ಒನ್ ಲವ್ 2 ಸ್ಟೋರಿ: ಸುನಿ ಲಾಂಚ್ ಮಾಡಿದ ಟ್ರೈಲರ್ ಸಿಂಪಲ್ ಆಗಿಲ್ಲ

ವಸಿಷ್ಟ ಬಂಟನೂರು ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಒನ್ ಲವ್ ಸ್ಟೋರಿ. ಇದೀಗ ಬಿಡುಗಡೆಗೆ ರೆಡಿಯಾಗಿರೋ ಈ ಸಿನಿಮಾ ಶೀರ್ಷಿಕೆಯಿಂದಲೇ ಪ್ರೇಮಕಥೆಯ ಹೊಳಹು ನೀಡುತ್ತಾ ಹೊಸಾ ಪ್ರಯೋಗಳಿರೋ ಸೂಚನೆಯೊಂದಿಗೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹೀಗಿರುವಾಗಲೇ ಒನ್ ಲವ್ 2  ಸ್ಟೋರಿಯ ಟ್ರೈಲರ್ ಅನ್ನು ನಿರ್ದೇಶಕ ಸಿಂಪಲ್ ಸುನಿ ಬಿಡುಗಡೆಗೊಳಿಸಿದ್ದಾರೆ.

ಈ ವರೆಗೂ ಒನ್ ಲವ್ 2 ಸ್ಟೋರಿ ಬಗ್ಗೆ ಪ್ರೇಕ್ಷಕರಲ್ಲೊಂದು ಅಂದಾಜಿತ್ತಲ್ಲಾ? ಅದಕ್ಕೆ ಮತ್ತೊಂದಷ್ಟು ಅಂಶಗಳನ್ನು ಸೇರಿಸಿ ಮತ್ತಷ್ಟು ಕುತೂಹಲ ಕಾವೇರುವಂತೆ ಮಾಡುವಲ್ಲಿಯೂ ಈ ಟ್ರೈಲರ್ ಗೆದ್ದಿದೆ. ಇದನ್ನು ಬಿಡುಗಡೆ ಮಾಡಿ ಸುನಿ ಮಾತಾಡಿರೋ ವಿಚಾರಗಳೇ ಸದರಿ ಸಿನಿಮಾದ ವೈಶಿಷ್ಟ್ಯಗಳಿಗೂ ಕನ್ನಡಿ ಹಿಡಿದಂತಿದೆ. ಸುನಿ ಮತ್ತು ವಸಿಷ್ಟ ಬಂಟನೂರು ಹಳೇಯ ಗೆಳೆಯರು. ಒಟ್ಟಾಗಿ ಸಿನಿಮಾ ಕನಸು ಕಾಣುತ್ತಲೇ ಬೇರೆ ಬೇರೆ ದಿಕ್ಕುಗಳತ್ತ ಹೊರಳಿಕೊಂಡವರು. ಅವರಿಬ್ಬರಿಗೂ ಈ ಹಾದಿಯಲ್ಲಿ ವಿಭಿನ್ನ ಅನುಭವಗಳೇ ದಕ್ಕಿವೆ.

ಇದೀಗ ನಿರ್ದೇಶಕನಾಗಿ ತಮ್ಮದೇ ಛಾಪು ಮೂಡಿಸಿರೋ ಸಿಂಪಲ್ ಸುನಿ ಗೆಳೆಯ ವಸಿಷ್ಟ ಬಂಟನೂರರ ಚೊಚ್ಚಲ ಚಿತ್ರದ ಟ್ರೈಲರ್ ಅನ್ನು ಮೆಚ್ಚಿಕೊಂಡಿದ್ದಾರೆ. ಈ ಟ್ರೈಲರ್ ನೋಡಿದರೆ ಆದಷ್ಟು ಬೇಗನೆ ಚಿತ್ರ ನೋಡುವ ಕಾತರ ಹುಟ್ಟುತ್ತದೆ ಎಂದಿರೋ ಸುನಿ, ಇದೊಂದು ಪ್ರಾಮಿಸಿಂಗ್ ಟ್ರೈಲರ್ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಒನ್ ಲವ್ 2 ಸ್ಟೋರಿ ಪ್ರೇಮಕಥೆಯನ್ನು ಹೊಂದಿದ್ದರೂ ಗಾಂಧಿನಗರದತ್ತಲೂ ಕಣ್ಣು ಹಾಯಿಸಿರೋ ಲಕ್ಷಣಗಳು ಟ್ರೈಲರ್ ಮೂಲಕ ಸ್ಪಷ್ಟವಾಗಿಯೇ ಗೋಚರಿಸಿದೆ. ನಿರ್ದೇಶಕನಾಗೋ ಕನಸು ಹೊತ್ತು ಗಾಂಧಿನಗರದ ಗಲ್ಲಿಯಲ್ಲಿ ಅಂಡಲೆಯುವ ಅದೆಷ್ಟೋ ಮಂದಿಯ ಪಾತ್ರನಿಧಿಕ ಎಂಬಂಥಾ ಪಾತ್ರವೊಂದು ಈ ಚಿತ್ರದಲ್ಲಿದೆ. ಹಾಗೆ ನಿರ್ದೇಶಕನಾಗೋ ಕನಸು ಹೊತ್ತು ಯುವಕನ ಪಾತ್ರವನ್ನು ಈ ಚಿತ್ರದ ನಿರ್ದೇಶಕ ವಸಿಷ್ಟ ಬಂಟನೂರು ಅವರೇ ನಿರ್ವಹಿಸಿರೋದು ವಿಶೇಷ.

ಇಷ್ಟೇ ಅಲ್ಲದೇ ಪ್ರೀತಿ ಪ್ರೇಮಗಳಾಚೆಗೆ ಆಕ್ಷನ್ ದೃಷ್ಯಾವಳಿಗಳ ಸುಳಿವು ನೀಡಿರೋ ಟ್ರೈಲರ್ ಇಲ್ಲಿನ ಕಥೆ ಎಣಿಕೆಗೆ ಸಿಗುವಷ್ಟು ಸಿಂಪಲ್ ಆಗಿಲ್ಲ ಎಂಬುದನ್ನೂ ಸ್ಪಷ್ಟಪಡಿಸುತ್ತದೆ. ನವ ನಾಯಕ ಸಂತೋಷ್, ಸಿದ್ಧಾರ್ಥ್, ಆಧ್ಯಾ ಆರಾಧನಾ, ಪ್ರಕೃತಿ ಸೇರಿದಂತೆ ಎಲ್ಲರ ಪಾತ್ರಗಳ ಝಲಕ್‌ಗಳೂ ಈ ಟ್ರೈಲರ್‌ನಲ್ಲಿ ಹಾದು ಹೋಗಿವೆ. ಈ ಮೂಲಕವೇ ಒನ್ ಲವ್ 2 ಸ್ಟೋರಿಯ ಮೇಲೆ ಪ್ರೇಕ್ಷಕರು ಮತ್ತಷ್ಟು ಮೋಹಗೊಳ್ಳುವಂತಾಗಿದೆ