ಇದು ಅಖಾಡಕ್ಕಿಳಿಯಲು ಸಜ್ಜಾಗಿರೋ ಸಿಂಗನ ಅಸಲೀ ಶಕ್ತಿ!


ಯಶಸ್ವೀ ಸಿನಿಮಾಗಳು ಬಿಡುಗಡೆಯ ಕ್ಷಣಗಳಲ್ಲೊಂದು ಪಾಸಿಟಿವ್ ವಾತಾವರಣ ಸೃಷ್ಟಿಸಿರುತ್ತವಲ್ಲಾ? ಅಂಥಾದ್ದೇ ವಾತಾವರಣದೊಂದಿಗೆ ಸಿಂಗನ ಮೆರವಣಿಗೆ ಥೇಟರಿನತ್ತ ಹೊರಟಿದೆ. ದಿನವೊಂದು ಹೊರಳಿಕೊಂಡರೆ ಹಳ್ಳಿ ಘಮಲಿನ ಮಾಸ್ ಸಿಂಗ ಪ್ರೇಕ್ಷಕರನ್ನು ತಲುಪಿಕೊಳ್ಳಲಿದ್ದಾನೆ. ನಿರ್ಮಾಪಕ ಉದಯ್ ಮೆಹ್ತಾ ಈ ಚಿತ್ರವನ್ನು ತಮ್ಮ ವೃತ್ತಿ ಬದುಕಿನ ಮಹಾ ಕನಸಿನಂತೆಯೇ ಪೊರೆದಿದ್ದಾರೆ. ನಿರ್ದೇಶಕ ವಿಜಯ್ ಕಿರಣ್ ಕೂಡಾ ತಮ್ಮ ಇಷ್ಟೂ ವರ್ಷಗಳ ಅನುಭವಗಳನ್ನು ಧಾರೆಯೆರೆದು, ತಮ್ಮೆಲ್ಲ ಪ್ರತಿಭೆಯನ್ನು ಒಗ್ಗೂಡಿಸಿ ಸಿಂಗನನ್ನು ಶಶಕ್ತವಾಗಿ ರೂಪಿಸಿದ್ದಾರೆ. ಇಂಥಾ ಗಾಢವಾದ ಶ್ರದ್ಧೆ ಮತ್ತು ಸಿನಿಮಾ ಪ್ರೀತಿಯಿಂದಲೇ ಮೈ ಕೈ ತುಂಬಿಕೊಂಡಿರೋ ಸಿಂಗ ಚಿತ್ರ ಹೊಸಾ ದಾಖಲೆಯ ರೂವಾರಿಯಾಗೋ ಲಕ್ಷಣಗಳೇ ಎದ್ದು ಕಾಣಿಸುತ್ತಿವೆ.


ಕಥೆಗೆ ಕಾವು ಕೊಡುವ ಘಳಿಗೆಯಲ್ಲಿಯೇ ನಿರ್ದೇಶಕ ವಿಜಯ್ ಕಿರಣ್ ಸಿಂಗ ಚಿತ್ರವನ್ನ ಹೊಸತನಗಳಿಂದಲೇ ಶೃಂಗರಿಸುವ ಇರಾದೆಯಿಂದ ಮುಂದುವರೆದಿದ್ದರು. ಆ ಸಮಯದಲ್ಲಿ ಚಿರು ಕೂಡಾ ಇಂಥಾದ್ದೊಂದು ಬದಲಾವಣೆಗೆ, ಹೊಸತನಕ್ಕೆ ಹಾತೊರೆದು ನಿಂತಿದ್ದರು. ಹಾಗಂತ ಏಕಾಏಕಿ ಈ ಕಥೆ ಸಿದ್ಧಗೊಂಡಿಲ್ಲ. ಇದು ಅಂತಿಮ ಹಂತ ತಲುಪಿಕೊಳ್ಳಲು ವರ್ಷಗಟ್ಟಲೆ ಸಮಯ ಹಿಡಿದಿದೆ. ಅದಕ್ಕೆ ಕಾರಣವಾಗಿದ್ದದ್ದು ಭಿನ್ನವಾದ ಪಾತ್ರ ಸೃಷ್ಟಿ ಮತ್ತು ಅದಕ್ಕೆ ತಕ್ಕುದಾದ ತಾರಾಗಣ.

ಸಾಮಾನ್ಯವಾಗಿ ಪ್ರತೀ ನಟ ನಟಿಯರೂ ತಮಗೇ ಗೊತ್ತಿಲ್ಲದಂತೆ, ಮೀರಿಕೊಳ್ಳುವ ಮಾರ್ಗವಿಲ್ಲದೆ ಇಮೇಜ್ ಎಂಬ ಚೌಕಟ್ಟಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ತಾರೆ. ಆ ನಂತರ ಅದಕ್ಕೆ ತಕ್ಕುದಾದ ಪಾತ್ರಗಳೇ ಸೃಷ್ಟಿಯಾಗುತ್ತಾ ಸಿನಿಮಾ ಮಾತ್ರವೇ ಬದಲಾಗುತ್ತಾ ಸಾಗಿದ್ದಾರೆ. ಈ ನಿಟ್ಟಿನಲ್ಲಿ ನೋಡ ಹೋದರೆ ಸಿಂಗ ಅನೇಕ ನಟ ನಟಿಯರನ್ನು ಅಂಥಾ ಚೌಕಟ್ಟಿನಿಂದ ಪಾರುಗಾಣಿಸುವಂತೆ ಮೂಡಿ ಬಂದಿದೆ.


ಈ ಚಿತ್ರದಲ್ಲಿ ರವಿಶಂಕರ್ ಪ್ರಧಾನವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ರವಿಶಂಕರ್ ಎಂದರೆ ಎದುರಾಳಿಗಳ ಎದೆಯದುರಿಸೋ ಖಳನ ಪಾತ್ರವೇ ಕಣ್ಮುಂದೆ ಬರುತ್ತದೆ. ಆದರೆ ಸಿಂಗ ಚಿತ್ರದಲ್ಲಿ ಅವರ ಪಾತ್ರ ಅದಕ್ಕೆ ತದ್ವಿರುದ್ಧವಾಗಿದೆ. ಹಾಗಾದರೆ ಅವರಿಲ್ಲಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲವಾ ಎಂಬ ಪ್ರಶ್ನೆಗೆ ದಿನದೊಪ್ಪತ್ತಿನಲ್ಲಿಯೇ ಉತ್ತರ ಸಿಗಲಿದೆ. ಇನ್ನುಳಿದಂತೆ ಕಾಮಿಡಿಗೆ ಮಾತ್ರವೇ ಸೀಮಿತವಾಗಿದ್ದ ಶಿವರಾಜ್ ಕೆ ಆರ್‌ಪೇಟೆಯವರನ್ನೂ ಕೂಡಾ ಇಲ್ಲಿ ಭಿನ್ನ ಪಾತ್ರದ ಮೂಲಕವೇ ಮಿಂಚಿಸಲಾಗಿದೆ. ನಾಯಕ ಚಿರಂಜೀವಿ ಸರ್ಜಾ, ನಾಯಕಿ ಅದಿತಿ ಪ್ರಭುದೇವ, ಹಿರಿಯ ನಟಿ ತಾರಾ ಪಾತ್ರಗಳು ಸೇರಿದಂತೆ ಇಡೀ ತಾರಾಗಣವೇ ಪ್ರೇಕ್ಷಕರಲ್ಲೊಂದು ಪುಳಕ ಮೂಡಿಸಲಿದೆ.

LEAVE A REPLY

Please enter your comment!
Please enter your name here