ಭಾನು ವೆಡ್ಸ್ ಭೂಮಿ: ರಂಗಾಯಣ ರಘು ಹಾಡಿಗೆ ಶೋಭರಾಜ್ ಕುಣಿತ!

ಜೆಕೆ ಆದಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಭಾನು ವೆಡ್ಸ್ ಭೂಮಿ ಈ ವಾರ ತೆರೆಗಾಣುತ್ತಿದೆ. ಯಾವ ಅಬ್ಬರವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಬರಲು ರೆಡಿಯಾಗಿರೋ ಈ ಚಿತ್ರ ಟ್ರೈಲರ್ ಮತ್ತು ಇಂಪಾದ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಗೌಸ್ ಫೀರ್ ಸಾಹಿತ್ಯ ರಚಿಸಿರೋ ಭಾನು ವೆಡ್ಸ್ ಭೂಮಿಯ ಮೂರು ಹಾಡುಗಳೂ ಒಂದೊಂದು ತೆರನಾಗಿ ಜನರಿಗಿಷ್ಟವಾಗಿವೆ.


ಇದು ಜೆಕೆ ಆದಿ ನಿರ್ದೇಶನ ಮಾಡಿರೋ ಚಿತ್ರ. ಪೂರ್ವಿ ಪ್ರೊಡಕ್ಷನ್ಸ್ ಅಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರೋ ಈ ಚಿತ್ರದ ಹಾಡುಗಳು ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿವೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಗೌಸ್ ಫೀರ್ ಮೂರೂ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದಾರೆ. ವಿಶೇಷವೆಂದರೆ ಈ ವರೆಗೂ ಕಾಮಿಡಿ ಸೇರಿದಂತೆ ನಾನಾ ಪಾತ್ರಗಳನ್ನು ನಿರ್ವಹಿಸಿರೋ ರಂಗಾಯಣ ರಘು ಈ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ.


ರಂಗಾಯಣ ರಘು ಹಾಡಿರೋ ಹಾಡು ಕೂಡಾ ಈ ಚಿತ್ರದ ಮುಖ್ಯ ಆಕರ್ಷಣೆಗಳಲ್ಲೊಂದೆಂಬುದು ಚಿತ್ರತಂಡದ ಅಭಿಪ್ರಾಯ. ಇದನ್ನು ತಮ್ಮ ಕಿಚಿಕ್ಕೂ ಗೆಳೆಯ ಶೋಭರಾಜ್ ಒತ್ತಾಯದ ಮೇರೆಗೆ ರಂಗಾಯಣ ರಘು ಹಾಡಿದ್ದಾರಂತೆ. ವಿಶೇಷವೆಂದರೆ ಇದಕ್ಕೆ ಶೋಭರಾಜ್ ನೃತ್ಯವನ್ನೂ ಮಾಡಿದ್ದಾರೆ. ಇವರಿಬ್ಬರೂ ಭಾನು ವೆಡ್ಸ್ ಭೂಮಿಯಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಸ್ಪರ ವಿರುದ್ಧ ಕ್ಯಾರೆಕ್ಟರುಗಳನ್ನು ಆವಾಹಿಸಿಕೊಂಡಿರೋ ಇವರಿಬ್ಬರ ಪಾತ್ರಗಳೂ ಕೂಡಾ ಹೊಸ ಛಾಯೆಯನ್ನು ಒಳಗೊಂಡಿವೆಯಂತೆ.


ಸೂರ್ಯಪ್ರಭ್ ಮತ್ತು ರಿಷಿತಾ ಮಲ್ನಾಡ್ ಎಂಬ ನವ ಪ್ರತಿಭೆಗಳು ಭಾನು ಮತ್ತು ಭೂಮಿಯಾಗಿ ನಟಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರೋ ಸೂರ್ಯಪ್ರಭ್‌ಗಿದು ಮೊದಲ ಚಿತ್ರ. ನಾಯಕಿಯ ಪಾಲಿಗೂ ಇದು ಮೊದಲ ಹೆಜ್ಜೆಯೇ. ನಿರ್ದೇಶಕ ಜೆಕೆ ಆದಿ ತಮ್ಮ ಗಮನಕ್ಕೆ ಬಂದಿದ್ದ ಸತ್ಯ ಘಟನೆಯೊಂದರಿಂದ ಪ್ರೇರಿತರಾಗಿ ಈ ಮುದ್ದಾದ ಪ್ರೇಮ ಕಥೆಯನ್ನು ರಚಿಸಿದ್ದಾರೆ. ಹಾಗಂತ ಇದು ಪ್ರೀತಿಗಷ್ಟೇ ಸೀಮಿತವಾಗಿಲ್ಲ. ಕುಟುಂಬ ಸಮೇತರಾಗಿ ಕೂತು ನೋಡುವಂಥಾ ರೀತಿಯಲ್ಲಿ ಭಾನು ವೆಡ್ಸ್ ಭೂಮಿ ಮೂಡಿ ಬಂದಿದೆಯಂತೆ.

LEAVE A REPLY

Please enter your comment!
Please enter your name here