ಭಾನು ವೆಡ್ಸ್ ಭೂಮಿ: ಮಲೆನಾಡ ಹುಡುಗಿಯ ಪ್ರೇಮ ಮಿಡಿತ!

[adning id="4492"]

ಪ್ರೇಮ ಕಥೆಗಳೆಂದಾಕ್ಷಣ ಅದರ ಬಗೆಗೊಂದು ಮೋಹದ ಭಾವ ಹೊಂದಿರೋ ಪ್ರೇಕ್ಷಕರ ಸಂಖ್ಯೆ ಕನ್ನಡದಲ್ಲಿ ಹೆಚ್ಚಾಗಿದೆ. ಈ ಕಾರಣದಿಂದಲೇ ಪ್ರೀತಿಯನ್ನು ಬೇರೆ ಬೇರೆ ಛಾಯೆಗಳಲ್ಲಿ ಪರಿಭಾವಿಸೋ ಚಿತ್ರಗಳು ಅಡಿಗಡಿಗೆ ತೆರೆಗಾಣುತ್ತಲೇ ಇರುತ್ತವೆ. ಮೆಲೋಡಿ ಹಾಡುಗಳ ಮೇಳದೊಂದಿಗೆ ಪ್ರೇಕ್ಷಕರ ಆಸಕ್ತಿ ಕೇಂದ್ರವನ್ನು ತಲುಪಿಕೊಂಡಿದ್ದ ಭಾನು ವೆಡ್ಸ್ ಭೂಮಿ ಕೂಡಾ ಪ್ರೇಮಕಥಾನಕ ಹೊಂದಿರೋ ಚಿತ್ರ. ಇದೀಗ ಸದರಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ.


ಜೆಕೆ ಆದಿ ನಿರ್ದೇಶನದ ಈ ಚಿತ್ರದ ಕಥೆ ತೆರೆದುಕೊಳ್ಳೋದೇ ಚಿಕ್ಕಮಗಳೂರಿನ ಹಳ್ಳಿಯ ಮೂಲಕ. ಈ ಹಳ್ಳಿಯ ಹುಡುಗಿ ಭೂಮಿ ಕಥೆಯ ಕೇಂದ್ರಬಿಂದು. ಭೂಮಿ ಹುಟ್ಟಿದ ಮನೆಗೆ ಮಾತ್ರವಲ್ಲದೆ ಆ ಊರಿಗೇ ಮುದ್ದಿನ ಹುಡುಗಿ. ಅತ್ಯಂತ ಸುರಕ್ಷಿತವಾದ ವಾತಾವರಣದಲ್ಲಿ ಎಲ್ಲರ ಪ್ರೀತಿ ಪಡೆದು ಬದುಕುತ್ತಿದ್ದ ಆಕೆಯ ಪಾಲಿಗೆ ಆ ಊರೇ ಜಗತ್ತು. ಆ ಜಗತ್ತಿನ ಭಾಗವಾಗಿರೋ ಪ್ರಭು ಎಂಬ ಹುಡುಗನ ಮೇಲೆ ಭೂಮಿಗೆ ಲವ್ವಾಗಿರುತ್ತೆ. ಇದು ಒಂದಷ್ಟು ದಿನ ಸಾಗುತ್ತಲೇ ಪ್ರಭು ಏಕಾಏಕಿ ನಾಪತ್ತೆಯಾಗಿ ಬಿಡುತ್ತಾನೆ. ಆತ ಎಲ್ಲಿ ಹೋದ, ಯಾಕಾಗಿ ಹೋದ ಎಂಬುದೆಲ್ಲ ಒಗಟಾಗುಳಿಯುತ್ತದೆ.


ಈ ಹುಡುಗಿಗೆ ತನ್ನ ಪ್ರೀತಿಯ ಹುಡುಗ ಮೈಸೂರಿನಲ್ಲಿದ್ದಾನೆಂಬ ಸುಳಿವು ಸಿಗುತ್ತೆ. ಆಕೆಗೆ ತನ್ನ ಹುಡುಗ ಮೈಸೂರಲ್ಲಿದ್ದಾನೆಂಬುದನ್ನು ಹೊರತಾಗಿಸಿ ಬೇರೇನೂ ಗೊತ್ತಿರೋದಿಲ್ಲ. ಆದರೆ ಮೋಹವೆಂಬುದು ಆಕೆಯನ್ನು ಹುಡುಕಾಟಕ್ಕಿಳಿಸುತ್ತೆ. ಭೂಮಿ ಮೈಸೂರಿಗೆ ಬಂದಿಳಿದು ಗುರುತಿರದ ಊರಲ್ಲಿ ಪ್ರೇಮಿಗಾಗಿ ಅಲೆಯುತ್ತಾಳೆ. ಅದೇ ಹೊತ್ತಲ್ಲಿ ದುಷ್ಟರ ಗ್ಯಾಂಗೊಂದರಿಂದ ಪೀಡನೆಗೊಳಗಾಗೋ ಭೂಮಿಯನ್ನು ಭಾನು ಎಂಬ ಲೋಕಲ್ ಹುಡುಗನೊಬ್ಬ ಕಾಪಾಡುತ್ತಾನೆ. ಆತನ ಸಾಥ್ನೊಂದಿಗೆ ಭೂಮಿ ಪ್ರಭುವನ್ನು ಪತ್ತೆಹಚ್ಚುತ್ತಾಳಾದರೂ ಆತ ತಾನಂದುಕೊಂಡಂತಿಲ್ಲ ಎಂಬ ಸತ್ಯ ತಿಳಿದು ಬೆಚ್ಚಿ ಬೀಳುತ್ತಾಳೆ.


ಆ ನಂತರ ಭೂಮಿ ತನ್ನ ಪ್ರೀತಿ ದಕ್ಕಿಸಿಕೊಳ್ಳುವಲ್ಲಿ ಯಶ ಕಾಣುತ್ತಾಳಾ ಎಂಬ ಕುತೂಹಲಕ್ಕೆ ಮೈಕೈ ತುಂಬಿಕೊಂಡ ಕಥೆಯ ಉತ್ತರ ಕಾದಿದೆ. ನಿರ್ದೇಶಕ ಆದಿ ಈ ಕಥೆಯನ್ನು ಒಂದಷ್ಟು ರೋಚಕವಾಗಿ ಕಟ್ಟಿಕೊಡಲು ಮಾಡಿರೋ ಪ್ರಯತ್ನ ಎದ್ದು ಕಾಣಿಸುತ್ತೆ. ಇನ್ನುಳಿದಂತೆ ನವನಾಯಕ ಸೂರ್ಯಪ್ರಭ್ ಮತ್ತು ನಾಯಕಿ ರಿತಿಷಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಮಿಕ್ಕ ಪಾತ್ರವರ್ಗವೂ ಅದಕ್ಕೆ ತಕ್ಕುದಾಗಿ ಜೊತೆಯಾಗಿದೆ. ಹಾಡುಗಳು, ಹಿನ್ನೆಲೆ ಸಂಗೀತಗಳೆಲ್ಲ ಕಥೆಯ ಓಘಕ್ಕೆ ಪೂರಕವಾಗಿವೆ.

ರೇಟಿಂಗ್: ೩.೫/೫

[adning id="4492"]

LEAVE A REPLY

Please enter your comment!
Please enter your name here