ಮೂಲಭೂತವಾದಿಗಳ ಕಿರುಕುಳಕ್ಕೆ ಮಣಿದಳೇ ದಂಗಲ್ ಹುಡುಗಿ?


ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬರುತ್ತಲೇ ಮನುಷ್ಯರೆನ್ನಿಸಿಕೊಂಡವರೆಲ್ಲ ಅದೆಷ್ಟೋ ಶತಮಾನ ಹಿಂದಕ್ಕೆ ಹೋಗಿ ಆಲೋಚಿಸಲಾರಂಭಿಸಿದ್ದಾರೆ. ಸುತ್ತ ಹನಿನೀರಿಗೆ ತತ್ವಾರ, ತುತ್ತು ಅನ್ನಕ್ಕೂ ಗತಿಯಿಲ್ಲದ ಪರಿಸ್ಥಿತಿಯಿಂದ ನರಳುವ ಜನರಿದ್ದರೂ ಬಹುತೇಕರ ಗಮನ ದೇವರು, ಧರ್ಮಗಳ ಸುತ್ತಲೇ ಹರಿದಾಡುತ್ತಿವೆ. ಸುಪ್ತವಾಗಿದ್ದ ಜಾತಿಪ್ರಜ್ಞೆ ಓಪನ್ ಸ್ಟೇಜಿನಲ್ಲಿಯೇ ಕಥಕ್ಕಳಿ ಶುರುವಿಟ್ಟುಕೊಂಡಿದೆ. ಹಾಗಿರೋವಾಗ ಈ ಧರ್ಮದ ಅಫೀಮು ಕಲೆಯನ್ನು ಬಿಡಲು ಸಾಧ್ಯವೇ?

ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಝೈರಾ ವಾಸಿಂ ಚಿತ್ರರಂಗದಿಂದ ದೂರ ಸರಿಯೋ ಮಾತಾಡಿರುವುದು ಮತ್ತು ಅದಕ್ಕೆ ಕೊಟ್ಟಿರೋ ಕಾರಣ ಮೂಲಭೂತವಾದದ ಕಬಂಧ ಬಾಹುಗಳು ಅದ್ಯಾವ ಪರಿಯಾಗಿ ಚಾಚಿಕೊಂಡಿವೆ ಎಂಬ ದುರಂತ ಸತ್ಯವನ್ನು ಮುಖ್ಯವಾಹಿನಿಗೆ ದಾಟಿಸಿವೆ.

‘ಈಗ ಐದು ವರ್ಷಗಳ ಹಿಂದೆ ನಾನು ತೆಗೆದುಕೊಂಡಿದ್ದ ನಿರ್ಧಾರದಿಂದ ನನ್ನ ಬದುಕಲ್ಲಿ ತೀರಾ ಬದಲಾವಣೆಗಳಾಗಿವೆ. ನಟಿಯಾಗಿ ಖ್ಯಾತಿ ಸಿಕ್ಕಿದೆ. ಜನ ನನ್ನನ್ನು ಗುರುತಿಸಿ ನಟಿಯಾಗಿ ಆರಾಧಿಸೋ ಮೂಲಕ ರೋಲ್ ಮಾಡೆಲ್ ಆಗಿಯೂ ಬದಲಾದೆ. ಆದರೆ ನಾನಿದನ್ನೆಲ್ಲ ಬಯಸಿರಲಿಲ್ಲ. ಈವತ್ತಿಗೆ ನಾನು ಚಿತ್ರರಂಗಕ್ಕೆ ಬಂದು ಐದು ವರ್ಷಗಳಾಗಿವೆ. ಆದರೆ ಈ ಘಳಿಗೆಯೇ ನಾನು ನಟಿಯಾದ ನಂತರ ಸಂತೋಷವಾಗಿಲ್ಲ ಎಂಬುದನ್ನೂ ನೆನಪಿಸುತ್ತಿದೆ. ಚಿತ್ರರಂಗ ನನಗೆ ಅಗಾಧವಾದ ಪ್ರೀತಿ, ಅಭಿಮಾನಗಳನ್ನು ತುಂಬಿದೆ. ಆದರೆ ನಾನು ಏನೋ ಆಗಲು ಹೋಗಿ ಬೇರೇನೋ ಆಗುತ್ತಿದ್ದೇನೆಂಬ ತಳಮಳ ಇದ್ದೇ ಇದೆ. ಇದು ನನ್ನು ದಾರಿಯಲ್ಲ. ಇದರಿಂದ ನಾನು ನಂಬಿರೋ ಧರ್ಮದ ದಾರಿಗೆ ತಡೆಯಾಗುತ್ತಿದೆ. ಆದ್ದರಿಂದಲೇ ನಾನು ಇಮಾನ್‌ನಿಂದ ದೂರಾಗುತ್ತಿದ್ದೇನನ್ನಿಸುತ್ತಿದೆ. ನಾನು ಆರಿಸಿಕೊಂಡಿರೋ ವೃತ್ತಿ ನನ್ನ ಧರ್ಮ ಪಥಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಆದ್ದರಿಂದಲೇ ನಾನು ಇಲ್ಲಿಂದ ದೂರವಿರಲು ನೀರ್ಧರಿಸಿದ್ದೇನೆ’ ಎಂಬರ್ಥದಲ್ಲಿ ಝೈರಾ ಹೇಳಿಕೊಂಡಿದ್ದಾಳೆ.

ಈ ಹುಡುಗಿ ಝೈರಾ ಕಾಶ್ಮೀರ ಮೂಲದವಳು. ದಂಗಲ್ ಚಿತ್ರದ ಮೂಲಕವೇ ಅಪಾರ ಖ್ಯಾತಿ, ಪ್ರಶಸ್ತಿ, ಪುರಸ್ಕಾರಗಳನ್ನೂ ಬಾಚಿಕೊಂಡಿದ್ದವಳು. ಕಾಶ್ಮೀರದ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಿಂದ ಬಂದಿದ್ದ ಝೈರಾ ದಂಗಲ್ ಮೂಲಕ ಬಣ್ಣ ಹಚ್ಚುತ್ತಲೇ ಆ ಭಾಗದ ಮುಸ್ಲಿಂ ಮೂಲಭೂತವಾದಿಗಳ ಬುಡ ಧಮೋನ್ಮಾದದಿಂದ ಧಗ ಧಗಿಸಿತ್ತು. ಝೈರಾಳ ಬಾಲಿವುಡ್ ಪ್ರವೇಶಕ್ಕೆ ಮೂಲಭೂತವಾದಿಗಳು ವಿರೋಧ್ ವ್ಯಕ್ತ ಪಡಿಸಿದ್ದರು. ತನ್ನದೇ ಧರ್ಮದ ಕಡೆಯಿಂದೆದುರಾದ ಇಂಥಾ ಪ್ರತಿರೋಧದ ದೆಸೆಯಿಂದ ಕಂಗಾಲಾಗಿ ನಿಂತಿದ್ದ ಈ ಹುಡುಗಿಯ ಬೆಂಬಲಕ್ಕೆ ಅಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮಫ್ತಿ ಹಾಗೂ ಬಾಲಿವುಡ್ ನಟ ನಟಿಯರೆಲ್ಲ ನಿಂತಿದ್ದರು.

ಇದೇ ವಿಚಾರವಾಗಿ ಸದಾ ಕಾಲವೂ ಮೂಲಭೂತವಾದಿಗಳ ಕಡೆಯಿಂದ ಝೈರಾಗೆ ಬೆದರಿಕೆಗಳು ಬರುತ್ತಲೇ ಇದ್ದವು. ವಿಮಾನ ಯಾನದ ಸಂದರ್ಭದಲ್ಲಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನಡೆದ ಬಗ್ಗೆ ಖುದ್ದು ಝೈರಾಳೇ ಹೇಳಿಕೊಂಡಿದ್ದಳು. ಇದೆಲ್ಲದರ ನಡುವೆಯೂ ನಟಿಯಾಗಿ ಝೈರಾ ಅಪಾರ ಅವಕಾಶಗಳನ್ನು ತನ್ನದಾಗಿಸಿಕೊಂಡಿದ್ದಳು. ಇದೀಗ ಈಕೆ ನಟಿಸಿರೋ ದಿ ಸ್ಕೈ ಇಸ್ ಪಿಂಕ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆಕೆಯ ಮನಸ್ಥಿತಿ ನೋಡಿದರೆ ಇದುವೇ ಕಡೇಯ ಚಿತ್ರವಾಗೋ ಲಕ್ಷಣಗಳೇ ದಟ್ಟವಾಗಿವೆ.

ಎಲ್ಲ ಧರ್ಮಗಳಲ್ಲಿಯೂ ಒಂದಲ್ಲ ಒಂದು ರೂಪದಲ್ಲಿ ಹೆಣ್ಣನ್ನು ಶೋಶಿಸುತ್ತಾ ಬರಲಾಗುತ್ತಿದೆ. ಹಿಂದೂ ಧರ್ಮದಲ್ಲಿಯೂ ಅಂಥದ್ದಿದ್ದರೂ ಈಗ ಆ ಪ್ರಮಾಣ ಕಡಿಮೆಯಾಗಿದೆ. ಆದರೆ ಮುಸ್ಲಿಂ ಧರ್ಮದಲ್ಲಿ ಮಾತ್ರವೇ ಈಗಲೂ ಹೆಣ್ಣು ಹೊರ ಜಗತ್ತಿಗೆ ತೆರೆದುಕೊಳ್ಳಲೇ ಬಾರದೆಂಬ ಕರ್ಮಠ ಮನೋಭಾವ ಸುಪ್ತವಾಗಿದೆ. ತೀರಾ ಝೈರಾಳಂತ ನಟಿಯೇ ಖ್ಯಾತಿಯ ಉತ್ತುಂಗದಲ್ಲಿರುವಾಗ ನಿರ್ಗಮಿಸೋ ನಿರ್ಧಾರ ಮಾಡಿದ್ದಾಳೆಂದರೆ ಅದರ ತೀವ್ರತೆ ಎಂಥಾದ್ದಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇಂಥಾದ್ದು ನಡೆದಾಗ ಧರ್ಮಗಳ ಹಂಗಿಲ್ಲದೇ ವಿರೋಧಿಸಲೇ ಬೇಕಿದೆ. ಹಿಂದೂ ಧರ್ಮದಲ್ಲಿ ಇಂಥಾದ್ದು ನಡೆದರೆ ಶೋಷಣೆ, ಬೇರೆ ಧರ್ಮದಲ್ಲಿ ನಡೆದರೆ ಧರ್ಮ ಪಾಲನೆ ಅನ್ನೋದರಲ್ಲಿ ಅರ್ಥವಿಲ್ಲ. ಯಾಕೆಂದರೆ ಇಂಥಾ ಅನರ್ಥದ ಕರ್ಮಠ ಮನೋಭಾವದಿಂದ ತಲ್ಲಣಿಸುವ ಹೆಣ್ಣು ಸಂಕುಲಕ್ಕೆ ನೋವಿನ ಮರ್ಮರಕ್ಕೆ ಧರ್ಮಗಳ ಹಂಗಿಲ್ಲ.

LEAVE A REPLY

Please enter your comment!
Please enter your name here