ರಘು ಧೀಕ್ಷಿತ್ ಧ್ವನಿಯಲ್ಲಿ ಸಂಕಟದ ಮೈಸೂರ್ ಮಸಾಲಾ!

[adning id="4492"]

ಶಿಶುನಾಳ ಶರೀಫರ ಗೀತೆಗಳಿಗೆ ಹೊಸಾ ಸಂಗೀತ ಸ್ಪರ್ಶ ನೀಡುತ್ತಲೇ ಈಗಿನ ತಲೆಮಾರಿಗೂ ದಾಟಿಸಿದ ಪ್ರತಿಭಾವಂತ ಗಾಯಕ ರಘು ಧೀಕ್ಷಿತ್. ಇಂಥಾ ಸಂಗೀತದ ಲೈವ್ ಶೋಗಳಲ್ಲಿ ಬ್ಯುಸಿಯಾಗುತ್ತಲೇ ನಿರ್ದೇಶಕರಾಗಿ, ಗಾಯಕರಾಗಿಯೂ ಛಾಪು ಮೂಡಿಸಿರುವ ರಘು ಧೀಕ್ಷಿತ್ ಇತ್ತೀಚಿನ ದಿನಗಳಲ್ಲಿ ಅದೇಕೋ ಚಿತ್ರರಂಗದಿಂದ ದೂರವುಳಿದಿದ್ದಾರೆ. ವೈಯಕ್ತಿಕ ಬದುಕಿನಲ್ಲೆದ್ದಿರೋ ಬಿರುಗಾಳಿಯಿಂದ ಮನುಷ್ಯ ಸಹಜ ವ್ಯಾಕುಲಕ್ಕೀಡಾಗಿರೋ ಅವರೀಗ ಕಾಕತಾಳೀಯವೆಂಬಂತೆ ಸಂಕಟ ಬೆರೆತ ಹಾಡೊಂದರ ಮೂಲಕ ಮತ್ತೆ ಮರಳಿದ್ದಾರೆ!


ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಫೋಕಸ್ ಮಾಡಲಾಗಿರೋ ಕಥೆಯ ಮೈಸೂರ್ ಮಸಾಲ ಎಂಬ ಚಿತ್ರವೊಂದು ಸದ್ದುಗದ್ದಲವಿಲ್ಲದೆ ತಯಾರಾಗಿದೆ. ಹೊಸಾ ಅಲೆಯನ್ನು ಹೊಮ್ಮಿಸುತ್ತಿರೋ ಈ ಚಿತ್ರದಲ್ಲಿರೋದು ಒಂದೇ ಒಂದು ಹಾಡಷ್ಟೇ. ಆ ವಿಶೇಷವಾದ ಹಾಡಿಗೆ ರಘು ಧೀಕ್ಷಿತ್ ಧ್ವನಿಯಾಗಿದ್ದಾರೆ. ಇದು ಪ್ರೀತಿ ಕಳೆದುಕೊಂಡವನ ಸಂಕಟಕ್ಕೆ ಮಾತಾಗುವಂಥಾ ಹಾಡು. ಆ ಭಾವಗಳನ್ನ ಬಸಿದುಕೊಂಡಂಥಾ ಸಾಹಿತ್ಯವಿರೋ ಈ ಹಾಡನ್ನು ಬಲು ಪ್ರೀತಿಯಿಂದಲೇ ರಘು ಧೀಕ್ಷಿತ್ ಹಾಡಿದ್ದಾರಂತೆ. ತಾವೇ ಆಸಕ್ತಿ ವಹಿಸಿ ಹಲವಾರು ಬಾರಿ ಹಾಡಿ ಕಡೆಗೂ ಅದಕ್ಕೊಂದು ಅಂತಿಮ ಸ್ವರೂಪ ನೀಡಿದ್ದಾರೆ.


ಮೈಸೂರು ಮಸಾಲದ ಈ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ಇದನ್ನು ನೀಓಡಿದೇಟಿಗೇ ಸೂಪರ್ ಹಿಟ್ ಆಗೋ ಭವಿಷ್ಯ ಹೇಳಿದ್ದ ರಘು ಧೀಕ್ಷಿತ್, ಈ ಹಾಡು ತಮ್ಮ ಲೈವ್ ಶೋಗಳಲ್ಲಿಯೂ ಟ್ರೆಂಡ್ ಸೆಟ್ ಮಾಡಲಿದೆ ಎಂದೂ ಹೇಳಿಕೊಂಡಿದ್ದಾರೆ. ಪ್ರೀತಿಯನ್ನ ಅರಸೋ ಹುಡುಗನ ಮನೋಭೂಮಿಕೆಗೆ ಭಾವ ತುಂಬುವ ಸಲುವಾಗಿ ರಘು ಧೀಕ್ಷಿತ್ ಹತ್ತರಿಂದ ಹನ್ನೆರಡು ಬಾರಿ ಮತ್ತೆ ಮತ್ತೆ ಹಾಡಿದ್ದಾರಂತೆ. ಇದನ್ನು ಗಣೇಶನ ಹಬ್ಬದಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.


ಅಂದಹಾಗೆ, ಮೈಸೂರ್ ಮಸಾಲಾ ಹಾರುವ ತಟ್ಟೆಯ ನಿಗೂಢಗಳ ಸುತ್ತಾ ಹೆಣೆಯಲ್ಪಟ್ಟಿರೋ ರೋಚಕ ಕಥಾ ಹಂದರವನ್ನೊಳಗೊಂಡಿದೆಯಂತೆ. ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ, ಕಿರಣ್, ಸಂಯುಕ್ತಾ ಹೊರನಾಡ್ ಮುಂತಾದವರು ತಾರಾಗಣದಲ್ಲಿದ್ದಾರೆ. ಹಾರುವ ತಟ್ಟಿ ಎಂಬುದು ಈ ಕ್ಷಣಕ್ಕೂ ಇಡೀ ಜಗತ್ತನ್ನು ಕಾಡುತ್ತಿರೋ ವಿಸ್ಮಯ. ಇದರ ಸುತ್ತಲಿನ ಈ ಕಥೆಯನ್ನು ವೈಜ್ನಾನಿಕ ನೆಲೆಗಟ್ಟಿನಲ್ಲಿಯೇ ರೂಪಿಸಲಾಗಿದೆಯಂತೆ.

[adning id="4492"]

LEAVE A REPLY

Please enter your comment!
Please enter your name here