ಭ್ರಮೆಗಳಲ್ಲೇ ಮಿಂದೆದ್ದು ಭ್ರಮನಿರಸನ ಮಾಡೋ ದಶರಥ!

[adning id="4492"]

ಕ್ರೇಜೀಸ್ಟಾರ್ ರವಿಚಂದ್ರನ್ ಅಭಿನಯದ ದಶರಥ ಚಿತ್ರ ಪದೇ ಪದೆ ಬಿಡುಗಡೆ ದಿನಾಂಕವನ್ನು ಬ್ರೇಕ್ ಮಾಡಿಕೊಂಡು ಕಡೆಗೂ ತೆರೆ ಕಂಡಿದೆ. ಒಂದಷ್ಟು ಸುದ್ದಿ ಮಾಡಿ, ಬಿಡುಗಡೆ ದಿನಾಂಕ ಘೋಷಿಸಿಕೊಂಡು ಬಳಿಕ ಸೈಲೆಂಟಾಗುತ್ತಿದ್ದ ದಶರಥ ಥೇಟರಿಗೆ ಬಂದು ಹೋಗಿಯಾಗಿದೆ ಅಂತ ಅನೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ, ಹೀಗೆ ತಡ ಮಾಡುತ್ತಲೇ ಕಡೆಗೂ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಿರೋ ದಶರಥ ಬೆರಗು ಮೂಡಿಸುವಂತೆ ಮೂಡಿ ಬಂದಿದ್ದರೆ ಅದರ ಮಜವೇ ಬೇರೆಯದ್ದಿರ ಬಹುದಿತ್ತು. ನಿರ್ದೇಶಕರ ತೆಳು ಗ್ರಹಿಕೆ, ಸಾಮಾಜಿಕ ಕಾಳಜಿಯನ್ನು ಕಮರ್ಶಿಯಲ್ ಫಾರ್ಮುಲಾದೊಂದಿಗೆ ಬೆರೆಸುವಲ್ಲಿನ ಗೊಂದಲವೂ ಸೇರಿದಂತೆ ಹಲವು ಕೊರತೆಗಳೊಂದಿಗೆ ಸೊರಗಿದ ದಶರಥ ಪ್ರೇಕ್ಷಕರಲ್ಲಿ ಮಿಶ್ರ ಭಾವಗಳನ್ನಷ್ಟೇ ಉಳಿಸಿ ಬಿಟ್ಟಿದ್ದಾನೆ!


ದಶರಥ ವೃತ್ತಿಯಲ್ಲಿ ಲಾಯರ್. ಸಮಾಜದಲ್ಲಿ ಅನ್ಯಾಯ ಕಂಡರೆ ಸಿಡಿದೇಳೋ ಮನಸ್ಥಿತಿ ಹೊಂದಿರೋ ದಶರಥನ ಮಗಳಿಗೇ ಮಹಾ ಮೋಸವಾಗಿ ಬಿಡುತ್ತೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ದಶರಥ ಅದಕ್ಕೆ ಕಾರಣರಾದವರನ್ನು ಹೇಗೆ ಮಟ್ಟ ಹಾಕುತ್ತಾನೆಂಬುದನ್ನು ಸೂಕ್ಷ್ಮವಾದ ಕಥಾ ಹಂದರದ ಮೂಲಕವೇ ನಿರೂಪಿಸೋ ಪ್ರಯತ್ನವನ್ನು ನಿರ್ದೇಶಕ ಎಂ ಎಸ್ ರಮೇಶ್ ಮಾಡಿದ್ದಾರೆ. ದಶರಥನದ್ದು ಕಾರಣ ಒಳ್ಳೆಯದೇ ಆಗಿದ್ದರೆ ಕಾರ್ಯ ಕೆಟ್ಟದ್ದಾಗಿದ್ದರೂ ಪರವಾಗಿಲ್ಲ ಎಂಬಂಥಾ ಮನಸ್ಥಿತಿ. ಆದ್ದರಿಂದಲೇ ತಾನೇ ಸ್ವತಃ ಲಾಯರ್ ಆಗಿದ್ದರೂ ತಾನೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಾನೆ.


ಹಾಗೆ ನೋಡಿದರೆ ಅಪ್ಪ ಮಗಳ ಸುತ್ತ ಜರುಗೋ ಕಥೆಯಂತೆ ಕಾಣೋ ಇದರ ಕಥಾ ಎಳೆ ಕೌಟುಂಬಿಕ ಪರಿಧಿಗೆ ಮಾತ್ರವೇ ಸೀಮಿತವಾಗಿಲ್ಲ. ಅದರಲ್ಲಿ ಸಾಮಾಜಿಕ ಅಂಶಗಳೇ ಪ್ರಧಾನವಾಗಿವೆ. ಆದರೆ ಅದನ್ನು ಅದೇ ಹಾದಿಯಲ್ಲಿ ಕಟ್ಟಿ ಕೊಟ್ಟಿದ್ದರೆ ದಶರಥ ಕಂಡಿತಾ ಒಂದೊಳ್ಳೆ ಸಿನಿಮಾವಾಗಿ ನೆಲೆಗೊಳ್ಳಬಹುದಿತ್ತು. ನಿರ್ದೇಶಕರು ನಾಯಕನ ಬಾಯಿಂದ ಸಮಾಜೋದ್ದಾರದ ಮಾತುಗಳನ್ನು ಹೇಳಿಸುತ್ತಲೇ ಅಲ್ಲಲ್ಲಿ ಕಣ್ಣಿಗೆ ರಾಚುವಂಥಾ ಅವಾಸ್ತವಿಕ ಹಳಿ ಹತ್ತಿ ಪಯಣ ನಡೆಸಿದ್ದಾರೆ. ಪೊಲೀಸ್ ಸ್ಟೇಷನ್ನಿನೊಳಗೆ ನಡೆಯೋ ಸನ್ನಿವೇಶವೂ ಸೇರಿದಂತೆ ದಶರಥನ ಹಲವು ದೃಷ್ಯಾವಳಿಗಳು ತೀರಾ ಸಿನಿಮೀಯ ಅನ್ನಿಸಿಕೊಳ್ಳುತ್ತದೆ. ದೌರ್ಜನ್ಯಕ್ಕೀಡಾದ ಮಗಳ ನೆರವಿಗೆ ನಿಲ್ಲೋ ತಂದೆಯ ಕಥೆಯನ್ನು ಆಕರ್ಷಕ ಎಲಿಮೆಂಟುಗಳೊಂದಿಗೇ ಹೇಳಿರುವ ನಿರ್ದೇಶಕರು ಅದಕ್ಕೊಂದು ಸ್ಪಷ್ಟ ರೂಪುರೇಷೆ ಕೊಡುವಲ್ಲಿ ಎಡವಿದ್ದಾರೆ.


ರವಿಚಂದ್ರನ್ ಅವರಿಗಿಲ್ಲಿ ಈ ಹಿಂದೆ ತೆರೆ ಕಂಡಿದ್ದ ದೃಷ್ಯ ಚಿತ್ರದಂಥಾದ್ದೇ ಪಾತ್ರ ಸಿಕ್ಕಿದೆ. ತಮಗೆ ವಹಿಸಿರೋ ಜವಾಬ್ದಾರಿಯನ್ನವರು ಸರಿಯಾಗಿಯೇ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಅಭಿರಾಮಿ ಮತ್ತು ಮಗಳಾಗಿ ನಟಿಸಿರೋ ಮೇಘಶ್ರೀ ನಟನೆಯ ಬಗ್ಗೆಯೂ ಎರಡು ಮಾತಾಡುವಂತಿಲ್ಲ. ಒಂದಷ್ಟು ನಿಗಾ ವಹಿಸಿದ್ದರೆ ದಶರಥನನ್ನು ಬೇರೆಯದ್ದೇ ಮಟ್ಟದಲ್ಲಿ ಕಟ್ಟಿ ಕೊಡಬಹುದಿತ್ತು. ಆದರೆ ಸಾಮಾಜಿಕ ಮೌಲ್ಯವಿರೋ ಸೂಕ್ಷ್ಮ ಕಥನವನ್ನು ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸೋ ಭರದಲ್ಲಿ ಇಲ್ಲಿನ ದೃಷ್ಯಗಳ ಅತ್ತಲೂ ವಾಲದೆ, ಇತ್ತಲೂ ಕದಲದ ತ್ರಿಶಂಕು ಸ್ಥಿತಿಯಲ್ಲಿ ನಲುಗಿದೆ. ಕ್ಯಾಮೆರಾ ವರ್ಕ್ ಮತ್ತು ಹಾಡುಗಳು ಇದ್ದುದರಲ್ಲಿ ಕೊಂಚ ಸಹನೀಯವಾಗಿವೆ.

ರೇಟಿಂಗ್: ೨.೫/೫

[adning id="4492"]

LEAVE A REPLY

Please enter your comment!
Please enter your name here