ಪ್ರಜ್ವಲ್ ಬರ್ತ್‌ಡೇಗೆ ಗಿಫ್ಟು ಕೊಟ್ಟ ಸ್ಲೀಪಿಂಗ್ ಬ್ಯೂಟಿ ಜಂಟಲ್‌ಮನ್!


ಇಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಹುಟ್ಟಿದ ದಿನ. ಈ ಶುಭ ಘಳಿಗೆಗೆ ಗಿಫ್ಟ್ ಆಗಿ ಜಂಟಲ್ ಮನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರೋ ಈ ಸಿನಿಮಾದ ಟೀಸರ್ ಒಂದು ಅಪರೂಪದ, ಅತ್ಯಂತ ವಿರಳವಾದ ಕಾಯಿಲೆಯ ಸುತ್ತಾ ಜರುಗೋ ರೋಚಕ ಕಥೆಯನ್ನೊಳಗೊಂಡಿದೆ ಎಂಬುದನ್ನೂ ಈ ಟೀಸರ್ ಸಾಕ್ಷೀಕರಿಸುವಂತಿದೆ.

ಈ ಹಿಂದೆ ರಾಜಹಂಸ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಜಡೇಶ್ ಕುಮಾರ್ ಹಂಪಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ರಾಜಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ವರು ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಹುಟ್ಟುಹಬ್ಬಕ್ಕೆ ಈ ಗಿಫ್ಟ್ ನೀಡ ಬೇಕೆಂದು ನಿರ್ಧರಿಸಿದ್ದ ಚಿತ್ರತಂಡ ಹಲವು ದಿನಗಳಿಂದ ಶ್ರಮವಹಿಸಿ ಚೆಂದದ ಟೀಸರ್ ಅನ್ನು ಅನಾವರಣಗೊಳಿಸಿದೆ.

ಜಂಟಲ್‌ಮನ್ ವಿಶೇಷವಾದ ಕಥೆ ಹೊಂದಿರೋ ಚಿತ್ರ. ಇದರಲ್ಲಿ ಪ್ರಜ್ವಲ್ ದೇವರಾಜ್ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಹೊಂದಿರೋ ಹುಡುಗನಾಗಿ ನಟಿಸಿದ್ದಾರೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬುದು ಅತ್ಯಂತ ಅಪರೂಪದ, ಜಗತ್ತಿನಲ್ಲಿ ಕೆಲವೇ ಕೆಲ ಮಂದಿಯನ್ನು ಬಾಧಿಸುತ್ತಿರೋ ಕಾಯಿಲೆ. ಜನಸಾಮಾನ್ಯರು ದಿನದ ಹದಿನೆಂಟು ಗಂಟೆ ಕೆಲಸ ಮಾಡಿದರೆ ಈ ಚಿತ್ರದ ನಾಯಕ ಹದಿನೆಂಟು ಘಂಟೆ ನಿದ್ರೆ ಮಾಡುತ್ತಾನೆ. ಅದು ಜಗತ್ತಿನ ಯಾವ ಕರೆಗೂ ಓಗೊಡದಂಥಾ ಕುಂಭಕರ್ಣ ನಿದ್ರೆ.

ಹೀಗೆ ದಿನದ ಬಹುಪಾಲು ಸಮಯವನ್ನು ನಿದೆರೆಯಲ್ಲಿಯೇ ಕಳೆಯೋ ನಾಯಕನ ಪಾಲಿಗೆ ಜೀವಿಸಲು ದಕ್ಕೋದು ಕೇವಲ ಆರು ಘಂಟೆ ಮಾತ್ರ. ಈ ಆರು ಘಂಟೆಯಲ್ಲಿಯೇ ಆತ ಪ್ರೀತಿಸುತ್ತಾನೆ. ಕೆಲಸ ಮಾಡುತ್ತಾನೆ. ಮತ್ತು ಆ ಆರು ಘಂಟೆಯ ಅವಧಿಯಲ್ಲಿನ ನಾಯಕನ ವೃತ್ತಾಂತದ ಸುತ್ತಾ ರೋಚಕ ಕಥೆಯೊಂದನ್ನು ಜಡೇಶ್ ಕಟ್ಟಿ ಕೊಡಲು ಮುಂದಾಗಿದ್ದಾರೆ. ಕಾಯಿಲೆಯೊಂದರ ಹಿನ್ನೆಲೆಯಿದ್ದರೂ ಇದೊಂದು ಮಾಸ್ ಚಿತ್ರ. ಇದರಲ್ಲಿ ಈ ಹಿಂದೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರದಲ್ಲಿ ನಟಿಸಿದ್ದ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ. ಜಂಟಲ್‌ಮನ್ ಟೀಸರ್ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬಕ್ಕೆ ಹೊಸಾ ಮೆರುಗು ನೀಡಿದೆ. ಅವರ ಅಭಿಮಾನಿ ಬಳಗವೂ ಇದನ್ನು ಕಂಡು ಥ್ರಿಲ್ ಆಗಿದೆ. ತಮ್ಮನ್ನು ನಿರ್ದೇಶಕನಾಗಿ ಕೈ ಹಿಡಿದು ಮುನ್ನಡೆಸಿದ ಪ್ರೇಕ್ಷಕರೇ ನಿರ್ಮಾಪಕನಾಗಿಯೂ ಹರಸಿ ಬೆಳೆಸಬೇಕೆಂದು ಗುರುದೇಶಪಾಂಡೆಯವರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here