ಯುವರತ್ನನ ಜೊತೆ ರೊಮ್ಯಾನ್ಸ್‌ಗೆ ರೆಡಿಯಾದರು ಸೋನು ಗೌಡ!

[adning id="4492"]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಈಗಾಗಲೇ ಯುವರತ್ನ ಮುಕ್ಕಾಲು ಭಾಗದಷ್ಟು ಚಿತ್ರೀಕರಣವನ್ನೂ ಮುಗಿಸಿಕೊಳ್ಳೋ ಹಂತದಲ್ಲಿದೆ. ಆದರೆ ಈ ಕ್ಷಣಕ್ಕೂ ನಿರ್ದೇಶಕ ಸಂತೋಷ್ ಆನಂದರಾಮ್ ತಾರಾಗಣಕ್ಕೆ ಕಲಾವಿದರನ್ನು ಭರ್ತಿ ಮಾಡುವ ಕಾರ್ಯವನ್ನ ಚಾಲ್ತಿಯಲ್ಲಿಟ್ಟಿದ್ದಾರೆ. ಈ ಕಾರಣದಿಂದಲೇ ಪ್ರೇಕ್ಷಕರು ಹೊಸದಾಗಿ ಯಾರ ಆಗಮನವಾಗಲಿದೆ ಅನ್ನೋದರತ್ತ ಕಣ್ಣು ನೆಟ್ಟು ಕೂತಿರುವಾಗಲೇ ಸೋನು ಗೌಡ ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಸೋನು ಗೌಡ ಯುವರತ್ನ ಚಿತ್ರಕ್ಕೆ ಆಗಮಿಸಿರೋ ಸುದ್ದಿಯನ್ನು ಸ್ವತಃ ಸಂತೋಷ್ ಆನಂದ್‌ರಾಮ್ ಅವರೇ ಸ್ಪಷ್ಟಪಡಿಸಿದ್ದಾರೆ. ಇಡೀ ಚಿತ್ರತಂಡ ಸೋನುಗೆ ವೆಲ್‌ಕಮ್ ಮಾಡೋ ಮೂಲಕ ಬರ ಮಾಡಿಕೊಂಡಿದ್ದಾರೆ. ಸೋನು ಗೌಡ ಸದ್ಯ ಬಹು ಬೇಡಿಕೆ ಹೊಂದಿರೋ ನಾಯಕಿ. ಯುವರತ್ನ ಚಿತ್ರಕ್ಕೆ ಅವರು ಆಗಮಿಸಿದ್ದಾರೆಂದರೆ ಪ್ರಧಾನ ಪಾತ್ರವೇ ಅವರಿಗಾಗಿ ಕಾದಿದೆ ಎಂದೇ ಅರ್ಥ. ಆದರೆ ಈಗಾಗಲೇ ಸಯೇಶಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದ್ದರಿಂದ ಇಲ್ಲೊಂದು ತ್ರಿಕೋನ ಪ್ರೇಮಕಥಾನಕ ಅರಳಿಕೊಳ್ಳಲಿದೆಯಾ ಎಂಬ ಕುತೂಹಲವೂ ಪುನೀತ್ ಅಭಿಮಾನಿಗಳಲ್ಲಿ ಚಿಗುರಿಕೊಂಡಿದೆ.

ಈಗಾಗಲೇ ಸೋನು ಗೌಡ ನಾಯಕಿಯರಲ್ಲೊಬ್ಬರಾಗಿ ನಟಿಸಿರೋ ಐ ಲವ್ ಯೂ ಚಿತ್ರ ಗೆಲುವು ಕಂಡಿದೆ. ಅದರಲ್ಲ ಉಪ್ಪಿಗೆ ಜೋಡಿಯಾಗಿ ನಟಿಸಿದ್ದ ಸೋನು ಪಾತ್ರದ ಬಗ್ಗೆಯೂ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆಗಳು ಹರಿದು ಬರುತ್ತಿವೆ. ಈ ಮೂಲಕವೇ ಅವರಿಗೊಂದು ಕಮರ್ಶಿಯಲ್ ಬ್ರೇಕ್ ಸಿಕ್ಕಿದೆ. ಇದುವರೆಗೂ ವೆರೈಟಿ ವೆರೈಟಿ ಚಿತ್ರಗಳಲ್ಲಿ ನಟಿಸುತ್ತಾ ಬಂದಿರೋ ಸೋನು ಪಾಲಿಗೀಗ ಅವಕಾಶಗಳು ಸಾಲುಗಟ್ಟಿ ನಿಂತಿವೆ. ಅದರಲ್ಲಿ ಯುವರತ್ನನಿಗೆ ಜೊತೆಯಾಗೋ ಬಂಪರ್ ಅವಕಾಶವನ್ನು ಸೋನು ಮೊದಲು ಆಯ್ಕೆ ಮಾಡಿಕೊಂಡಿದ್ದಾರೆ.

ಆದರೆ, ಯುವರತ್ನ ಚಿತ್ರದಲ್ಲಿ ಸೋನು ಗೌಡರದ್ದು ಯಾವ ಥರದ ಪಾತ್ರ ಎಂಬುದು ಮಾತ್ರ ಸಸ್ಪೆನ್ಸ್ ಆಗುಳಿದಿದೆ. ಅಷ್ಟಕ್ಕೂ ಇದುವರೆಗೂ ಪ್ರಕಾಶ್ ರೈ, ರಾಧಿಕಾ ಶರತ್ ಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರ ಎಂಟ್ರಿಯಾಗಿದೆ. ಆದರೆ ಅವರ‍್ಯಾರ ಪಾತ್ರಗಳ ಬಗ್ಗೆ ಸಣ್ಣ ಸುಳಿವನ್ನೂ ಕೂಡಾ ಸಂತೋಷ್ ಆನಂದರಾಮ್ ಬಿಟ್ಟುಕೊಟ್ಟಿಲ್ಲ. ಈ ಚಿತ್ರದಲ್ಲಿ ಸೋನು ಗೌಡರಿಗೆ ಚೆಂದದ ಪಾತ್ರವೇ ಸಿಕ್ಕಿದೆ ಮತ್ತದು ಪ್ರೇಕ್ಷಕರಿಗೂ ಥ್ರಿಲ್ ನೀಡಲಿದೆ ಅನ್ನೋದಂತೂ ಸತ್ಯ.

[adning id="4492"]

LEAVE A REPLY

Please enter your comment!
Please enter your name here