ಮಿಷನ್ ಮಂಗಲ್‌ನಲ್ಲಿರಲಿದೆ ಕನ್ನಡತಿಯರ ಸಾಹಸ!

[adning id="4492"]

ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದರಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ ನಟಿಸಿರೋ ಸುಳಿವು ಸಿಕ್ಕು ಕನ್ನಡಿಗರೆಲ್ಲ ಖುಷಿಗೊಂಡಿದ್ದರು. ಇದೀಗ ಮಿಷನ್ ಮಂಗಲ್ ಚಿತ್ರದ ಕಡೆಯಿಂದ ಪ್ರತೀ ಕನ್ನಡಿಗರೂ ಹೆಮ್ಮೆ ಪಡುವಂಥಾ ಸುದ್ದಿಯೊಂದು ಹೊರ ಬಿದ್ದಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಈ ಚಿತ್ರದಲ್ಲಿ ಕನ್ನಡದ ಮೂವರು ವಿಜ್ಞಾನಿಗಳ ಸಾಹಸದ ಮೇಲೆಯೂ ಬೆಳಕು ಚೆಲ್ಲಲಾಗಿದೆಯಂತೆ.

ಮಿಷನ್ ಮಂಗಲ್ ಇಸ್ರೋದ ಮಂಗಳ ಯಾನದ ರೋಚಕ ಕಥೆ ಹೊಂದಿರೋ ಚಿತ್ರ. ಇದು ಮಂಗಲ ಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ ಕ್ಷಣಗಳ ಅಷ್ಟೂ ವಿವರಗಳನ್ನು ತಾಂತ್ರಿಕ ಮಾಹಿತಿಯ ಸಮೇತ ಕಟ್ಟಿ ಕೊಡಲಿದೆಯಂತೆ. ಹಾಗಿದ್ದ ಮೇಲೆ ಆ ಕ್ಷಣದಲ್ಲಿ ಅದರಲ್ಲಿ ಭಾಗಿಯಾದ ಅಷ್ಟೂ ವಿಜ್ಞಾನಿಗಳ ಬಗ್ಗೆಯೂ ಈ ಚಿತ್ರದಲ್ಲಿ ವಿವರಗಳಿರುತ್ತಾವೆಂದೇ ಅರ್ಥ.

ಈ ಮಂಗಳ ಯಾನ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಭಆರತದ ವಿವಿಧ ರಾಜ್ಯಗಳ ವಿಜ್ಞಾನಿಗಳ ಕೊಡುಗೆಯಿದೆ. ಅದರಲ್ಲಿಯೂ ಕರ್ನಾಟಕದವರಾದ ಬನ್ನಿಹಟ್ಟಿ ಪರಮೇಶ್ವರಪ್ಪ ದಾಕ್ಷಾಯಿಣಿ, ಅನುರಾಧಾ ಟಿ ಕೆ, ನಂದಿನಿ ಹರಿನಾಥ್ ಕೂಡಾ ಪ್ರಧಾನ ಪಾತ್ರ ವಹಿಸಿದ್ದಾರೆ. ಆದ್ದರಿಂದ ಈ ಮೂವರು ಕನ್ನಡಿಗ ವಿಜ್ಞಾನಿಗಳ ಬಗ್ಗೆಯೂ ಚಿತ್ರದಲ್ಲಿ ವಿವರಗಳಿರಲಿವೆ.

ಈ ಮೂಲಕವೇ ಪ್ರತೀ ಕನ್ನಡಿಗರ ಪಾಲಿಗೆ ಮಿಷನ್ ಮಂಗಲ್ ಚಿತ್ರದತ್ತ ಆಸಕ್ತಿ ಹೊರಳಿಕೊಂಡಿದೆ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯಂತಿರೋ ದತ್ತಣ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಹಲವಾರು ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ದತ್ತಣ್ಣನನ್ನು ಹಿಂದಿಯಲ್ಲಿ ನೋಡಲು ಪ್ರೇಕ್ಷಕರು ಕಾತರಿಸಿದ್ದಾರೆ. ಅದರೊಂದಿಗೆ ನಮ್ಮ ಹೆಮ್ಮೆಯ ಮೂವರು ವಿಜ್ಞಾನಿಗಳ ವಿವರವೂ ಅಲ್ಲಿದೆ ಎಂದ ಮೇಲೆ ಮಿಷನ್ ಮಂಗಲ್‌ನತ್ತ ಸಹಜವಾಗಿಯೇ ಕುತೂಹಲ ಹುಟ್ಟಿಕೊಳ್ಳುತ್ತೆ.

[adning id="4492"]

LEAVE A REPLY

Please enter your comment!
Please enter your name here