ನೀನಿರದ ಮೊದಲ ಶ್ರಾವಣ ಮತ್ತು ಎಂದೂ ಮುಗಿಯದ ಮೌನ…

[adning id="4492"]

ಹುಡುಗಾ,
ಜೊತೆಯಾಗಿ ನಡೆದಾಡುತ್ತಿದ್ದ ದಿನಗಳಲ್ಲಿ ನನ್ನ-ನಿನ್ನ ನಡುವೆ ಈ ರೀತಿಯದ್ದೊಂದು ಪ್ರಪಾತ ಸೃಷ್ಟಿಯಾಗುತ್ತದೆಂದು ಖಂಡಿತಾ ಅಂದುಕೊಂಡಿರಲಿಲ್ಲ ಕಣೋ. ಪ್ರಾಯಶಃ ನೀನೂ ಅಂದುಕೊಂಡಿರಲಿಕ್ಕಿಲ್ಲ. ಇದರ ಬಗ್ಗೆ ನೀನೇನಂದುಕೊಂಡಿದ್ದೀಯೋ, ಅದೆಷ್ಟು ನೊಂದುಕೊಂಡಿದ್ದೀಯೋ ಗೊತ್ತಿಲ್ಲ. ಆದರೆ, ನನ್ನೊಳಗೂ ನೋವಿದೆ. ಚೂರು ಎಚ್ಚರ ತಪ್ಪಿದರೂ ಕಟ್ಟೆಯೊಡೆದು ಬಿಡುವಂಥಾ ದುಃಖವಿದೆ. ಅದೆಲ್ಲವೂ ಮಡುಗಟ್ಟಿದಂಥಾ ಮೌನವಿದೆ. ಇದೆಲ್ಲ ನನ್ನ ಪಾಲಿಗೆ ಎಂದಿಗೂ ಮುಗಿಯದ ಪಾಡು… ಹೆಚ್ಚೂ ಕಡಿಮೆ ನಿನ್ನ ಸ್ಥಿತಿಯೂ ಹೀಗೆಯೇ ಇದ್ದಿರಬಹುದೇನೋ…


ನಾನೀಗ ಬೇರೆಯವರ ಸ್ವತ್ತು. ಎದೆಯೊಳಗೆ ಆಸೆ, ಕನಸು, ಭರವಸೆಗಳೆಲ್ಲದರ ದೀಪವಾರಿದ ಕಗ್ಗತ್ತಲು ತುಂಬಿಕೊಂಡವಳು. ಆದರೆ ಈ ಮನೆಯವರಿಗೆ ನಾನೇ ಬೆಳಕಾಗುತ್ತೇನೆಂಬ ನಿರೀಕ್ಷೆ. ನನ್ನವನ ಪಾಲಿಗೆ ನಾನು ಇದ್ದಕ್ಕಿದ್ದಂತೆ ಸಿಕ್ಕ ಪುಟ್ಟಗೌರಿ. ಇವನು ವಿಪರೀತ ಪ್ರೀತಿಸ್ತಾನೆ, ಮುದ್ದುಗರೆಯುತ್ತಾನೆ. ಕೆಲವೊಮ್ಮೆ ಅವನ ಮಡಿಲಿನಿಂದ ಕೊಸರಿಕೊಂಡು ಎದ್ದು ಓಡಿ ಬಿಡೋಣ ಎಂಬಷ್ಟು ರೇಜಿಗೆ ಹುಟ್ಟುತ್ತದೆ. ಪಾಪ, ಅವನದ್ದೇನು ತಪ್ಪು, ನನ್ನ ಕರ್ಮಕ್ಕೆ ಅವನೇನು ಮಾಡಿಯಾನು ಅಂತೆಲ್ಲ ಮನಸು ಗದರುತ್ತದೆ. ನಾನವನ ಮಡಿಲಲ್ಲಿ ಮುದುರಿ ಕೂರುತ್ತೇನೆ. ಆದರೆ, ನನ್ನ ಪಾಡು ಯಾರಿಗೂ ಅರ್ಥವಾಗೋದಿಲ್ಲ. ಅರ್ಥವಾದರೂ ಅನಾಹುತವಲ್ಲದೆ ಮತ್ತೇನು ಘಟಿಸೀತು ಹೇಳು?


ಮೊನ್ನೆ ಅಪ್ಪ ಬಂದಿದ್ರು. ಅದು ತನ್ನ ನೋವುಗಳನ್ನೆಲ್ಲ ನುಂಗಿಕೊಂಡು ನನ್ನ ಸುಖವನ್ನಷ್ಟೇ ಬಯಸಿದ ಜೀವ. ಅದು ನನ್ನಿಂದ ನಿರೀಕ್ಷಿಸಿದ್ದು ಕೂಡ ನಗು ಮತ್ತು ಪ್ರೀತಿಯನ್ನಷ್ಟೆ. ದೌರ್ಭಾಗ್ಯ ನೋಡು, ಅದೇ ಈಗ ನನ್ನ ಸ್ವತ್ತಲ್ಲ. ಅಪ್ಪನಿಗೆ ಅದನ್ನೂ ಕೊಡಲಾಗದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ. ಆದುದರಿಂದಲೇ ಅಪ್ಪನನ್ನು ಕಂಡ ಸಂಭ್ರಮಕ್ಕೆ ಕುಣಿದಾಡುತ್ತಾ ಹೋಗಿ ಮಾತಾಡಿಸಿದೆ. ಆ ಕ್ಷಣ ಅಪ್ಪನ ಮುಖದಲ್ಲಿ ಮಗಳು ಗಂಡನ ಮನೆಯಲ್ಲಿ ಸುಖವಾಗಿ, ಖುಷಿಯಾಗಿ ಬದುಕುತ್ತಿದ್ದಾಳೆಂಬ ನೆಮ್ಮದಿ ಕುಣಿದಾಡುತ್ತಿತ್ತು. ಆ ಘಳಿಗೇಲಿ, ಅಪ್ಪನ ಮುಖದಲ್ಲಿ ಆ ನೆಮ್ಮದಿಯನ್ನು ಜೋಪಾನವಾಗಿಡುವುದಕ್ಕಾದರೂ ಬದುಕಿರಬೇಕಂತ ಗಾಢವಾಗಿ ಅನ್ನಿಸಿತು. ಅಪ್ಪ ಬಂದಿದ್ದದ್ದು ನನ್ನನ್ನು ತವರು ಮನೆಗೆ ಕರೆದುಕೊಂಡು ಹೋಗೋದಕ್ಕೆ. ನಿಜವಾಗಿ ಆಶಾಢಕ್ಕೆ ತೌರಿಗೆ ಕರೆದುಕೊಂಡು ಹೋಗೋದು ವಾಡಿಕೆ. ಆದರೆ ನಂಗೆ ಶಾವಣ ಅಂದ್ರೆ ಇಷ್ಟ ಅಂತಲೇನೋ… ಆಗಲೇ ಕಾಲ ಕೂಡಿ ಬಂದಿತ್ತು. ನಿಜ ಹೇಳಬೇಕೆಂದರೆ ಅದೆಷ್ಟೋ ತಿಂಗಳುಗಳಿಂದ ಮನಸಾರೆ ಖುಷಿ ಪಟ್ಟಿದ್ದು ಆ ದಿನ ಮಾತ್ರ.


ಹಾಗೆ ತೌರಿಗೆ ಬಂದು ಈಗ ಅಪ್ಪ-ಅಮ್ಮ, ತಮ್ಮ-ತಂಗಿಯ ಜೊತೆಗೆ ಅದೇ ರೀತಿಯ ಖುಷಿಯಲ್ಲಿದ್ದೇನೆ. ಈ ಶ್ರಾವಣ ಅಂದ್ರೆ ಮೊದಲಿನಿಂದ್ಲೂ ನಂಗೆ ಇಷ್ಟ. ಕೊಂಚ ಬಿಸಿಲು, ಮಳೆ, ಕುಳಿರ್ಗಾಳಿಗಳ ಕಲಸುಮೇಲೋಗರದ ಹಾಗಿರುವ ಶ್ರಾವಣ ಬುದ್ಧಿ ತಿಳಿದಾಗಿನಿಂದಲೂ ನಂಗಿಷ್ಟ. ಅದನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಇಷ್ಟವಾಗುವಂತೆ ಮಾಡಿದ್ದದ್ದು ನಿನ್ನ ಆಗಮನ. ಅದೆಷ್ಟು ಶ್ರಾವಣದ ಸಂಜೆಗಳಲ್ಲಿ ಕೈ ಕೈ ಹಿಡಿದು ಸುತ್ತಾಡಿದ್ದೇವೋ… ಅದೇನೇನು ಕನಸು ಹಂಚಿಕೊಂಡಿದ್ದೆವೋ… ಬಹುಶಃ ನಮ್ಮಿಬ್ಬರ ಸಂಭ್ರಮ ಕಂಡು ವಿಧಿಗೂ ಹೊಟ್ಟೆಕಿಚ್ಚಾಗಿ ಅದೆಲ್ಲವನ್ನೂ ಬರೀ ನೆನಪಾಗಿಸಿ ಬಿಟ್ಟಿದೆ.


ಅದೆಲ್ಲವೂ ಈಗ ಒತ್ತರಿಸಿಕೊಂಡಂತೆ ನೆನಪಾಗುತ್ತಿದೆ. ಆಗ ಸುತ್ತಾಡಿದ ಜಾಗೆಗಳಲ್ಲೆಲ್ಲಾ ಒಂದು ರೌಂಡು ಹೊಡೆಯಬೇಕೆನಿಸುತ್ತೆ. ಒಬ್ಬಳೇ, ನಾನೊಬ್ಬಳೇ ಅಷ್ಟೂ ಜಾಗವನ್ನು ಸುತ್ತಬೇಕು. ಆ ಮಧುರ ಕ್ಷಣಗಳನ್ನು ನೆನೆದು ಅಲ್ಲಿಯೇ ಬಿಕ್ಕಳಿಸಬೇಕು. ಹಾಗಾದರೂ ಎದೆಯೊಳಗೆ ಮಂಜುಗಟ್ಟಿದಂತಿರುವ ದುಃಖ ತೊಳೆದು ಹೋಗಿ ನಿರಾಳವಾದೀತೇನೋ ಎಂಬ ಆಸೆ. ಆದುದರಿಂದಲೇ ನಿನ್ನೆ ತಮ್ಮ-ತಂಗಿಯ ಕಣ್ಣು ತಪ್ಪಿಸಿ ಅಮ್ಮಂಗೆ ಮಾತ್ರ ಹೇಳಿ ನಾನೊಬ್ಬಳೇ ನಮ್ಮ ಫೇವರಿಟ್ ಪ್ಲೇಸುಗಳನ್ನೆಲ್ಲ ಸುತ್ತಾಡಿದೆ. ಹಾಗೆ ಸುತ್ತಾಡುವಾಗ ನಮ್ಮದೇ ಕನಸು, ಸಂಭ್ರಮ, ಮಾತುಗಳೆಲ್ಲವೂ ಮರ ಗಿಡಗಳ ರೆಂಬೆ ಕೊಂಬೆಗಳಲ್ಲಿ ನಿತ್ರಾಣವಾಗಿ ನೇತು ಬಿದ್ದಿವೆಯೇನೋ ಅನ್ನಿಸ್ತಿತ್ತು. ದುಃಖ ಉಮ್ಮಳಿಸಿದಾಗ ಮನಸಾರೆ ಅತ್ತು ನಿರಾಳವಾದೆ.


ಆ ಹೊತ್ತಿನಲ್ಲಿ ನೀನೂ ಸಹ ಹೀಗೆಯೇ ಒಂದು ರೌಂಡು ಬಂದು ಎದುರಾಗಬಾರದಿತ್ತೇ ಎಂಬ ಬಯಕೆ. ಹಾಗೆ ಹಠಾತ್ತಾಗಿ ನೀನೆದರು ನಿಂತರೆ ನಿನ್ನನ್ನು ಎದುರಿಸೋದು ಹೇಗೆಂಬ ಭಯ. ಆ ತಾಕಲಾಟದಲ್ಲಿಯೇ ಮನೆಗೆ ಮರಳಿದೆ. ಅಷ್ಟು ಹೊತ್ತು ಎಲ್ಲಿ ಹೋಗಿದ್ದಿ ಅಂತ ಅಮ್ಮ ಎನ್‌ಕ್ವೈರಿ ಮಾಡಿದ್ಲು. ಅಪ್ಪ ಏನೂ ಅನ್ನಲಿಲ್ಲ. ಈ ದಿನ ಮತ್ತೆ ಅಲ್ಲೆಲ್ಲಾ ಮತ್ತೊಮ್ಮೆ ಸುತ್ತಾಡಬೇಕೆನ್ನಿಸಿತ್ತು. ಈ ಶ್ರಾವಣದ ಸಂಜೆಯಲ್ಲಿ ಮತ್ತೆ ಮನಸ್ಸು ಹುಚ್ಚೇಳಲಾರಂಭಿಸಿತ್ತು. ಅಲ್ಲಿ ಯಾಕೋ ಒಂದೇ ಒಂದು ಸಾರಿ ನಿನ್ನ ನೋಡಬೇಕೆಂಬ ಆಸೆ. ನಿಧಾನಕ್ಕೆ ಅಡುಗೆ ಮನೆಯಲ್ಲಿದ್ದ ಅಮ್ಮಂಗೊಂದು ಅಪ್ಲಿಕೇಷನ್ನು ಹಾಕಿದೆ. ಅಮ್ಮ ‘ನೆನ್ನೆ ಸುತ್ತಾಡಿದ್ದಕ್ಕೆ ರಾತ್ರಿ ಪೂರ ಕೆಮ್ತಿದ್ದಿ, ಹೊರ‍್ಗೆಲ್ಲಾ ಥಂಡಿ, ವಾತಾವರಣ ಸರಿಯಿಲ್ಲ. ಹಂಗೆಲ್ಲ ಹೊರಗ್ ಹೋಗ್ಬೇಡ್ವೇ ಪುಟ್ಟೀ’ ಅಂತ ಪ್ರೀತಿಯಿಂದಲೇ ಗದರಿದ್ಲು. ಅದಕ್ಕೆ ಎದುರಾಡಲಾಗದೆ ಮನೆಯ ಜಗುಲಿಗೆ ಮರಳಿ ಮತ್ತೆ ರೂಮಿನತ್ತ ಹೊರಳಿಕೊಂಡೆ.


ಹಾಗೆ ಎದೆಯ ಭಾರ ಇಳಿಸಿಕೊಳ್ಳಲೆಂದೇ ಇದನ್ನೆಲ್ಲ ಬರೆದೆ. ಜೊತೆಯಾಗಿದ್ದಾಗಲೂ ಅಷ್ಟೆ. ಕೆಲವೊಮ್ಮೆ ನಾನು ಅದೇನೇನೋ ಮಾತಾಡುತ್ತಲೇ ಇರುತ್ತಿದ್ದೆ. ಆದರೆ ನೀನು ಕೇಳಿಸಿಕೊಳ್ಳ್ಳುವವನಂತೆ ನಟಿಸುತ್ತಾ ಕನಸಿನ ಲೋಕದಲ್ಲಿ ಕಳೆದು ಹೋಗ್ತಿದ್ದೆ. ಬಹುಶಃ ಆಗ ನಿನ್ನ ಕನಸುಗಳಲ್ಲಿ ನಾನೇ ಪೂರ್ತಿ ತುಂಬಿಕೊಂಡಿರುತ್ತಿದ್ದೆನೇನೋ… ಅದು ಗೊತ್ತಿದ್ದರೂ ನಾನು ಮಾತ್ರ ನಾನ್‌ಸ್ಟಾಪಾಗಿ ಮಾತಾಡುತ್ತಲೇ ಇರುತ್ತಿದ್ದೆ. ಈಗಲೂ ನೀನಿದನ್ನು ಓದುತ್ತೀಯೆಂಬುದು ಒತ್ತಟ್ಟಿಗಿರಲಿ, ನಿನಗಿದನ್ನು ತಲುಪಿಸಲಾಗೋದಿಲ್ಲ ಅಂತ ಗೊತ್ತಿದ್ದರೂ ಈ ಪತ್ರ ಬರೆದಿದ್ದೇನೆ.


ಇನ್ನೇನು ಶ್ರಾವಣ ಮುಗಿಯುತ್ತಾ ಬಂತು. ಗಂಡನ ಮನೆಗೆ ಮರಳಬೇಕು. ಅಲ್ಲಿ ಮತ್ತೆ ನೋವಿನ ಮುಸುಡಿಗೆ ನಗುವಿನ ಮುಖವಾಡ ಧರಿಸಿ ಬದುಕಬೇಕು. ನೀನು ನೆನಪಾಗಿ ದುಃಖ ತಡೆಯಲಾಗದಿದ್ದರೆ ಯಾರೂ ಇಲ್ಲದ ವೇಳೆ ಹಿತ್ತಿಲು ಸೇರಿ ಬಿಕ್ಕಬೇಕು. ಆದರೆ ಹುಡುಗಾ, ನನ್ನದೆಯೊಳಗೆ ನಿನ್ನ ನೆನಪಿನ ಶ್ರಾವಣದ ಸಂಭ್ರಮ ಸದಾ ತುಂಬಿರುತ್ತದೆ. ಎಂದೂ ಮುಗಿಯದ ಮೌನವೊಂದು ಅಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ.
-ನಾನಿನ್ನೂ ನಿನ್ನವಳಾ…

[adning id="4492"]

LEAVE A REPLY

Please enter your comment!
Please enter your name here