ಕಿಚ್ಚನ ಸ್ನೇಹದ ಬಗ್ಗೆ ಕೆದಕಿದಾಗ ಕೆಂಡವಾದರು ದರ್ಶನ್!

[adning id="4492"]

ಸ್ಟಾರ್ ನಟ ನಟಿಯರ ಖಾಸಗಿ ವಿಚಾರಗಳಿಗೆ ಕೈ ಹಾಕಿ ಕೆದಕೋದೆಂದರೆ ಈ ದೃಷ್ಯ ಮಾಧ್ಯಮಗಳ ಮಂದಿಗೆ ಅದೇನೋ ಸುಖ. ಆದರೆ ಇಂಥಾ ಸಂದಿಗ್ಧವುಂಟಾದಾಗ ಕೆಲ ನಟ ನಟಿಯರು ನಾಜೂಕಾಗಿ ಮಾತಾಡಿ ನುಣುಚಿಕೊಳ್ಳುತ್ತಾರೆ. ಕೆಲವರು ಹಾರಿಕೆಯ ಉತ್ತರ ಕೊಟ್ಟು ಜಾರಿಕೊಳ್ಳುತ್ತಾರೆ. ಆದರೆ ಡೋಂಟ್ ಕೇರ್ ಸ್ವಭಾವದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರಂಥಾ ನಟರು ನೇರವಾದ ಮಾತುಗಳಿಂದಲೇ ಕೆದಕಲು ನಿಂತವರ ನೆತ್ತಿಗೆ ಮೊಟಕಿ ಬೆವರಿಳಿಸಿ ಬಿಡುತ್ತಾರೆ!


ಒಂದು ಸಂದರ್ಶನದ ಸಂದರ್ಭದಲ್ಲಿಯೂ ಇಂಥಾದ್ದೇ ವಿದ್ಯಮಾನವೊಂದು ನಡೆದಿದೆ. ಸಿನಿಮಾ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ನಗುನಗುತ್ತಲೇ ಎಂದಿನಂತೆ ದರ್ಶನ್ ಉತ್ತರಿಸುತ್ತಾ ಹೋಗಿದ್ದರು. ಹೀಗೆ ಒಂದಷ್ಟು ಹೊತ್ತು ಕಳೆಯುತ್ತಲೇ ಅವರಿಗೆ ಸುದೀಪ್ ಜೊತೆಗಿನ ಸ್ನೇಹದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದನ್ನು ಕೇಳಿದಾಕ್ಷಣವೇ ದರ್ಶನ್ ತಣ್ಣಗಿನ ಧ್ವನಿಯಲ್ಲಿಯೇ ಕೆಂಡದಂಥಾ ಮಾತುಗಳನ್ನಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಅಂತಲೇ ಶುರು ಮಾಡಿದ ದರ್ಶನ್, ನಾನು ಯಾವಾಗ ಎದ್ದೇಳಬೇಕು, ಯಾವಾಗ ಊಟ ಮಾಡಬೇಕು, ಹೆಂಡತಿ ಪಕ್ಕ ಮಲಗಬೇಕಾ ಬೇಡವಾ ಅನ್ನೋದನ್ನೆಲ್ಲ ನಾನೇ ಡಿಸೈಡ್ ಮಾಡುತ್ತೇನೇ ಹೊರತು ಬೇರ‍್ಯಾರೂ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಅಂತ ನೇರವಾಗಿಯೇ ಸಿಟ್ಟು ಪ್ರದರ್ಶಿಸಿದ್ದಾರೆ.


ಇದು ಕೆಲ ಮಾಧ್ಯಮಗಳ ಎಳಸು ಆಸಾಮಿಗಳು ಮಾಡಿಕೊಳ್ಳುವ ಯಡವಟ್ಟು. ಕೇಳಲು ಸಾವಿರ ಪ್ರಶ್ನೆಗಳಿದ್ದರೂ ಖಾಸಗಿ ಸಂಗತಿಗಳತ್ತಲೇ ಫೋಕಸ್ ಮಾಡೋದನ್ನು ಕೆಲ ಮಂದಿ ಸೂತ್ರವಾಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಸುದೀಪ್ ಮತ್ತು ದರ್ಶನ್ ಗೆಳೆತನ ಕಡಿದುಕೊಂಡಿದ್ದೇನು ಮೂಲಭೂತ ಸಮಸ್ಯೆಯಲ್ಲ. ಅದರಿಂದ ಚಿತ್ರರಂಗಕ್ಕೆ ಯಾವ ವಿಪತ್ತುಗಳೂ ಉಂಟಾಗಿಲ್ಲ .ಅವರಿಬ್ಬರು ಮತ್ತೆ ಒಂದಾದರೆ ಕನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಬಂದುಬಿಡುತ್ತದೆ ಅಂದುಕೊಳ್ಳುವಂತೆಯೂ ಇಲ್ಲ್ಲ. ಹೆಚ್ಚೆಂದರೆ ಅದರಿಂದ ಕೊಳ್ಳಿಯಿಟ್ಟವರಿಗೆ ಕಂಟಕಗಳೆದುರಾಗಬಹುದು. ದರ್ಶನ್ ಮತ್ತು ಸುದೀಪ್ ಇಬ್ಬರೂ ನಿರಾಳವಾಗಲೂ ಬಹುದು. ಆದರೆ ಅವರಿಬ್ಬರ ಸ್ನೇಹದ ಬ್ರೇಕಪ್ ರಾಷ್ಟ್ರೀಯ ಸಮಸ್ಯೆ ಎಂಬಂತೆ ಬಿಂಬಿಸೋದು ಶತ ಮೂರ್ಖತನವಲ್ಲದೇ ಬೇರೇನೂ ಅಲ್ಲ.


ಸುದೀಪ್ ಅವರಿಗೂ ಇಂಥಾದ್ದೇ ಪ್ರಶ್ನೆಗಳು ಮಾಧ್ಯಮಗಳ ಕಡೆಯಿಂದ ಎದುರಾಗಿದ್ದವು. ಆದರೆ ಅವರು ಕೊಂಚ ನಯವಾದ ಉತ್ತರವನ್ನೇ ಕೊಟ್ಟು, ಕೊಂಚ ಗರಂ ಆದಂತೆ ಮಾಡಿ ಪಾರಾಗಿದ್ದರು. ಅದೇ ಎಳೆಯನ್ನಿಟ್ಟುಕೊಂಡು ದರ್ಶನ್ ಅವರ ಮುಂದೆ ಹಳೇ ಪ್ರಶ್ನೆಗಳನ್ನು ಹೊಸತಾಗಿ ಎಳೆದಾಡಲು ನಿಂತವರಿಗೆ ಅವರ ಕಡೆಯಿಂದ ಕೆಂಡದಂಥಾ ಉತ್ತರವಷ್ಟೇ ಬಳುವಳಿಯಾಗಿ ಸಿಕ್ಕಿದೆ. ಸ್ಟಾರ್ ನಟನೊಬ್ಬ ಎದುರು ಕೂತರೆ ಕೇಳಲು ಸಾವಿರ ಪ್ರಶ್ನೆಗಳಿರುತ್ತವೆ. ಆದರೆ ಇಂಥಾ ಕೆಲಸಕ್ಕೆ ಬಾರದ ಪ್ರಶ್ನೆಗಳಿಂದ ವಿನಾ ಕಾರಣ ವಿವಾದಗಳೇಳುತ್ತವೆ, ಅಭಿಮಾನಿಗಳು ವಿವೇಚನೆಯಿಲ್ಲದೆ ವರ್ತಿಸಿ ಸುಖಾಸುಮ್ಮನೆ ಸ್ಟಾರ್ ವಾರ್‌ನ ಗುಲ್ಲೇಳುತ್ತದೆ. ಇದೆಲ್ಲ ಆಗಬಾರದೆಂದರೆ ದರ್ಶನ್ ಅವರಂತೆ ಕೆಂಡದಂಥಾ ಮಾತುಗಳನ್ನು ಎದುರು ಕೂತವರ ತುಟಿಗಳಿಗೆ ತೀಡಿ ತೆಪ್ಪಗಾಗಿಸಬೇಕು. ಹೀಗಂತ ಸಾಮಾನ್ಯ ಪ್ರೇಕ್ಷಕರೂ ಅಭಿಪ್ರಾಯ ಪಡುತ್ತಿದ್ದಾರೆ!

[adning id="4492"]

LEAVE A REPLY

Please enter your comment!
Please enter your name here