ಯಡಿಯೂರಿ ಹೇಳಿದ್ದ ಭವಿಷ್ಯ ನಿಜವಾಯ್ತೆಂದರು ವಾಲೆ ಮಂಜು!

ಅತ್ತ ಆಪರೇಷನ್ ಕಮಲದ ಕೂಸುಗಳಾದ ಅತೃಪ್ತ ಶಾಸಕರ ದಂಡು ಅತೃಪ್ತ ಆತ್ಮಗಳಂತೆ ಊರು ತುಂಬಾ ಅಂಡಲೆಯುತ್ತಿವೆ. ಇತ್ತ ಕುಮಾರಸ್ವಾಮಿಗಳು ಅದುರುತ್ತಿರೋ ಸಿಎಂ ಕುರ್ಚಿಯನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಈ ರೆಬೆಲ್ ಶಾಸಕರು ಯಾವ ಪರಿ ಮೊಂಡು ಬಿದ್ದಿದ್ದಾರೆಂದರೆ, ತೀರಾ ಟ್ರಬಲ್ ಶೂಟರ್ ಅನ್ನಿಸಿಕೊಂಡಿರೋ ಡಿ ಕೆ ಶಿವಕುಮಾರ್ ಪಟ್ಟುಗಳಿಗೂ ಅವರ‍್ಯಾರೂ ಬೆಲೆ ಕೊಡುತ್ತಿಲ್ಲ. ಮುಂಬೈನಲ್ಲಿ ಈ ಶಾಸಕರು ತಂಗಿದ್ದ ಹೊಟೇಲಿಗೇ ತೆರಳಿದ ಡಿಕೆಶಿ ಮುಂಬೈ ಪೊಲೀಸರಿಂದ ಹೊರ ದಬ್ಬಿಸಿಕೊಂಡು ಬೀದಿಯಲ್ಲಿ ನಿಲ್ಲೋ ಪರಿಸ್ಥಿತಿಯೂ ಬಂದೊದಗಿತ್ತು. ಯಾವಾಗ ಟ್ರಬಲ್ ಶೂಟರ್ ಡಿಕೆಶಿಯೇ ಹೀಗೆ ಕೈ ಚೆಲ್ಲಿ ನಿಂತರೋ ಆ ಕ್ಷಣದಲ್ಲಿ ಎಲ್ಲರಿಗೂ ನೆನಪಾದದ್ದು ಬೂಕನಕೆರೆಯ ಯಡಿಯೂರಪ್ಪ ಹೇಳಿದ್ದೊಂದು ನಿಖರ ಭವಿಷ್ಯ!

‘ಡಿಕೆ ಶಿವಕುಮಾರ್ ಅವ್ರೇ… ನಾ ಹೇಳೋದನ್ನ ಕೇಳಿ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರೋ ನಿಮ್ಮನ್ನ, ಕಾಂಗ್ರೆಸ್ ಪಕ್ಷವನ್ನ ಈ ಅಪ್ಪಮಕ್ಕಳು ಬೀದಿಗೆ ತರ‍್ತಾರೆ ನೋಡ್ತಿರಿ’ ಎಂಬರ್ಥದ ಮಾತುಗಳನ್ನು ಡಿಕೆಶಿ ಮುಂದೆಯೇ ಆಡಿದ್ದವರು ಯಡಿಯೂರಪ್ಪ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರ ಗೆದ್ದುಕೊಳ್ಳಲೂ ಕಾಂಗ್ರೆಸ್ ಹರಸಾಹಸ ಪಟ್ಟಾಗಲೇ ಯಡಿಯೂರಪ್ಪನ ಭವಿಷ್ಯ ಅರ್ಧ ನಿಜವಾಗಿದೆ ಎಂದೇ ಬಹುತೇಕರು ಹೇಳಿಕೊಂಡಿದ್ದರು. ಇದೀಗ ಸಂಧಾನ ನಡೆಸಲು ಹೋದ ಡಿಕೆಶಿ ಮುಂಬೈ ಬೀದಿಯಲ್ಲಿ ನಿಲ್ಲುವಂತಾಗೋ ಮೂಲಕ ಯಡಿಯೂರಿಯ ಭವಿಷ್ಯ ಹಂಡ್ರೆಡ್ ಪರ್ಸೆಂಟು ನಿಜವಾಗಿದೆ ಅಂದಿರುವವರು ಎ. ಮಂಜು ಅಲಿಯಾಸ್ ವಾಲೆಮಂಜು


ಹಾಸನದಲ್ಲಿ ಪ್ರಸ್ತುತ ರಾಜಕೀಯ ಸ್ಥತಿಗತಿಗಳ ಬಗ್ಗೆ ಪ್ರತಿಕ್ರಿಯಿಸಿರೋ ಮಂಜು ಬೂಕನಕೆರೆ ಯಡಿಯೂರಪ್ಪನ ಜ್ಯೋತಿಷ್ಯ ಶಕ್ತಿಯನ್ನು ಕೊಂಡಾಡಿದ್ದಾರೆ. ‘ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಪವಿತ್ರ ಮೈತ್ರಿಯ ಭವಿಷ್ಯವನ್ನು ಆರಂಭದಲ್ಲಿಯೇ ಯಡಿಯೂರಪ್ಪನವರು ಹೇಳಿದ್ದರು. ಇದೀಗ ಅದು ನಿಜವಾಗಿದೆ. ಈ ಕಾರಣದಿಂದಲೇ ಕಾಂಗ್ರೆಸ್ ನಾಯಕರು ಪರಿತಪಿಸುವಂತಾಗಿದೆ. ಒಂದು ವೇಳೆ ಜೆಡಿಎಸ್ ಜೊತೆ ಕಾಮಗ್ರೆಸ್ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ನಾನೂ ಹೇಳಿದ್ದೆ. ಅದು ನಿಜವಾಗೋದರೊಂದಿಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೆ ಅಭಿವೃದ್ಧಿಯೂ ಸಾಧ್ಯವಿಲ್ಲ ಎಂಬ ವಿಚಾರವೂ ಸಾಬೀತಾಗಿದೆ’ ಅಂತ ಎ ಮಂಜು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಶತ್ರು ಕಂ ಲೋಕೋಪಯೋಗಿ ಸಚಿವ ರೇವಣ್ಣನನ್ನೂ ಮಂಜು ಕಟಕಿಯಾಡಿದ್ದಾರೆ. ರಾಜ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ರೆಬೆಲ್ ಆಗಿರೋ ಶಾಸಕರನ್ನು ಮನವೊಲಿಸಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ, ರೇವಣ್ಣ ಮಾತ್ರ ಲೋಕೋಪಯೋಗಿ ಖಾತೆಯಿಂದ ವರ್ಗಾವಣೆ ಖಾತೆಯನ್ನು ಆರಂಭಿಸಿ ಬಿಟ್ಟಿದ್ದಾರೆ. ಆ ಮೂಲಕ ಅವರು ಭರ್ಜರಿ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆಂದೂ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

 

ಇದೆಲ್ಲ ಏನೇ ಇದ್ದರೂ ಯಡಿಯೂರಪ್ಪ ಆರಂಭ ಕಾಲದಲ್ಲಿ ಡಿಕೆಶಿಗೆ ಹೇಳಿದ್ದ ಕಿವಿಮಾತಿಗೂ ಪ್ರಸ್ತುತ ವಾತಾವರಣಕ್ಕೂ ತಾಳೆಯಾಗುತ್ತಿರೋದೇನು ಸುಳ್ಳಲ್ಲ. ಅಪ್ಪ ಮಕ್ಕಳು ಬೀದಿಗೆ ತಂದರೋ, ಯಾರೇನು ಮಾಡಿದರೋ… ಅಂತೂ ಕಾಂಗ್ರೆಸ್ ಮಾತ್ರ ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಏಕಾಂಗಿಯಾಗಿಯೇ ಶಾಸಕರ ಮನವೊಲಿಸಲು ಮುಂಬೈಗೆ ಹೋಗಿದ್ದ ಡಿಕೆಶಿ ಬೀದೀಲಿ ನಿಲ್ಲೋ ಪ್ರಸಂಗದ ಮೂಲಕ ಯಡಿಯೂರಪ್ಪನ ಭವಿಷ್ಯದ ಮಜಲುಗಳನ್ನು ಸ್ವತಃ ಅನುಭವಿಸಿ ಬಂದಿದ್ದಾರೆ. ಮುಂದಿನ ರಾಜಕೀಯದಾಟಗಳು ಕಾಂಗ್ರೆಸ್‌ನ ಎಲ್ಲ ನಾಯಕರಿಗೂ ಅಂಥಾದ್ದೊಂದು ಅನುಭವ ತಂದೊಡ್ಡಿದ್ದರೂ ಅಚ್ಚರಿಯೇನಿಲ್ಲ!

LEAVE A REPLY

Please enter your comment!
Please enter your name here