ರಶ್ಮಿಕಾ ಮಂದಣ್ಣನಿಗೀಗ ಕೊಬ್ಬು ಕರಗುವ ಸಮಯ!

ನಾವೇನು ಕೊಡುತ್ತೀವೋ, ಏನೇನು ಆಲೋಚಿಸುತ್ತೀವೋ ಅದೇ ನಮಗೆ ವಾಪಾಸು ಬರುತ್ತದೆಂಬುದು ‘ಕರ್ಮ’ ಸಾರ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೀಗ ಹಾಗೆ ಕೊಟ್ಟದ್ದನ್ನೇ ವಾಪಾಸು ಪಡೆಯೋ ಕಾಲ ಶುರುವಾಗಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಪಕ್ಕದ ರಾಜ್ಯ ತಮಿಳುನಾಡಿನ ದಿಕ್ಕಿನಿಂದ ತೇಲಿಬಂದಿರೋ ಒಂದು ಸುದ್ದಿ. ಇದೇ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಚಿಗಿತುಕೊಂಡು ತೆಲುಗಿಗೆ ತೂರಿಕೊಂಡಿದ್ದಳು. ಅಲ್ಲಿಂದ ಸೀದಾ ಹೋಗಿ ತಮಿಳುನಾಡಲ್ಲಿ ಲ್ಯಾಂಡ್ ಆದಾಕೆ ನೆಲ ಕಾಣದ ಸ್ಥಿತಿ ತಲುಪಿಕೊಂಡಿದ್ದಳು. ಇಂಥಾ ಸ್ಟೇಜು ಮೆರೆಯಬಾರದ ರೀತಿ ಮೇರೆಸುತ್ತೆ. ಆಡಬಾರದ ಆಟ ಆಡಿಸುತ್ತೆ ಮತ್ತು ಗೊತ್ತೇ ಆಗದಂತೆ ಧೊಪ್ಪನೆ ನೆಲಕ್ಕೆಸೆದು ಬಿಡುತ್ತೆ. ಸದ್ಯ ತಮಿಳುನಾಡಿನ ಕಡೆಯಿಂದ ಬಂದಿರೋ ಸುದ್ದಿ ದಿಟವೇ ಆಗಿದ್ದರೆ ಆಕಾಶದಲ್ಲಿ ತೇಲಾಡುತ್ತಿದ್ದ ರಶ್ಮಿಕಾ ಈಗ ನೆಲಕ್ಕಿಳಿದಿದ್ದಾಳೆ!

ವಿಜಯ್ ದೇವರಕೊಂಡನಿಗೆ ರಶ್ಮಿಕಾ ನಾಯಕಿಯಾಗಿದ್ದ ಗೀತಾ ಗೋವಿಂದಂ ಚಿತ್ರ ಗೆಲ್ಲುತ್ತಲೇ ತೆಲುಗಿನಲ್ಲಿಯೂ ಕಿರಿಕ್ ಹುಡುಗಿಗೆ ಭರ್ಜರಿ ಗೆಲುವೇ ಸಿಕ್ಕಿತ್ತು. ಅದರ ಕಿಕ್ಕು ಯಾವ ಪರಿ ರಶ್ಮಿಕಾ ನೆತ್ತಿಗೇರಿಕೊಂಡಿತ್ತೆಂದರೆ, ತನ್ನನ್ನು ನಟಿಯಾಗಿ ರೂಪಿಸಿದ ಕನ್ನಡವನ್ನೇ ಕಡೆಗಣಿಸುವಷ್ಟರ ಮಟ್ಟಿಗೆ ಉದ್ಧಟ ವರ್ತನೆ ಆಕೆಯ ಕಡೆಯಿಂದ ತೋರಿ ಬರಲಾರಂಭಿಸಿತ್ತು. ಅದರ ಬೆನ್ನಿಗೇ ಮತ್ತದೇ ವಿಜಯ್ ದೇವರಕೊಂಡನ ಜೊತೆ ಡಿಯರ್ ಕಾಮ್ರೆಡ್ ಚಿತ್ರದಲ್ಲಿಯೂ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಳು. ಈ ಚಿತ್ರ ಹೇಳಿಕೊಳ್ಳುವಷ್ಟು ಯಶ ಕಾಣದಿದ್ದರೂ ಮಹೇಶ್ ಬಾಬುವಿನಂಥಾ ಸೂಪರ್ ಸ್ಟಾರ್ ಚಿತ್ರದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಳು. ಇದರ ಜೊತೆಗೇ ಕಾರ್ತಿಗೆ ಜೋಡಿಯಾಗಿ ತಮಿಳು ಚಿತ್ರವೊಂದರಲ್ಲಿ ನಟಿಸೋ ಅವಕಾಶ ಸಿಕ್ಕಿದ್ದೇ ಕೊಡಗಿನ ಹುಡುಗಿಗೆ ಕೊಬ್ಬೆಂಬುದು ನಖಶಿಖಾಂತ ಹರಡಿಕೊಂಡಿತ್ತು.


ತಮಿಳಿನಲ್ಲಿ ಕಾರ್ತಿಗೆ ನಾಯಕಿಯಾಗೀಓ ಅವಕಾಶ ಗಿಟ್ಟಿಸಿಕೊಂಡಿದ್ದ ಬೆನ್ನಲ್ಲೇ ರಶ್ಮಿಕಾ ಮತ್ತೊಂದು ಬಾಂಬು ಸಿಡಿಸಿದ್ದಳು. ಅದು ತಾನು ಇಳಯದಳಪತಿ ವಿಜಯ್‌ಗೆ ನಾಯಕಿಯಾಗಿ ನಟಿಸುತ್ತಿರೋದಾಗಿ ರಶ್ಮಿಕಾ ಸುದ್ದಿ ಹರಡಿದ್ದ ವಿಷಯ. ಅಷ್ಟಕ್ಕೂ ವಿಜಯ್‌ಗೆ ನಾಯಕಿಯಾಗೋದೆಂದರೆ ಸಾಮಾನ್ಯ ಸಂಗತಿಯೇನಲ್ಲ. ತಮಿಳಿನಲ್ಲಿನ್ನೂ ಒಂದು ಸಿನಿಮಾ ತೆರೆಗಾಣೋ ಮುನ್ನವೇ ಈ ಹುಡುಗಿ ಆ ಮಟ್ಟಕ್ಕೇರಿದಳೆಂದರೆ ಅಚ್ಚರಿ ಹುಟ್ಟದಿರುತ್ತಾ? ಅದೇ ರೀತಿ ವಿಜಯ್‌ಗೆ ನಾಯಕಿಯಾಗೋದಾಗಿ ಹೇಳಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ ರಶ್ಮಿಕಾ ಆ ಬಗ್ಗೆ ಹೇಳಿಕೊಂಡಿದ್ದೇನು, ಥೇಟು ವಿಜಯ್ ಸ್ಟೈಲಿನಲ್ಲಿಯೇ ಪೋಸು ಕೊಟ್ಟು ಲೈಕು ಗಿಟ್ಟಿಸಿಕೊಂಡಿದ್ದೇನು… ಆದರೀಗ ಅದೆಲ್ಲವೂ ಉಲ್ಟಾ ಹೊಡೆದಿರೋ ಸುದ್ದಿ ಹೊರಬಿದ್ದಿದೆ. ಇದು ನಿಜವೇ ಆಗಿದ್ದರೆ ರಶ್ಮಿಕಾ ಮಂದಣ್ಣನಿಗೆ ಖಂಡಿತಾ ಕೊಬ್ಬು ಕರಗುವ ಸಮಯ ಶುರುವಾಗಿದೆ!


ರಶ್ಮಿಕಾ ನಾಯಕಿಯಾಗೋದಾಗಿ ಹೇಳಿಕೊಂಡಿದ್ದದ್ದು ವಿಜಯ್ ಅವರ ಅರವತ್ತನಾಲಕ್ಕನೇ ಚಿತ್ರಕ್ಕೆ. ಮಹಾನಗರಂ ಎಂಬ ಹಿಟ್ ಸಿನಿಮಾ ಕೊಟ್ಟಿದ್ದ ಲೋಕೇಶ್ ಕನಗರಾಜನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಇದೀಗ ತಾರಾಗಣವನ್ನೆಲ್ಲ ತುಂಬಿಕೊಳ್ಳುತ್ತಿರೋ ಕನಗರಾಜನ್ ನಾಯಕಿಯ ಆಯ್ಕೆಯನ್ನೂ ಪೂರ್ಣಗೊಳಿಸಿದ್ದಾರಂತೆ. ಹಾಗಂತ ರಶ್ಮಿಕಾ ನಾಯಕಿಯಾಗಿರೋದು ಅಧಿಕೃತವಾಗಿ ದೃಢಪಟ್ಟಿದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರೋದು ಧೋನಿ ಖ್ಯಾತಿಯ ಬಾಲಿವುಡ್ ಚೆಲುವೆ ಕಿಯಾರಾ ಅಡ್ವಾಣಿ. ತೆಲುಗಿನಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಭರತ್ ಅನೇ ನೇನು ಚಿತ್ರದಲ್ಲಿ ನಟಿಸೋ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಖ್ಯಾತಿ ಪಡೆದುಕೊಂಡಿದ್ದ ಕಿಯಾರಾ ವಿಜಯ್‌ಗೆ ಜೋಡಿಯಾಗಿರೋದು ಬಹುತೇಖ ಖಚಿತಗೊಂಡಿದೆ. ಅಲ್ಲಿಗೆ ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಲ್ಲ ಎಂಬ ವಿಚಾರವೂ ಸ್ಪಷ್ಟವಾಗಿದೆ.


ಲೋಕೇಶ್ ಕನಗರಾಜನ್ ಕಥೆಗೆ ಸೂಟ್ ಆಗೋ ರೀತಿ ಕಿಯಾರಾಳನ್ನು ಆಯ್ಕೆ ಮಾಡಿದ್ದಾರಂತೆ. ಈ ಹಿಂದೆ ಈ ಸಾಲಿನಲ್ಲಿ ರಕುಲ್ ಪ್ರೀತ್ ಸಿಂಗ್, ರಶ್ಮಿಕಾ ಮುಂತಾದವರ ಹೆಸರುಗಳು ತೇಲಿ ಬಂದಿದ್ದವು. ಕಡೆಗೆ ರಶ್ಮಿಕಾ ನಾಯಕಿಯಾಗೋದು ಗ್ಯಾರೆಂಟಿ ಎಂಬಂಥಾ ಹೈಪುಗಳೂ ಸೃಷ್ಟಿಯಾಗಿದ್ದವು. ಅದಕ್ಕೆ ಖುದ್ದು ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಕೊಟ್ಟಿದ್ದ ಪೋಜೂ ಕೂಡ ಪ್ರಧಾನ ಕಾರಣವಾಗಿತ್ತು. ಆದರೆ ರಶ್ಮಿಕಾ ಬದಲಿಗೆ ನಿರ್ದೇಶಕರು ಕಿಯಾರಾಳನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ವಿಜಯ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ರಶ್ಮಿಕಾಗೆ ಭಾರೀ ಮುಖಭಂಗವಾದಂತಾಗಿದೆ. ಈ ಮೂಲಕ ತಮಿಳಿನಲ್ಲಿ ಧಾರಾಕಾರವಾಗಿ ಮಾತಾಡುತ್ತಾ ತನಗೆ ಕನ್ನಡ ಬರೋದಿಲ್ಲ ಅಂತ ನುಲಿದಿದ್ದ ರಶ್ಮಿಕಾಗೆ ಪಕ್ಕಾ ತಮಿಳ್ ಸ್ಟೈಲಿನ ಮಾಂಜಾ ಬಿದ್ದಂತಾಗಿದೆ. ಅಲ್ಲಿಗೆ ರಶ್ಮಿಕಾ ಮಂದಣ್ಣಗೆ ಕೊಬ್ಬು ಕರಗುವ ಸಮಯವ ಶುರುವಾಗಿದೆ ಅನ್ನೋದೂ ಪಕ್ಕಾ ಆದಂತಾಗಿದೆ!

LEAVE A REPLY

Please enter your comment!
Please enter your name here