ಟ್ರೇಲರ್ ಮೂಲಕ ಅಬ್ಬರಿಸಿದ ನೋಡಿ ಉಡುಂಬಾ!

ಶೀರ್ಷಿಕೆಗೇ ರಗಡ್ ಸದ್ದನ್ನು ಲೇಪಿಸಿಕೊಂಡಂತಿರೋ ಚಿತ್ರ ಉಡುಂಬಾ. ಆಗಾಗ ಹಾಡುಗಳನ್ನು ಲಾಂಚ್ ಮಾಡುವ ಮೂಲಕವೇ ಈ ಚಿತ್ರ ಸದ್ದು ಮಾಡಿಕೊಂಡು ಸಾಗಿ ಬಂದಿತ್ತು. ಈಗಂತೂ ಇದೇ ಅಲೆಯಲ್ಲಿ ಬಿಡುಗಡೆಯ ಹೊಸ್ತಿಲಲ್ಲಿರೋ ಉಡುಂಬಾ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ತೆರೆಗಾಣುತ್ತಿದೆ. ಇದೀಗ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಮೂಲಕ ಉಡುಂಬಾ ಅಕ್ಷರಶಃ ಅಬ್ಬರಿಸಿದ್ದಾನೆ!


ಶಿವರಾಜ್ ನಿರ್ದೇಶನ ಮಾಡಿರೋ ಚೊಚ್ಚಲ ಚಿತ್ರ ಉಡುಂಬಾ. ಕಡಲ ತಡಿಯಲ್ಲಿಯೇ ಬದುಕು ಕಟ್ಟಿಕೊಂಡ ಮೀನುಗಾರರ ಹುಡುಗನೊಬ್ಬನ ಕಥೆ ಹೊಂದಿರೋ ಈ ಚಿತ್ರದ ಖದರ್ ಎಂಥಾದ್ದೆಂಬುದನ್ನು ಈ ಟ್ರೇಲರ್ ಸ್ಪಷ್ಟವಾಗಿಯೇ ರವಾನಿಸಿದೆ. ಮಾಸ್ ಡೈಲಾಗ್‌ಗಳು, ಅದಕ್ಕೆ ತಕ್ಕುದಾದ ಸನ್ನಿವೇಶಗಳನ್ನು ಕಟ್ಟಿ ಕೊಡುತ್ತಲೇ ಒಂದು ಮಧುರ ಪ್ರೇಮದ ಎಳೆಯೂ ಉಡದಂಥಾ ಹುಂಬನನ್ನು ಆವರಿಸಿಕೊಂಡಿರೋ ಸೂಚನೆಯನ್ನು ಈ ಟ್ರೇಲರ್ ಕೊಟ್ಟಿದೆ. ಒಟ್ಟಾರೆಯಾಗಿ ಇತ್ತೀಚೆಗೆ ಬಂದ ಟ್ರೇಲರುಗಳಲ್ಲಿಯೇ ಉಡುಂಬಾನದ್ದು ಪ್ರಾಮಿಸಿಂಗ್ ಟ್ರೇಲರ್ ಆಗಿಯೂ ದಾಖಲಾಗಿದೆ.


ಈ ಟ್ರೇಲರ್ ಬಿಡುಗಡೆಯಾಗಿ ಘಂಟೆ ಕಳೆಯೋದರೊಳಗೆ ಅತಿ ಹೆಚ್ಚಿನ ವೀವ್ಸ್ ಪಡೆದುಕೊಳ್ಳುವ ಮೂಲಕ ದಾಖಲೆಯತ್ತಲೂ ಮುನ್ನುಗ್ಗುತ್ತಿದೆ. ಕಡಲ ತಡಿಯ ಕಥೆಗಳು, ಅಲ್ಲಿನ ಭೂಗತದ ಛಾಯೆ ಹೊಂದಿರೋ ಚಿತ್ರಗಳು ಈಗಾಗಲೇ ಒಂದಷ್ಟು ಬಂದಿವೆ. ಆದರೆ ಉಡುಂಬ ಅದೆಲ್ಲದಕ್ಕೂ ಭಿನ್ನ ಎನ್ನುವುದಕ್ಕೂ ಈ ಟ್ರೇಲರ್‌ನಲ್ಲಿಯೇ ಸಾಕ್ಷಿಗಳಿವೆ. ಈ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆಯಲ್ಲಿಯೇ ಶಿವರಾಜ್ ಗಮನ ಸೆಳೆದಿದ್ದಾರೆ. ಇನ್ನು ಉಡುಂಬನ ಅವತಾರಿ ಗೂಳಿಹಟ್ಟಿ ಖ್ಯಾತಿಯ ಪವನ್ ಶೌರ್ಯ ಕೂಡಾ ಮಾಸ್ ಲುಕ್ಕಿನಲ್ಲಿ ಮಿಂಚಿರೋದು ಗಮನ ಸೆಳೆಯುವಂತಿದೆ.


ಮಂಗಳೂರು ಹುಡುಗಿ ಚಿರಶ್ರೀ ಅಂಚನ್ ಈ ಚಿತ್ರದ ನಾಯಕಿ. ಅವರಿಗೂ ಕೂಡಾ ಈ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರವೇ ಸಿಕ್ಕಿರುವಂತಿದೆ. ಈ ಟ್ರೇಲರಿನಲ್ಲಿಯೂ ಅಂಥಾ ಛಾಯೆ ಎದ್ದು ಕಾಣಿಸುತ್ತಿದೆ. ತಮ್ಮ ಮೊದಲ ಚಿತ್ರ ಗೂಳಿಹಟ್ಟಿಯ ನಟನೆಗಾಗಿ ಪ್ರಶಸ್ತಿ ಪುರಸ್ಕಾರಗಳನ್ನೂ ಮುಡಿಗೇರಿಸಿಕೊಂಡಿದ್ದವರು ಪವನ್ ಶೌರ್ಯ. ಉಡುಂಬನಾಗಿ ಅಬ್ಬರಿಸಿರೋ ಪವನ್ ಇಲ್ಲಿ ತಮ್ಮ ಶೌರ್ಯ, ಪರಾಕ್ರಮಗಳನ್ನು ಗಮನೀಯವಾಗಿಯೇ ಪ್ರದರ್ಶಿಸಿದ್ದಾರೆ. ಒಟ್ಟಾರೆಯಾಗಿ ಸದರಿ ಟ್ರೇಲರ್ ಕಾರಣದಿಂದ ಉಡುಂಬಾ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಮೂಡಿಕೊಂಡಿವೆ. ಇದನ್ನು ಕಂಡ ಪ್ರೇಕ್ಷಕರೂ ಕೂಡಾ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿಗಾಗಿ ಎದುರು ನೋಡುತ್ತಿದ್ದಾರೆ.

LEAVE A REPLY

Please enter your comment!
Please enter your name here