ಭರ್ಜರಿ ಸಾಹಸಗಳೊಂದಿಗೆ ಎಂಟ್ರಿ ಕೊಡಲಿದ್ದಾನೆ ಸಿಂಗ!

ಓರ್ವ ನಟನಾಗಿ ವಿಭಿನ್ನವಾದ ಅಭಿರುಚಿ ಹೊಂದಿರುವವರು ಚಿರಂಜೀವಿ ಸರ್ಜಾ. ತಾನು ನಟಿಸೋ ಚಿತ್ರಗಳ ಪ್ರತೀ ಪಾತ್ರಗಳೂ ವಿಶೇಷವಾಗಿರಬೇಕೆಂಬ ಹಂಬಲ ಹೊಂದಿರೋ ಅವರ ಸಿನಿಮಾ ಗ್ರಾಫು ಅದಕ್ಕೆ ತಕ್ಕುದಾಗಿಯೇ ಇದೆ. ಇತ್ತೀಚಿನ ದಿನಗಳಲ್ಲಿ ತನಗೆ ಬೇರೆ ಥರದ್ದೊಂದು ಬ್ರೇಕ್ ಬೇಕೆಂದು ಹಬಲಿಸಿದ್ದ ಚಿರು ಪಾಲಿಗೆ ಅದೃಷ್ಟವೆಂಬಂತೆ ಒಲಿದು ಬಂದಿರೋ ಚಿತ್ರ ಸಿಂಗ.

ಕಥೆ, ಕಲಾವಿದರು, ತಾಂತ್ರಿಕ ವರ್ಗ ಸೇರಿದಂತೆ ಎಲ್ಲ ವಿಭಾಗಗಳೂ ಒಂದೇ ಆವೇಗದೊಂದಿಗೆ ಸಮಾಗಮವಾದರೆ ಅಲ್ಲೊಂದು ರುಚಿಕಟ್ಟಾದ ಚಿತ್ರ ಹುಟ್ಟೋದು ಗ್ಯಾರೆಂಟಿ. ಅಂಥಾದ್ದೇ ತಂಡವೊಂದು ಸಿಂಗನ ಮೂಲಕ ಒಂದಾಗಿದೆ. ಕನ್ನಡ ಚಿತ್ರರಂಗಕ್ಕೆ ಹೊಸಾ ಥರದ ಚಿತ್ರಗಳನ್ನು ಕೊಡಬೇಕೆಂಬ ತುಡಿತ ಹೊಂದಿರೋ ನಿರ್ದೇಶಕ ವಿಜಯ್ ಕಿರಣ್, ಒಂದು ಸಿನಿಮಾ ನಿರ್ಮಾಣಕ್ಕಿಳಿದರೆ ಕಾಸು ಹಾಕೋದು ಮಾತ್ರವೇ ತನ್ನ ಕೆಲಸ ಅಂದುಕೊಳ್ಳದೇ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ಗಮನಿಸೋ ನಿರ್ಮಾಪಕ ಉದಯ್ ಮೆಹ್ತಾ ಮತ್ತು ಇದಕ್ಕೆ ಪೂರಕವಾದ ತಾಂತ್ರಿಕ ವರ್ಗದ ಸಾಥ್‌ನೊಂದಿಗೆ ಸಿಂಗ ಪೊಗದಸ್ತಾಗಿ ರೂಪುಗೊಂಡು ಥೇಟರಿನತ್ತ ಮುಖ ಮಾಡಿದ್ದಾನೆ.

ಇದು ಅಪ್ಪಟ ಸಾಹಸ ಪ್ರಧಾನ ಚಿತ್ರ ಎಂಬುದು ಈಗಾಗಲೇ ಗೊತ್ತಾಗಿದೆ. ಆದರೆ ಇಲ್ಲಿ ಚಿರು ನಿಭಾಯಿಸಿರೋ ಸಾಹಸ ಸನ್ನಿವೇಶಗಳು ಸಾದಾ ಶೈಲಿಯವಲ್ಲ. ಅದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತಿದೆ. ಇದರ ಹಿಂದೆ ಅಂಥಾದ್ದೇ ಶ್ರಮವೂ ಇದೆ. ಖ್ಯಾತ ಸಾಹಸ ನಿರ್ದೇಶಕರಾದ ರವಿವರ್ಮಾ ಮತ್ತು ಪಳನಿರಾಜ್ ಸೇರಿಕೊಂಡು ಸಿಂಗನ ಸಾಹಸ ಸನ್ನಿವೇಶಗಳನ್ನು ರೂಪಿಸಿದ್ದಾರೆ. ಇವರಿಬ್ಬರ ಸಾರಥ್ಯದಲ್ಲಿಯೇ ಚಿರಂಜೀವಿ ಸರ್ಜಾ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಸಿಂಗ ಕಥೆಯಲ್ಲಿ ನಾನಾ ವಿಶೇಷತೆಗಳಿವೆ. ಆದರೆ ಅದರಲ್ಲಿ ಪ್ರಧಾನವಾದದ್ದು ಸಾಹಸವೂ ಹೌದು.

ಇದು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಫುಲ್ ಮೀಲ್ಸ್‌ನಂಥಾ ಚಿತ್ರ ಎಂಬ ಭರವಸೆ ಖುದ್ದು ಚಿರಂಜೀವಿ ಸರ್ಜಾರಲ್ಲಿದೆ. ಅವರಿಗಿಲ್ಲಿ ನಾಯಕಿಯಾಗಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಜೊತೆಯಾಗಿದ್ದಾರೆ. ತಾರಾ ಅಮ್ಮನಾಗಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್ ಕೂಡಾ ಅಷ್ಟೇ ವಿಶೇಷವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಈ ವರೆಗೆ ರವಿಶಂಕರ್ ನಟಿಸುತ್ತಾ ಬಂದಿರೋ ಪಾತ್ರಗಳಂತೆ ಸಿಂಗನ ಪಾತ್ರವಿಲ್ಲ ಎಂಬ ವಿಚಾರವನ್ನೂ ಚಿತ್ರತಂಡ ಜಾಹೀರು ಮಾಡಿದೆ.

ಇನ್ನುಳಿದಂತೆ ಕಿರಣ್ ಹಂಪಾಪುರ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ಕಾಮಿಡಿ ಮಾತ್ರವಲ್ಲದೇ ಗಂಭೀರವಾದ, ಇಡೀ ಕಥೆಯಲ್ಲಿ ಪ್ರಧಾನ ಬಿಂದುವಿನಂಥಾ ಪಾತ್ರವನ್ನು ನಿಭಾಯಿಸಿದ್ದಾರೆ. ಕಿರುತೆರೆ ಶೋಗಳ ಮೂಲಕವೇ ಶೋಧಿಸಲ್ಪಟ್ಟ, ಹಿರಿತೆರೆಗೆ ಹೊಸಬರಾಗ ಕಾಮಿಡಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಪ್ರೀತಿ, ಸಾಹಸ, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಹೊಂದಿರೋ ಸಿಂಗ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ತೆರೆ ಕಾಣಲಿದೆ.

LEAVE A REPLY

Please enter your comment!
Please enter your name here