ಸದನದಲ್ಲೇ ಡಿಕೆಶಿ-ರಾಮುಲು ಮಧ್ಯೆ ನಡೆಯಿತಾ ಬಿಗ್ ಡೀಲ್?

[adning id="4492"]
ಸಮ್ಮಿಶ್ರ ಸರ್ಕಾರದ ಬುಡವೇ ಅಲ್ಲಾಡುತ್ತಿರೋ ಪ್ರಸ್ತುತ ವಾತಾವರಣದಲ್ಲಿ ರಾಜಕೀಯ ಕುದುರೆ ವ್ಯಾಪಾರದ ಪಟ್ಟುಗಳು ಜೋರಾಗಿಯೇ ಪ್ರದರ್ಶಿತವಾಗುತ್ತಿವೆ. ಬಹುಮತ ಸಾಬೀತಿಗಾಗಿ ನಡೆದಿರೋ ಸದನ ಕಲಾಪದಲ್ಲಿ ತೀರಾ ಸದನದೊಳಗೆಯೇ ಇಂಥಾ ಓಲೈಕೆ, ರಂಗು ರಂಗಾದ ಆಫರುಗಳ ವಿನಿಮಯವಾದ ಪ್ರಜಾ ಪ್ರಭುತದ ದುರಂತ ಕ್ಷಣಗಳಿಗೂ ಕರ್ನಾಟಕ ಸಾಕ್ಷಿಯಾಗಿದೆ. ಇದರಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಮಪಾಲೂ ಇದ್ದೇ ಇದೆ!
ಇಂಥಾ ದುರಂತದ ಭಾಗವಾಗಿಯೇ ಕಲಾಪದ ಊಟದ ವಿರಾಮದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಶ್ರೀರಾಮುಲು ನಡುವೆ ಬಿಗ್ ಡೀಲೊಂದು ನಡೆದಿದೆಯೆಂಬ ಗುಮಾನಿ ಎಲ್ಲೆಡೆ ಹರಡಿಕೊಂಡಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತಿನ ಚರ್ಚೆಯ ನಡುವೆ ನಾನಾ ಗೌಜು ಗದ್ದಲದಲ್ಲಿಯೇ ಮಧ್ಯಾಹ್ನವಾಗಿ ಸ್ಪೀಕರ್ ಊಟದ ವಿರಾಮ ಘೋಶಿಸುತ್ತಲೇ ಇಂಥಾದ್ದೊಂದು ಪ್ರಹಸನ ನಡೆದಿದೆ.
ಕಳೆದ ಒಂದಷ್ಟು ಚುನಾವಣೆಗಳ ಸಂದರ್ಭಗಳಲ್ಲಿ ಬದ್ಧ ವೈರಿಗಳಂತೆ ಕಿತ್ತಾಡಿದ್ದ ಬಿಜೆಪಿಯ ಶ್ರೀರಾಮುಲು ಮತ್ತು ಡಿಕೆ ಶಿವಕುಮಾರ್ ಸದನದ ಆವರಣದಲ್ಲಿಯೇ ನಿಂತು ಮಾತಾಡಿಕೊಂಡ ಗುಸುಗುಸು ವಿಚಾರ ಎಲ್ಲರ ಗಮನ ಸೆಳೆದಿತ್ತು. ಹೀಗೆ ಒಂದಷ್ಟು ಕಾಲ ಮಾತಾಡಿಕೊಂಡ ಬಳಿಕ ವಿರುದ್ಧ ದಿಕ್ಕಿನತ್ತ ಮುಖಮಾಡಿ ನಡೆದ ಇಬ್ಬರಲ್ಲಿಯೂ ತುಂಬು ನಗುವಿತ್ತು. ಈ ನಗುವೇ ರಾಜಕೀಯ ಲೆಕ್ಕಾಚಾರದ ದಿಕ್ಕು ಬದಲಿಸಲಿದೆಯಾ ಅಂತೊಂದು ಗುಮಾನಿಗೂ ಕಾರಣವಾಗಿತ್ತು.
ಹೇಳಿಕೇಳಿ ಒಂದು ಪಕ್ಷದವರಿಗೆ ಮತ್ತೊಂದು ಪಕ್ಷದವರು ಗಾಳ ಹಾಕಿ ಕಾಯುತ್ತಾ ಕೂತಿದ್ದಾರೆ. ಇದೇ ಹೊತ್ತಿನಲ್ಲಿ ಡಿಕೆಶಿ ಮತ್ತು ರಾಮುಲು ನಡುವೆ ಯಾವ ಮಾತುಕತೆ ನಡೆದಿದೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಶುರುವಾಗಿತ್ತು. ಅದರ ಜೊತೆಗೇ ಇವರಿಬ್ಬರ ನಡುವೆ ನಡೆದಿದೆಯೆನ್ನಲಾದ ಬಿಗ್ ಡೀಲ್‌ನ ವಿವರಗಳೂ ಹರಿದಾಡಲಾರಂಭಿಸಿದ್ದವು. ಆ ಪ್ರಕಾರವಾಗಿ ಹೇಳೋದಾದರೆ ಡಿಕೆಶಿ ರಾಮುಲುಗೆ ಡಿಸಿಎಂ ಹುದ್ದೆಯ ಆಮಿಷವೊಡ್ಡಿ ಕಾಂಗ್ರೆಸ್‌ಗೆ ಸೆಳೆದುಕೊಳ್ಳಲು ಹವಣಿಸಿದ್ದಾರಂತೆ.
ಒಂದು ವೇಳೆ ಬಿಜೆಪಿ ಅಧಿಕಾರ ಹಿಡಿದರೆ ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಗಳಿದ್ದಾವೆ. ಆ ಸ್ಥಾನ ಏನೇ ಪ್ರಯತ್ನ ಪಟ್ಟರೂ ಬೇರೆಯವರಿಗೆ ಸಿಗೋದು ಕಷ್ಟ. ನೀವು ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಕೈ ಜೋಡಿಸಿದರೆ ಡಿಸಿಎಂ ಸ್ಥಾನ ಕೊಡುತ್ತೇವೆ. ಎಂಬ ಆಫರ್ ಅನ್ನು ರಾಮುಲುಗೆ ಡಿಕೆಶಿ ನೀಡಿದ್ದಾರೆನ್ನಲಾಗುತ್ತಿದೆ. ಅದಕ್ಕೆ ರಾಮುಲು ಏನಂದರು? ರಾತ್ರಿಯಿಡೀ ಸದನದಲ್ಲೇ ಮಲಗಿಕೊಂಡು ರಾಮುಲು ಯಾವ ನಿರ್ಧಾರ ತಳೆಯುತ್ತಾರೆಂಬ ಕುತೂಹಲವಂತೂ ಇದ್ದೇ ಇದೆ.
ಇದುವೇ ರಾಜಕಾರಣದ ಪ್ರಸ್ತುತ ಸ್ಥಿತಿಗತಿಗಳಲ್ಲಿ ಹೊಸಾ ಟ್ವಿಸ್ಟಿಗೆ ಕಾರಣವಾದರೂ ಅಚ್ಚರಿಯೇನಿಲ್ಲ. ತೀರಾ ಡಿಸಿಎಂ ಸ್ಥಾನವೆಂದರೆ ರಾಮುಲುಗೆ ಆಸೆಯ ಮುಲುಮುಲು ಖಂಡಿತಾ ಶುರುವಾಗಿರುತ್ತೆ. ಆದರೆ ಅದಕ್ಕೆ ಓಗೊಟ್ಟು ಬಿಜೆಪಿಗೆ ಕೈ ಕೊಟ್ಟರೆ ಪಕ್ಕೆ ಮುರಿಯೋದು ಗ್ಯಾರೆಂಟಿ ಎಂಬ ಆತಂಕ ಎಲ್ಲದಕ್ಕಿಂತಲೂ ದೊಡ್ಡದಾಗಿ ರಾಮುಲುವನ್ನು ಕಾಡೋದು ಖಚಿತ. ಹೇಳಿಕೇಳಿ ರಾಮುಲು ಗಣಿಗಳ್ಳ ಜನಾರ್ಧನ ರೆಡ್ಡಿಯ ಬಲಗೈ ಬಂಟನಾಗಿದ್ದಾತ. ಬಿಜೆಪಿಗೆ ಕೈ ಕೊಟ್ಟರೆ ಹಳೇ ಕೇಸುಗಳೆಲ್ಲ ಧೂಳು ಕೊಡವಿಕೊಂಡು ಹೆಗಲೇರೋ ಭಯವೇ ರಾಮುಲನನ್ನು ಬಿಜೆಪಿಯಲ್ಲಿ ಉಳಿಸಬಹುದೆಂಬ ಲೆಕ್ಕಾಚಾರ ಸದನದಲ್ಲಿ ಬೋರಲು ಬಿದ್ದಿರೋ ಬೂಕನಕೆರೆ ಯಡಿಯೂರಪ್ಪನಿಗೆ ನಿರಾಳ ಭಾವ ಮೂಡಿಸಿದಂತಿದೆ!
[adning id="4492"]

LEAVE A REPLY

Please enter your comment!
Please enter your name here