ರಾಂಧವನ ರೀಮೇಕ್ ಡಬ್ಬಿಂಗ್ ರೈಟ್ಸ್‌ಗಾಗಿ ಶುರುವಾಗಿದೆ ತೀವ್ರ ಪೈಪೋಟಿ!

ಬಿಗ್‌ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ರಾಂಧವ ಚಿತ್ರ ಇದೇ ತಿಒಂಗಳ ಹದಿನೈದರಂದು ಬಿಡುಗಡೆಯಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿರುವಾಗಲೇ ರಾಂಧವನ ಸದ್ದು ಪರಭಾಷೆಗಳಲ್ಲಿಯೂ ಮೊರೆಯಲಾರಂಭಿಸಿದೆ. ಇದೀಗ ಬೇರೆ ಭಾಷೆಗಳಿಂದ ಈ ಚಿತ್ರದ ರೀಮೇಕ್ ಮತ್ತು ಡಬ್ಬಿಂಗ್ ರೈಟ್ಸ್‌ಗಾಗಿ ತೀವ್ರ ಪೈಪೋಟಿ ಶುರುವಾಗಿ ಬಿಟ್ಟಿದೆ.


ಸುನೀಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರ ರಾಂಧವ. ಪೌರಾಣಿಕ ಮತ್ತು ಆಧುನಿಕ ಕಥಾಹಂದರ ಬ್ಲೆಂಡ್ ಆಗಿರೋ ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪೌರಾಣಿಕ ಕಥಾಹಂದರದ ಚಿತ್ರಗಳು ತೆರೆಗಾಣೋದೇ ಅಪರೂಪ. ಹಾಗೊಂದು ಚಿತ್ರ ಯಾವ ಭಾಷೆಯಲ್ಲಿ ಬಂದರೂ ಎಲ್ಲ ಭಾಷೆಗಳವರ ಕಣ್ಣೂ ಅಂಥಾ ಚಿತ್ರಗಳ ಮೇಲೆ ಬೀಳುತ್ತೆ. ರಾಂಧವನ ವಿಚಾರದಲ್ಲಿಯೂ ಅದೇ ಆಗಿದೆ.


ರಾಂಧವ ಕರ್ನಾಟಕದಲ್ಲಿ ಅಬ್ಬರಿಸುತ್ತಿರೋ ರೀತಿ ಕಂಡು ಬೆರಗಾಗಿರುವ ತೆಲುಗು ಚಿತ್ರರಂಗದ ಮಂದಿಯೂ ಇದರ ರೀಮೇಕ್ ಮತ್ತು ಡಬ್ಬಿಂಗ್ ಹಕ್ಕುಗಳಿಗಾಗಿ ಪೈಪೋಟಿಗೆ ಬಿದ್ದಿದ್ದಾರೆ. ಬಾಲಿವುಡ್ ಕಡೆಯಿಂದಲೂ ಇಂಥಾದ್ದೇ ಬೇಡಿಕೆ ಬರುತ್ತಿದೆ. ನಿರ್ಮಾಪಕ ಸನತ್ ಕುಮಾರ್ ಅವರಿಗೆ ಪರಭಾಷೆಗಳಿಂದ ಇದಕ್ಕಾಗಿ ಕರೆಗಳೂ ಬರುತ್ತಿವೆ. ಆದರೆ ಸದ್ಯಕ್ಕೆ ಅವರು ಯಾರಿಗೂ ಉತ್ತರಿಸಿಲ್ಲವಂತೆ. ಕನ್ನಡ ಚಿತ್ರವೊಂದು ತನ್ನ ಗುಣಮಟ್ಟದಿಂದಲೇ ಹೀಗೆ ಪರಭಾಷಾ ಚಿತ್ರರಂಗಗಳ ಗಮನ ಸೆಳೆಯೋದು ನಿಜಕ್ಕೂ ಹೆಮ್ಮೆಯ ವಿಚಾರ. ಇದೆಲ್ಲ ರಾಂಧವ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರವಾಗಿ ದಾಖಲಾಗಲಿರೋದರ ಸ್ಪಷ್ಟ ಸೂಚನೆ.

LEAVE A REPLY

Please enter your comment!
Please enter your name here