ನಾನು ಆರೋಗ್ಯವಾಗಿದ್ದೇನೆ ಅಂದ್ರು ದ್ವಾರಕೀಶ್!


ನೆನ್ನೆಯಿಂದಲೇ ಕರ್ನಾಟಕದ ತುಂಬಾ ವಾಟ್ಸಾಪ್ ಮೂಲಕ ಅದೊಂದು ಸುದ್ದಿ ಹರಡಿಕೊಂಡಿತ್ತು. ಕೆಲ ಮಂದಿಯಂತೂ ಅದು ಸತ್ಯವೋ ಸುಳ್ಳೋ ಎಂಬ ಪರಾಮರ್ಶೆ ನಡೆಸದೆ ಧಾರಾಕಾರವಾಗಿ ಶ್ರದ್ಧಾಂಜಲಿ ಸಮರ್ಪಿಸಿ ಬಿಟ್ಟಿದ್ದರು. ಹಾಗೆ ಎಲ್ಲೆಡೆ ಹರಡಿಕೊಂಡು ಸಿನಿಪ್ರೇಮಿಗಳಿಗೆ ಶಾಕ್ ನೀಡಿದ್ದದ್ದು ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದಾರೆಂಬ ಸುದ್ದಿ. ನಿಜಾಂಶವೆಂದರೆ, ದ್ವಾರಕೀಶ್ ಅವರಿಗೇನೂ ಆಗಿಲ್ಲ. ಅವರು ಆರೋಗ್ಯದಿಂದಿದ್ದಾರೆ.

ತಮ್ಮ ಬಗ್ಗೆ ಹರಡಿಕೊಂಡಿರೋ ಇಂಥಾದ್ದೊಂದು ಸುದ್ದಿಗೆ ಸಮಚಿತ್ತದಿಂದಲೇ ದ್ವಾರಕೀಶ್ ಅವರು ಪ್ರತಿಕ್ರಿಯಿಸಿದ್ದಾರೆ. ತಾವು ಆರೋಗ್ಯದಿಂದಿರೋದಾಗಿ ಹೇಳಿರುವ ದ್ವಾರಕೀಶ್, ಇಂಥಾ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಿರುವಂತೆಯೂ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ, ಕನ್ನಡಿಗರೆಲ್ಲರ ಪ್ರೀತಿಯಿಂದ ನಾನು ಆರೋಗ್ಯವಾಗಿದ್ದೇನೆ ಮತ್ತು ಆರೋಗ್ಯವಾಗಿಯೇ ಇರುತ್ತೇನೆಂಬ ಲವಲವಿಕೆಯಿಂದಲೇ ದ್ವಾಕೀಶ್ ಇಂಥಾದ್ದೊಂದು ಆಘಾತಕರ ಸುಳ್ಳು ಸುದ್ದಿಗಳಿಗೆ ಉತ್ತರ ನೀಡಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿರುವವರನ್ನು ಹೀಗೆ ಏಕಾಏಕಿ ಕೊಂದು ಹಾಕಿ ಮಜಾ ನೋಡುವ ಕಾಯಿಲೆ ಬಹು ಹಿಂದಿನಿಂದಲೂ ಇದೆ. ಆದರೆ ಆ ಕಾಲದಲ್ಲಿ ಇಷ್ಟು ವೇಗವಾಗಿ ಸುದ್ದಿ ಹರಡಿಕೊಳ್ಳುತ್ತಿರಲಿಲ್ಲವಷ್ಟೆ. ಆದರೀಗ ವಾಟ್ಸಪ್‌ನಂಥಾ ವೇಗದ ಸಂವಹನ ಮಾಧ್ಯಮಗಳು ಬಂದಿರೋದರಿಂದ ಇಂಥ ಸುದ್ದಿಗಳು ಬೇಗನೆ ಹರಡಿಕೊಳ್ಳುತ್ತವೆ. ಕಿಡಿಗೇಡಿಗಳು ಸುಮ್ಮನೆ ಒಂದು ಕಿಡಿ ಹಚ್ಚಿದರೂ ಅದು ಎಲ್ಲರ ಮೊಬೈಲುಗಳಲ್ಲಿ ಧಗಧಗಿಸುತ್ತದೆ.

ದ್ವಾರಕೀಶ್ ನಿಧನರಾಗಿದ್ದಾರೆಂಬಂಥಾ ಸುದ್ದಿಯ ಹಿಂದೆಯೂ ಅಂಥಾದ್ದೇ ಕಿಡಿಗೇಡಿಗಳ ಪಾತ್ರವಿದ್ದಂತಿದೆ. ಇದೂ ಸೇರಿದಂತೆ ಇಂಥಾ ಅನೇಕ ಸುಳ್ಳು ಸುದ್ದಿಗಳನ್ನು ಹರಡಿಸುವವರ ವಿರುದ್ಧ ಇನ್ನಾದರೂ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ. ಇದೆಲ್ಲ ಏನೇ ಇದ್ದರೂ ಕರ್ನಾಟಕದ ಕುಳ್ಳ ದ್ವಾರಕೀಶ್ ಆರೋಗ್ಯದಿಂದಿದ್ದಾರೆಂಬ ಸುದ್ದಿಯಿಂದ ಎಲ್ಲರೂ ರಿಲೀಫಾಗಿದ್ದಾರೆ.

LEAVE A REPLY

Please enter your comment!
Please enter your name here