ಗುಳಿಗೆನ್ನೆ ಮೇಲೆ ಕಣ್ಣಿಟ್ಟ ಟಗರು ಡಾಲಿ!

ಸೀರಿಯಲ್‌ನಲ್ಲಿ ನಟಿಸುತ್ತಲೇ ಏಕಾಏಕಿ ಸ್ಟಾರ್ ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೂ ಎಂಟ್ರಿ ಕೊಟ್ಟವರು ರಚಿತಾ ರಾಮ್. ತಮ್ಮ ನಟನೆ ಮತ್ತು ಗುಳಿಗೆನ್ನೆಯ ಆಕರ್ಷಣೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ತನ್ನದಾಗಿಸಿಕೊಂಡಿರೋ ರಚಿತಾ ಆರ್. ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಇದರ ಹಸಿಬಿಸಿ ಸೀನೊಂದು ಸೃಷ್ಟಿಸಿದ್ದ ಕಣ್ಣೀರು ಸೀನುಗಳನ್ನು ಹೊರತಾಗಿಸಿದರೆ ಡಿಂಪಲ್ ಕ್ವೀನ್ ಪುಷ್ಕಳ ಗೆಲುವೊಂದರರ ಖುಷಿಯಲ್ಲಿದ್ದಾರೆ. ಆದರೆ ಇದಾದ ನಂತರ ರಚಿತಾ ಮುಂದ್ಯಾವ ಚಿತ್ರವನ್ನು ಒಪ್ಪಿಕೊಳ್ಳುತ್ತಾರೆಂಬ ಬಗ್ಗೆ ಮಾತ್ರ ನಿಗೂಢವಾಗಿತ್ತು. ಇದೀಗ ಅದರ ಸುಳಿವಿನಂಥಾದ್ದೊಂದು ಸುದ್ದಿ ಹೊರ ಬಿದ್ದಿದೆ.


ಇದುವರೆಗೂ ಸ್ಟಾರ್ ನಟರನೇಕರಿಗೆ ನಾಯಕಿಯಾಗಿ ಮಿಂಚಿದ್ದವರು ರಚಿತಾರಾಮ್. ಇದೀಗ ಈ ಗುಳಿಕೆನ್ನೆ ಹುಡುಗಿಯ ಮೇಲೆ ಟಗರು ಡಾಲಿಯ ಕಣ್ಣು ಬಿದ್ದಿದೆ. ಧನಂಜಯ್ ನಟಿಸಲಿರೋ ಡಾಲಿ ಎಂಬ ಚಿತ್ರಕ್ಕೆ ರಚಿತಾ ನಾಯಕಿಯಾಗೋದು ಬಹುತೇಕ ಖಚಿತವಾದಂತಾಗಿದೆ. ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿ ಎಂಬ ಪಾತ್ರದಲ್ಲಿ ವಿಜೃಂಭಿಸಿದ್ದವರು ಧನಂಜಯ್. ಆ ಪಾತ್ರ ಪಡೆದ ಪ್ರಸಿದ್ಧಿ ಕಂಡು ಇದೀಗ ಅದೇ ಹೆಸರಲ್ಲಿ ಸಿನಿಮಾ ರೂಪಿಸಲು ಭರ್ಜರಿ ತಯಾರಿ ನಡೆಯುತ್ತಿದೆ. ಇದಾದ ನಂತರದಲ್ಲಿ ಥರ ಥರದ ಪಾತ್ರಗಳಲ್ಲಿ ನಟಿಸುತ್ತಾ ಬಂದಿರೋ ಧನಂಜಯ್ ಈಗ ಕೊಂಚವೂ ಪುರಸೊತ್ತಿಲ್ಲದಂತಾಗಿದ್ದಾರೆ. ಇದೇ ಹೊತ್ತಲ್ಲಿ ತಮ್ಮ ಹೆಸರಿನ ಬ್ರ್ಯಾಂಡ್‌ನಂತಾಗಿರೋ ಡಾಲಿ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.


ಡಾಲಿ ಚಿತ್ರವನ್ನು ಈ ಹಿಂದೆ ಎರಡನೇ ಸಲ ಚಿತ್ರವನ್ನು ನಿರ್ಮಾಣ ಮಾಡಿದ್ದ ಯೋಗೇಶ್ ನಾರಾಯಣ್ ಬಂಡವಾಳ ಹೂಡಿ ರೂಪಿಸಲಿದ್ದಾರೆ. ಪ್ರಭು ಶ್ರೀನಿವಾಸನ್ ಡಾಲಿ ಎಂಬ ಹೆಸರಿಗೆ ತಕ್ಕುದಾದ ರಗಡ್ ಕಥೆಯೊಂದನ್ನು ಸಿದ್ಧಪಡಿಸಿಕೊಂಡು ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈಗಾಗಲೇ ಇದಕ್ಕಾಗಿ ಸಂಪೂರ್ಣ ತಯಾರಿಯೂ ಮುಗಿದಿದೆ. ಆದರೆ ನಾಯಕಿ ಯಾರೆಂಬ ವಿಚಾರ ಮಾತ್ರ ಇದುವರೆಗೂ ಪರಿಹಾರವಾಗಿರಲಿಲ್ಲ. ಆದರೀಗ ರಚಿತಾ ರಾಮ್ ಜೊತೆ ಮಾತುಕತೆ ನಡೆಸಲಾಗಿದೆಯಂತೆ. ಅವರೂ ಕೂಡಾ ಡಾಲಿಗೆ ಜೋಡಿಯಾಗುವ ಉತ್ಸಾಹ ಹೊಂದಿದ್ದಾರೆ. ಧನಂಜಯ್ ಮತ್ತು ರಚಿತಾ ಇದುವರೆಗೆ ಒಪ್ಪಿಕೊಂಡಿರೋ ಸಿನಿಮಾಗಳು ಮುಗಿದೇಟಿಗೆ ಡಾಲಿಗೆ ಚಾಲನೆ ಸಿಗಲಿದೆ.

LEAVE A REPLY

Please enter your comment!
Please enter your name here