ಯುವರತ್ನನ ಜೊತೆ ಅಖಾಡಕ್ಕಿಳಿದ ಡೈಲಾಗ್ ಕಿಂಗ್!

ರಾಜಕುಮಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಸಾರ್ವಕಾಲಿಕ ಗೆಲುವು ದಾಖಲಿಸೋ ಮೂಲಕವೇ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಯಶಸ್ವೀ ಜೋಡಿ ಎನ್ನಿಸಿಕೊಂಡಿದ್ದಾರೆ. ಇದೇ ಜೋಡಿ ಮತ್ತೆ ಯುವರತ್ನ ಮೂಲಕ ಒಂದಾಗಿರೋ ವಿಚಾರ ಗೊತ್ತೇ ಇದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಚಿತ್ರದ ತಾರಾಗಣಕ್ಕೆ ವಾರಕ್ಕೊಬ್ಬರಂತೆ ಕಲಾವಿದರನ್ನು ಬರಮಾಡಿಕೊಳ್ಳುವ ಮೂಲಕವೇ ಯುವರತ್ನನನ್ನು ಸದಾ ಸುದ್ದಿ ಕೇಂದ್ರದಲ್ಲಿಟ್ಟಿದ್ದಾರೆ.


ಈಗಾಗಲೇ ಕಲಾವಿದರದ್ದೊಂದು ದೊಡ್ಡ ದಂಡೇ ಯುವರತ್ನನ ಸುತ್ತಾ ಜಮಾವಣೆಗೊಂಡಿದೆ. ರಾಧಿಕಾ ಶರತ್ ಕುಮಾರ್, ಪ್ರಕಾಶ್ ರೈ, ರಂಗಾಯಣ ರಘು, ದಿಗಂತ್, ಟಗರು ಸರೋಜ ಸೇರಿದಂತೆ ಯುವರತ್ನನ ಬಳಗ ದೊಡ್ಡದಿದೆ. ಇದೀಗ ಸಂತೋಷ್ ಆನಂದ್‌ರಾಮ್ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನೂ ಬರಮಾಡಿಕೊಂಡಿದ್ದಾರೆ. ಇಂದು ಸಾಯಿಕುಮಾರ್ ಅವರ ಬರ್ತ್‌ಡೇ ಇರೋದರಿಂದ ಅದಕ್ಕೆ ವಿಶ್ ಮಾಡುತ್ತಲೇ ಸಾಯಿಕುಮಾರ್‌ಗೆ ಚಿತ್ರತಂಡಕ್ಕೆ ಸ್ವಾಗತ ಕೋರಲಾಗಿದೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಪುನೀತ್ ಯಾವ ಥರದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬ ಸುಳಿವು ನೀಡುವಂಥಾ ಫೋಟೋಗಳನ್ನೂ ಕೂಡಾ ಚಿತ್ರತಂಡ ಆಗಾಗ ಬಿಡುಗಡೆ ಮಾಡುತ್ತಾ ಸಾಗುತ್ತಿದೆ. ಇತಚೆಗೆ ಹೊರ ಬಂದಿದ್ದ ಇಂಥಾದ್ದೇ ಒಂದು ಪೋಸ್ಟರಿನಲ್ಲಿ ಬೈಕ್ ಮೇಲೆ ಸವಾರಿ ಹೊರಟಿರೋ ಪುನೀತ್ ಭಂಗಿಯನ್ನು ಕಂಡು ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ. ಯುವರತ್ನ ಮೂಲಕ ರಾಜಕುಮಾರ ಚಿತ್ರದ ದಾಖಲೆಗಳನ್ನು ಮತ್ತೆ ಮಿರುಗಿಸಬೇಕೆಂಬ ಗುರಿಯೊಂದಿಗೇ ಸಂತೋಷ್ ಆನಂದರಾಮ್ ಅಖಾಡಕ್ಕಿಳಿದಿದ್ದಾರೆ. ಅವರಿಗೆ ಜೊತೆಯಾಗುತ್ತಿರೋ ಕಲಾವಿದರ ದಂಡು ಯುವರತ್ನನದ್ದು ಭಿನ್ನವಾದ ಕಥೆ ಅನ್ನೋದನ್ನು ಸಾರಿ ಹೇಳುತ್ತಿದೆ.

LEAVE A REPLY

Please enter your comment!
Please enter your name here