ಯೋಧರು ಮತ್ತು ರೈತರ ಕೈಯಿಂದ ಬಿಡುಗಡೆಯಾಯ್ತು ರಾಂಧವ ಆಡಿಯೋ!

ಬಿಗ್‌ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಟಿಸಿರುವ ಮೊದಲ ಚಿತ್ರ ರಾಂಧವ. ಹೊಸಾ ಬಗೆಯ ಕಥಾ ಹಂದರದ ಸುಳಿವು ಬಿಟ್ಟು ಕೊಡುತ್ತಲೇ ಬಹು ನಿರೀಕ್ರಿತ ಚಿತ್ರವಾಗಿ ಬಿಂಬಿತವಾಗಿರೋ ರಾಂಧವ ಇದೀಗ ಹಾಡುಗಳ ಮೂಲಕ ಸದ್ದು ಮಾಡುವತ್ತ ಹೆಜ್ಜೆಯಿಟ್ಟಿದೆ. ಇದರ ಆಡಿಯೋವನ್ನು ಚಿತ್ರತಂಡ ಎಲ್ಲರೂ ಮೆಚ್ಚಿಕೊಳ್ಳುವಂಥಾ ರೀತಿಯಲ್ಲಿ ರೈತರು ಮತ್ತು ಯೋಧರ ಕೈಯಿಂದ ಬಿಡುಗಡೆಗೊಳಿಸುವ ಮೂಲಕ ಮಾದರಿಯಾಗಿದೆ.


ಸಾಮಾನ್ಯವಾಗಿ ಇಂಥಾ ಆಡಿಯೋ ಲಾಂಚ್ ಮುಂತಾದ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಸಿನಿಮಾ ಸ್ಟಾರ್‌ಗಳೇ ಕೇಂದ್ರ ಬಿಂದುಗಳಾಗಿರುತ್ತಾರೆ. ರೈತರು ಮತ್ತು ಯೋಧರಂಥಾ ಮುಖ್ಯ ವ್ಯಕ್ತಿಗಳು ಕಥೆಯ ಸರಕಾಗುತ್ತಾರೆಯೇ ಹೊರತು ಇಂಥಾ ಸಮಾರಂಭಗಳ ವೇದಿಕೆಯೇರಲು ಅವಕಾಶ ಸಿಕ್ಕೋದಿಲ್ಲ. ಆದರೆ ರಾಂಧವ ಚಿತ್ರತಂಡ ಅವರ ಮೂಲಕವೇ ಅಚ್ಚುಕಟ್ಟಾದ ಸಮಾರಂಭವೊಂದರ ಮೂಲಕ ಆಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಚಿತ್ರರಂಗದಲ್ಲಿ ಹೊಸಾ ಬೆಳವಣಿಗೆಗೂ ಶ್ರೀಕಾರ ಹಾಕಿದೆ.


ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗುತ್ತಿರುವ ರಾಂಧವನ ಎಲ್ಲ ಹಾಡುಗಳೂ ಒಂದಕ್ಕೊಂದು ಭಿನ್ನವೆಂಬಂತೆ, ಸೊಗಸಾಗಿ ಮೂಡಿ ಬಂದಿವೆ. ಇದರಲ್ಲಿನ ಹೊಸಾ ಸೌಂಡಿಂಗ್ ಆರಂಭಿಕವಾಗಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿರುವವರು ಶಶಾಂಕ್ ಶೇಷಗಿರಿ. ಈಗಾಗಲೇ ಗೌಯಕರಾಗಿ ಖ್ಯಾತರಾಗಿರೋ ಶಶಾಂಕ್ ಪಾಲಿಗೆ ಸಂಗೀತ ನಿರ್ದೇಶಕರಾಗಿ ಇದು ಮೊದಲ ಹೆಜ್ಜೆ. ಸಂಗೀತದ ಎಲ್ಲ ಪ್ರಾಕಾರಗಳಲ್ಲಿಯೂ ಪಾಂಡಿತ್ಯ ಹೊಂದಿರೋ ಅವರ ಪ್ರತಿಭೆ ಈ ಮೂಲಕವೇ ಸಾಬೀತಾಗಿದೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶಕರಾಗಿ ನೆಲೆ ನಿಲ್ಲುವ ಸೂಚನೆಯನ್ನೂ ಈ ಹಾಡುಗಳು ಧ್ವನಿಸುತ್ತಿವೆ.ಈ ಹಾಡುಗಳೆಲ್ಲವೂ ನಿರ್ದೇಶಕ ಸುನೀಲ್ ಆಚಾರ್ಯ ಅವರ ಕಥೆಯ ಕಸುವಿಗೆ ಪೂರಕವಾಗಿಯೇ ರೂಪಿಸಲ್ಪಟ್ಟಿವೆ. ಈಗಾಗಲೇ ರಾಂಧವನ ಬಗ್ಗೆ ಪ್ರೇಕ್ಷಕರ ವಲಯದಲ್ಲೊಂದು ಕುತೂಹಲ ಮೂಡಿಕೊಂಡಿದೆಯಲ್ಲಾ? ಅದನ್ನು ಮತ್ತಷ್ಟು ತೀವ್ರಗೊಳಿಸುವಂತೆ ಈ ಹಾಡುಗಳು ಮೂಡಿ ಬಂದಿವೆ. ಭುವನ್ ಪೊನ್ನಣ್ಣ ಅಖಂಡ ಎರಡು ವರ್ಷಗಳ ಕಾಲ ಶ್ರಮವಹಿಸಿ, ತಯಾರಿ ನಡೆಸಿ ಎರಡ್ಮೂರು ಶೇಡುಗಳ ಸವಾಲಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಅಸಲೀ ಕಥೆಯೇನೆಂಬ ಕುತೂಹಲಕ್ಕೆ ಆಗಸ್ಟ್ ಹದಿನೈದರಂದು ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here