ರೆಬೆಲ್ ಆಗಲು ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್!


ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮುಳುವಾಗಿರುವ ಅತೃಪ್ತರ ನಡೆ ಇನ್ನೂ ನಿಗೂಢವಾಗಿದೆ. ಒಂದೆಡೆಯಲ್ಲಿ ಕೋಟಿ ಕೋಟಿ ಕಾಸಿನಾಸೆಗೆ ರಾಜೀನಾಮೆಯ ನಾಟಕ ಕಟ್ಟುತ್ತಿದ್ದಾರೆಂಬ ಆರೋಪ ಅತೃಪ್ತ ಶಾಸಕರ ಮೇಲಿದೆ. ಆದರೆ ಹಂತ ಹಂತವಾಗಿ ಒಬ್ಬೊಬ್ಬರೇ ಶಾಸಕರು ತಾವು ಬಂಡಾಯವೇಳುವುದಕ್ಕೆ ಅಸಲೀ ಕಾರಣವೇನೆಂಬುದನ್ನು ಜಾಹೀರು ಮಾಡುತ್ತಿದ್ದಾರೆ. ಇದೀಗ ಬಂಡಾಯ ಬಣದಲ್ಲಿರೋ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕೂಡಾ ಅಂಥಾದ್ದೊಂದು ಕಾರಣವನ್ನ ಜಾಹೀರು ಮಾಡಿದ್ದಾರೆ.

ಶಿವರಾಮ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೇನು ಕಾರಣ ಎಂದು ಇದೇ ಮೊದಲ ಬಾರಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ ಯಾಚಿಸುತ್ತಾ, ಇಂಥ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ ಅಥವಾ ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

‘ಮಾನ್ಯರೇ, ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ, ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನೂ ತರವಲ್ಲಿ ಯಶಸ್ಸು ಕಾಣಲಿಲ್ಲ.  ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರೂ ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ತೋರಿಸಲಿಲ್ಲ ಹಾಗೂ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಂತೂ ಜಿಲ್ಲೆಯಿಂದ ಆರಿಸಿಬಂದ ಪಕ್ಷದ ಇನ್ನೊಬ್ಬ ಶಾಸಕನಾದ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ’. ಎಂದು ಬರೆದಿದ್ದಾರೆ.

‘ನನ್ನ ಕ್ಷೇತ್ರದ ಹಿತಾಸಕ್ತಿ ಬಿಟ್ಟು, ಯಾವುದೇ ಹಣ, ಆಸೆ ಆಮಿಷಗಳಿಗೆ ನನ್ನ ನೈತಿಕತೆಯನ್ನು ಮಾರಿಕೊಳ್ಳುವ ವ್ಯಕ್ತಿತ್ವ ಖಂಡಿತವಾಗಿಯೂ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ’ ಎಂದೂ ಶಿವರಾಮ ಹೆಬ್ಬಾರ್ ಹೇಳಿಕೊಂಡಿದ್ದಾರೆ. ಈ ಮೂಲಕವೇ ಈ ಭಾಗದ ಪ್ರಭಾವಿ ನಾಯಕ ಾರ್ ವಿ ದೇಶಪಾಂಡೆ ಮತ್ತು ತಮ್ಮ ನಡುವಿನ ಮುಸುಕಿನ ಗುದ್ದಾಟವೂ ರೆಬೆಲ್ ಆಗೋದಕ್ಕೆ ಪ್ರಧಾನ ಕಾರಣ ಎಂಬುದನ್ನು ಶಿವರಾಮ ಹೆಬ್ಬಾರ್ ಮತದಾರರ ಮುಂದೆ ತೆರೆದಿಟ್ಟಿದ್ದಾರೆ.

LEAVE A REPLY

Please enter your comment!
Please enter your name here