮನ್ನಾ ಅಮ್ಮ ರಜನಿ ಭಾಟಿಯಾ ಖುಷಿಗೊಂಡಿದ್ದಾರಂತೆ. ಕೊಂಚ ಗ್ಯಾಪು ಕೊಟ್ಟರೆ ಮಗಳೆಲ್ಲಿ ಮನಸು ಬದಲಿಸುತ್ತಾಳೋ ಎಂಬ ಆತಂಕದಿಂದ ತಕ್ಷಣವೇ ಅಳಿಯನನ್ನು ಹುಡುಕೋ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರಂತೆ. ಅಂತೂ ಶೀಗ್ರದಲ್ಲಿಯೇ ಮಿಲ್ಕಿ ಬ್ಯೂಟಿಯ ಕಲ್ಯಾಣದ ಸುದ್ದಿ ಅಧಿಕೃತವಾಗಿಯೇ ಹೊರಬೀಳಲಿದೆ.

LEAVE A REPLY

Please enter your comment!
Please enter your name here