ಮಹಿರಾ: ಕೊಲೆ ಚೇಸಿಂಗ್ ಮತ್ತು ಬಿಪಿ ರೈಜಿಂಗ್!

ಕಾನೂನು ಬಾಹಿರ ಕೆಲಸ ಮಾಡೋರನ್ನು ಬೆಂಬೀಳೋ ಪೊಲೀಸ್, ಒಂದು ಮರ್ಡರ್ ಮಿಸ್ಟರಿ, ಅದರ ಬೆಂಬೀಳೋ ಖಡಕ್ ಪೊಲೀಸ್ ಅಧಿಕಾರಿಣಿ ಮತ್ತು ಈ ಹಾದಿಯಲ್ಲಿ ನಡೆಯೋ ರೋಮಾಂಚಕ ಎನ್ನಬಹುದಾದಂಥಾ ಚೇಸಿಂಗ್ ಸನ್ನಿವೇಶಗಳನ್ನೇ ಜೀವಾಳವಾಗಿಸಿಕೊಂಡಿರೋ ಚಿತ್ರ ಮಹಿರಾ. ಸಾಮಾನ್ಯವಾಗಿ ಇಂಥಾ ಕಥಾನಕಗಳಲ್ಲಿ ಘಾತುಕರ ಬೆಂಬಿದ್ದು ವೀರಾವೇಶ ತೋರಿಸೋ ಕೆಲಸ ಹೀರೋನದ್ದೇ ಆಗಿರುತ್ತೆ. ಆದರೆ ಆ ಜವಾಬ್ದಾರಿಯನ್ನಿಲ್ಲಿ ನಾಯಕಿಗೆ ವರ್ಗಾಯಿಸಲಾಗಿದೆ. ಆಕೆಯೇ ಇಲ್ಲಿ ಹೀರೋ ಆಗಿಯೂ ಮಿಂಚಿದ್ದಾಳೆ.


ನಿರ್ದೇಶಕ ಮಹೇಶ್ ಗೌಡರ ಹೊಸಾ ಪ್ರಯೋಗಗಳ ತುಡಿತ ಈ ಚಿತ್ರದುದ್ದಕ್ಕೂ ಎದ್ದು ಕಾಣಿಸುತ್ತವೆ. ಆದರೆ ಒಂದೆ ಚಿತ್ರದಲ್ಲಿ ಅದೆಲ್ಲವನ್ನೂ ಮಾಡ ಹೊರಟಿರೋ ಹುಮ್ಮಸ್ಸೇ ಅಲ್ಲಲ್ಲಿ ಹೊಡೆತವನ್ನೂ ಕೊಟ್ಟಿದೆ. ಇಂಟರ್‌ವಲ್ ವರೆಗೂ ಈ ಚಿತ್ರ ರೋಡ್ ಜರ್ನಿಯ ಮೂಲಕವೇ ಸಾಗುತ್ತೆ. ಆ ನಂತರದಲ್ಲಿ ಕಥೆ ನಾನಾ ಸ್ವರೂಪದಲ್ಲಿ ಟಿಸಿಲೊಡೆದು ಹರಡಿಕೊಳ್ಳುತ್ತೆ. ಈ ಚಿತ್ರದಲ್ಲಿರೋದೇ ಬೆರಳೆಣಿಕೆಯಷ್ಟು ಪಾತ್ರಗಳು. ಲೊಕೇಷನ್ನುಗಳೂ ಕೂಡಾ ಅದಕ್ಕೆ ತಕ್ಕುದಾಗಿವೆ. ಹೀಗೆ ಸೀಮಿತವಾದ ಪಾತ್ರಗಳು ಮತ್ತು ಲೊಕೇಷನ್ನುಗಳ ಮೂಲಕವೇ ಮಹತ್ತರವಾದುದೇನನ್ನೋ ಹೇಳೋ ಕಾತರ ಹಾಗೂ ಅದುವೇ ಸ್ಪೀಡ್ ಬ್ರೇಕರಿನಂತೆ ಅಲ್ಲಲ್ಲಿ ತೊಡರಾಗುವ ಸಂಕಟಗಳನ್ನೆಲ್ಲ ಮಹಿರಾ ನೋಡುಗರಿಗೆ ದಾಟಿಸುತ್ತೆ.


ಇಲ್ಲಿ ದೇವಕಿ ಅಲಿಯಾಸ್ ಮಾಯಾ ಅಧಿಕಾರಿಣಿಯಾಗಿ ಇಡೀ ಕಥೆಯ ಮುಖ್ಯ ಪಾತ್ರ. ಈಕೆ ತನ್ನ ಪತಿ ಕಿಶೋರ್ ಜೊತೆಗೂಡಿ ಕ್ರಿಮಿನಲ್‌ಗಳ ಬೆಂಬೀಳುವ ಸನ್ನಿವೇಶಗಳು, ಅಲ್ಲಿಯೇ ನಡೆಯೋ ಮಸಲತ್ತು, ಸುಳಿವು ಕೊಡದೇ ಕಣ್ಣೆದುರು ನಿಲ್ಲೋ ಟ್ವಿಸ್ಟುಗಳೆಲ್ಲವೂ ಮಹಿರಾದಲ್ಲಿವೆ. ಆದರೆ ಎಲ್ಲ ಇದ್ದೂ ಏನೋ ಕೊರತೆ ಚಿತ್ರದುದ್ದಕ್ಕೂ ಸಾಥ್ ನೀಡುತ್ತದೆ. ಇಂಥಾ ಗೊಂದಲದ ಭಾವವನ್ನು ಪ್ರೇಕ್ಷಕರಲ್ಲಿ ಹುಟ್ಟಿಸೋ ಮೂಲಕ ಪರಿಣಾಮಕಾರಿಯಾಗಬಹುದಿದ್ದ ದೃಷ್ಯಗಳೂ ಕೂಡಾ ಕೆಲವೊಂದೆಡೆ ಸಡಿಲಗೊಂಡಂತೆ ಭಾಸವಾಗುತ್ತದೆ. ಕೆಲ ಸನ್ನಿವೇಷಗಳಲ್ಲಿಯಂತೂ ನೋಡುಗರ ಬಿಪಿ ರೈಜಾಗುವಂತೆಯೂ ಮಾಡಿ ಬಿಡುತ್ತದೆ.


ದೇವಕಿ ಪಾತ್ರದಲ್ಲಿ ವರ್ಜಿನಿಯಾ ಮನದುಂಬಿ ನಟಿಸಿದ್ದಾರೆ. ಅವರು ಮಾಸ್ ಅವತಾರದಲ್ಲಿಯೂ ಮನ ಸೆಳೆಯುತ್ತಾರೆ. ಮಗಳ ಪಾತ್ರದಲ್ಲಿ ಚೈತ್ರಾ ಆಚಾರ್, ಮಾಯಾ ಪಾತ್ರದ ಬೆಂಬೀಳುವ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ, ತನಿಖಾ ದಳದ ಅಧಿಕಾರಿಯಾಗಿ ಬಾಲಾಜಿ ಮನೋಹರ್ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ವರ್ಜಿನಿಯಾ ರಿಯಲ್ ಸ್ಟಂಟ್‌ಗಳ ಮೂಲಕ ನಾಯಕಿ ಪ್ರಧಾನ ಪಾತ್ರಗಳಲ್ಲಿ ಇನ್ನು ಮುಂದೆಯೂ ಮುಂದುವರೆಯೋ ಛಾತಿಯನ್ನು ಪ್ರದರ್ಶಿಸಿದ್ದಾರೆ. ಇನ್ನೊಂದಷ್ಟು ತಯಾರಿ ಮಾಡಿಕೊಂಡಿದ್ದರೆ ಮಹಿರಾ ಎಂಬುದು ಹೊಸಾ ಅಲೆಯ, ಪ್ರಯೋಗಾತ್ಮಕ ಚಿತ್ರವಾಗಿಯೂ ಯಶ ಕಂಡಿತ್ತು. ಆದರೆ ಹೊಸತು ಸೃಷ್ಟಿಸೋ ಅತೀ ಆತುರವೇ ಇಡೀ ಸಿನಿಮಾದ ಒಟ್ಟಂದಕ್ಕೆ ತೊಡರಾದಂತೆ ಕಾಣಿಸುತ್ತದೆ.

ರೇಟಿಂಗ್: ೨/೫

LEAVE A REPLY

Please enter your comment!
Please enter your name here