ರಾಜಕೀಯ ಕೊಚ್ಚೆಯ ವಿರುದ್ಧ ಕಿಡಿಕಾರಿದ ಬುದ್ಧಿವಂತ!


ರಾಜ್ಯ ರಾಜಕಾರಣವೆಂಬದೀಗ ಕೊಳೆತು ನಾರುವ ಕೊಚ್ಚೆಯಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮಂದಿಯ ಅಧಿಕಾರ ಉಳಿಸಿಕೊಳ್ಳುವ ಬಂಡಾಟ, ಬಿಜೆಪಿ ಮಂದಿಯ ಅಧಿಕಾರ ಕಿತ್ತುಕೊಳ್ಳುವ ಉತ್ಸಾಹದ ನಡುವೆ ರಾಜಕಾರಣಿಗಳ ಬಗ್ಗೆ ಜನಸಾಮಾನ್ಯರೂ ಅಸಹ್ಯ ಹೊಂದುವಂಥಾ ವಿದ್ಯಮಾನಗಳೇ ನಡೆಯುತ್ತಿವೆ. ಇಂಥಾ ವಾತಾವರಣದ ಬಗ್ಗೆ ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕರೂ ಆದ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡೋ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವವರೆಗೆ ಮಾತ್ರವೇ ಮತದಾರರಿಗೆ ಬೆಲೆ. ಆ ನಂತರ ನಾವೆಲ್ಲ ಮೂಕ ಪ್ರೇಕ್ಷಕರಷ್ಟೇ. ಇಂಥಾ ವ್ಯವಸ್ಥೆಯಲ್ಲಿ ಪ್ರಜೆಗಳಿಗೇ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು. ಆದ್ದರಿಂದಲೇ ಪ್ರಜೆಗಳೇ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಸಿ, ಪ್ರಜೆಗಳೇ ಕಾರ್ಯಕರ್ತರಾಗಿ ಗೆಲ್ಲಿಸಬೇಕು. ಇದನ್ನೆಲ್ಲ ಮತ್ತೊಬ್ಬ ನಾಯಕ ಮಾಡಲಿ ಎಂದು ಕಾಯಬಾರದು ಎಂಬರ್ಥದಲ್ಲಿ ಉಪ್ಪಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸಕಾರಾತ್ಮಕವಾದ ಪ್ರತಿಕ್ರಿಯೆಗಳೇ ವ್ಯಕ್ತವಾಗುತ್ತಿವೆ.ಈವತ್ತಿನ ಹೊಲಸು ರಾಜಕೀಯ ವ್ಯವಸ್ಥೆಯನ್ನು ಗಮನಿಸಿದರೆ, ಈ ಖೂಳ ರಾಜಕಾರಣಿಗಳಿಂದ ಮುಕ್ತಿ ಪಡೆಯಲು ಇಂಥಾದ್ದೊಂದು ಪರ್ಯಾಯ ಆಲೋಚನೆಯ ಅಗತ್ಯವಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಉಪ್ಪಿ ಆ ಪರ್ಯಾಯ ಆಲೋಚನೆ ತಾವು ಸ್ಥಾಪಿಸಿರೋ ಉತ್ತಮ ಪ್ರಜಾಕೀಯ ಪಕ್ಷವೇ ಎಂಬರ್ಥದಲ್ಲಿ ಮಾತಾಡಿದ್ದಾರೆ. ಈ ಮೂಲಕವೇ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ನಿರ್ಣಾಯಕವಾಗಿ ಅಖಾಡಕ್ಕಿಳಿಯುವ ಸುಳಿವನ್ನೂ ರವಾನಿಸಿದ್ದಾರೆ.

ಉಪ್ಪಿ ಆರಂಭದಲ್ಲಿ ಪ್ರಜಾಕೀಯ ಪಕ್ಷ ಆರಂಭಿಸಿದಾಗ ಅವರು ಹೇಳಿಕೊಂಡಿದ್ದ ಅಂಶಗಳ ಬಗ್ಗೆ ವಿರೋಧ, ಟೀಕೆಗಳು ವ್ಯಕ್ತವಾಗಿದ್ದವು. ಅವರ ಆಲೋಚನೆಗಳು ಅವರ ಸಿನಿಮಾ ದೃಷ್ಯಾವಳಿಗಳಂತೆಯೇ ಭ್ರಾಮಕವಾಗಿವೆ ಎಂಬ ಕುಹಕದ ಮಾತುಗಳೂ ಕೇಳಿ ಬಂದಿದ್ದವು. ಅದರಲ್ಲಿ ಸತ್ಯವಿರೋದೂ ಹೌದು. ಆದರೆ, ಈ ಅವಿವೇಕಿ ರಾಜಕಾರಣಿಗಳ ಮೆರೆದಾಟಕ್ಕೆ ಬ್ರೇಕ್ ಹಾಕಲು ಒಂದು ಪ್ರಯತ್ನವಾಗಿಯಾದರೂ ಉತ್ತಮ ಪ್ರಜಾಕೀಯ ಪಕ್ಷ ಈ ಹೊತ್ತಿನಲ್ಲಿ ಬೆಳಕಿಂಡಿಯಂತೆ ಕಾಣುತ್ತಿರೋದೇನು ಸುಳ್ಳಲ್ಲ. ಉಪ್ಪಿ ಸಿನಿಮಾ ಹ್ಯಾಂಗೋವರಿನಿಂದ ಹೊರ ಬಂದು ವಾಸ್ತವದ ಕಣ್ಣುಗಳಲ್ಲಿ ಈ ಸಮಾಜವನ್ನು ದಿಟ್ಟಿಸಿ ಮುಂದುವರೆದರೆ ಮುಂಬರುವ ದಿನಗಳಲ್ಲೊಂದು ಕ್ರಾಂತಿ ಸಂಭವಿಸಿದರೂ ಅಚ್ಚರಿಯೇನಿಲ್ಲ.

LEAVE A REPLY

Please enter your comment!
Please enter your name here