ಮೈನಾ ಜೊತೆ ಬಾಲಿವುಡ್ ಕಡೆ ಹೊರಟ ಕಲರ್‌ಫುಲ್ ನಾಗಣ್ಣ!

ಮರ್ ಚಿತ್ರದ ನಂತರ ಕನ್ನಡ ಚಿತ್ರವೊಂದನ್ನು ಘೋಷಣೆ ಮಾಡಿ ಫಸ್ಟ್ ಲುಕ್ ಅನ್ನೂ ಬಿಡುಗಡೆ ಮಾಡಿದ್ದ ನಾಗಶೇಖರ್ ಈಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ನಾಗಶೇಖರ್ ಬಾಲಿವುಡ್ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರೆಂಬ ಬಗ್ಗೆ ತಿಂಗಳಿಂದೀಚೆಗೆ ಸುದ್ದಿ ಹಬ್ಬಿಕೊಂಡಿತ್ತು. ಈ ಬಗ್ಗೆ ಒಂದಷ್ಟು ಗಾಳಿ ಸುದ್ದಿಗಳೂ ಹರಡಿಕೊಂಡಿದ್ದರು. ಮಾಸ್ತಿಗುಡಿಯಿಂದ ಆರಂಭವಾದ ಗೋತಾ ಪರ್ವ ಯಥಾರೀತಿಯಲ್ಲಿ ಮುಂದುವರೆದಿರೋದರಿಂದ ನಾಗಣ್ಣ ಏನಾದರೂ ಬಾಲಿವುಡ್ ನಾಟಕ ಶುರುವಿಟ್ಟುಕೊಂಡರಾ ಎಂಬ ಸಂಶಯವೂ ಹಲವರನ್ನು ಕಾಡಿತ್ತು. ಆದರೀಗ ಈ ಬಗ್ಗೆ ಎಲ್ಲ ವಿಚಾರವನ್ನೂ ಕೂಡಾ ನಾಗಶೇಖರ್ ಬಹಿರಂಗಗೊಳಿಸಿದ್ದಾರೆ.


ನಾಗಣ್ಣ ಬಾಲಿವುಡ್‌ಗೆ ಎಂಟ್ರಿ ಕೊಡೋದರಲ್ಲಿ ಯಾವ ಡೌಟೂ ಇಲ್ಲ. ಅವರ ಬಾಲಿವುಡ್ ಎಂಟ್ರಿಯ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಕೂಡಾ ಇದೀಗ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಕಲರ್‌ಫುಲ್ ಎಂಬ ಶೀರ್ಷಿಕೆ ನಿಗಧಿಗೊಳಿಸಿ ಅದಕ್ಕೆ ತಕ್ಕುದಾದಂಥಾ ಫಸ್ಟ್ ಲುಕ್ಕನ್ನೂ ಅವರು ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ನಾಗಶೇಖರ್ ತಾವೇ ಕನ್ನಡದಲ್ಲಿ ನಿರ್ದೇಶನ ಮಾಡಿದ್ದ ಮೈನಾ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದಾರೆ.


ಯಾವಾಗಲೂ ವಿರಳವಾದ ಸತ್ಯ ಘಟನೆಯತ್ತಲೇ ದೃಷ್ಟಿ ಹರಿಸೋಗು ನಾಗಶೇಖರ್ ವಿಶೇಷತೆ. ಇತ್ತೀಚೆಗೆ ತೆರೆ ಕಂಡಿದ್ದ ಅಭಿಷೇಕ್ ಅಂಬರೀಶ್ ನಟಿಸಿದ್ದ ಅಮರ್ ಕೂಡಾ ನೈಜ ಘಟನೆಯನ್ನು ಆಧರಿಸಿದ ಕಥೆ ಹೊಂದಿತ್ತು. ೨೦೧೩ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆಗಿದ್ದ ಮೈನಾ ಕೂಡಾ ಸತ್ಯಘಟನೆಯಾಧಾರಿತ ಚಿತ್ರವೇ. ಇದರಲ್ಲಿ ಆ ದಿನಗಳು ಚೇತನ್ ನಾಯಕನಾಗಿ ನಟಿಸಿದ್ದರೆ, ನಿತ್ಯಾ ಮೆನನ್ ಅಂಗವಿಕಲೆಯಾಗಿ ಚಾಲೆಂಜಿಂಗ್ ಪಾತ್ರಕ್ಕೆ ಜೀವ ತುಂಬಿದ್ದರು. ಮನಮಿಡಿಯುವ ಪ್ರೇಮ ಕಥಾನಕ ಹೊಂದಿದ್ದ ಮೈನಾ ಕನ್ನಡದ ಪ್ರೇಕ್ಷಕರ ಬೆಂಬಲ ಪಡೆದುಕೊಂಡಿತ್ತು.


ಇದೇ ಚಿತ್ರವವನ್ನು, ಅದರ ವಿಶಿಷ್ಟ ಕಥೆಯನ್ನು ಬಾಲಿವುಡ್‌ನ ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಪುತ್ರ ಭವೀಶ್ ಬಹುವಾಗಿ ಮೆಚ್ಚಿಕೊಂಡಿದ್ದ. ಜೋಗಿಂದರ್ ಸಿಂಗ್ ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿರುವ ಯಶಸ್ವೀ ನಿರ್ಮಾಪಕ. ಅವರು ಒಂದೊಳ್ಳೆ ಕಥೆಯ ಮೂಲಕವೇ ತಮ್ಮ ಮಗನನ್ನು ಹೋರೋ ಆಗಿ ಲಾಂಚ್ ಮಾಡಲು ಹುಡುಕಾಟ ನಡೆಸುತ್ತಿದ್ದರು. ಇದೇ ಹೊತ್ತಿನಲ್ಲಿ ನಾಗಶೇಖರ್ ನಿರ್ದೇಶನದ ಕನ್ನಡ ಚಿತ್ರ ಮೈನಾ ಆತನಿಗೆ ಹಿಡಿಸಿತ್ತಂತೆ. ಆ ಬಳಿಕ ನಾಗಣ್ಣನೊಂದಿಗೆ ಮಾತುಕಥೆ ನಡೆಸಿ ಅದನ್ನೇ ಹಿಂದಿಗೆ ರೀಮೇಕ್ ಮಾಡುವ ಒಪ್ಪಂದವೂ ನಡೆದಿದೆ.


ಒಂದಷ್ಟು ತಿಂಗಳುಗಳ ಕಾಲ ಪಟ್ಟಾಗಿ ಕೂತು ಈ ಚಿತ್ರದ ಎಲ್ಲ ತಯಾರಿಗಳನ್ನೂ ಮುಗಿಸಿಕೊಂಡಿರೋ ನಾಗಶೇಖರ್ ಇದೀಗ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ಅಮರ್ ಚಿತ್ರದ ಬಗ್ಗೆ ಬಂದಿದ್ದ ನೆಗೆಟಿವ್ ವಿಮರ್ಶೆಗಳ ಬಗ್ಗೆ ಅವರು ಶ್ಯಾನೆ ಬೇಸರ ಮಾಡಿಕೊಂಡಿದ್ದರು. ಮಾಧ್ಯಮಗಳ ಮುಂದೆಯೇ ನೇರವಾಗಿ ಅಸಮಾಧಾನ ತೋಡಿಕೊಂಡಿದ್ದರು. ಇಂಥಾ ಬೆಳವಣಿಗೆಗಳಿಂದ ರೊಚ್ಚಿಗೆದ್ದಿರೋ ನಾಗಣ್ಣ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳೋ ಇರಾದೆಯಿಂದಲೇ ಮುಂದುವರೆದಂತಿದೆ. ಒಂದು ವೇಳೆ ಅವರು ಶ್ರಮವಹಿಸಿ ಮೈನಾ ರೀಮೇಕ್ ಅನ್ನು ಚೆಂದಗೆ ಮಾಡಿ ಮುಗಿಸಿದರೆ ನಾಗಶೇಖರ್ ಬಾಲಿವುಡ್‌ನಲ್ಲಿಯೇ ಖಾಯಂ ಆಗಿ ಬಿಡಾರ ಹೂಡಿದರೂ ಅಚ್ಚರಿಯೇನಿಲ್ಲ!

LEAVE A REPLY

Please enter your comment!
Please enter your name here