ನೀನು ಈ ಅಮಾಸೆ ಬದುಕಿನ ಮಗ್ಗುಲಲ್ಲಿ ಅರಳಿದ ಶಾಶ್ವತ ಪೌರ್ಣಿಮೆ!


ಪೌರ್ಣಮಿಯಂಥವಳೇ…

ಬಹುಶಃ ನೀನೀಗ ಏಳಬೇಕಂತ ಅಂದುಕೊಂಡೇ ಎಳೇ ಮಗುವಿನಂತೆ ಮಗುಚಿಕೊಂಡು ಮತ್ತೊಂದು ಸುತ್ತಿನ ನಿದ್ರೆ ಹೊಡೀತಿರಬಹುದು. ನನಗಿಲ್ಲಿ ನಸುಗತ್ತಲಲ್ಲೇ ಬೆಳಗಾಗಿದೆ. ರಸ್ತೆಯಲ್ಲಾಗಲೇ ವಾಹನಗಳ ಗೌಜು. ಮಾರುದೂರದಲ್ಲೇ ಪುಣ್ಯಾತ್ಮನೊಬ್ಬ ಬೇಕರಿಯ ಬಾಗಿಲು ತೆರೆದಿದ್ದಾನೆ. ಬರೀ ಹೊಟ್ಟೆಗೆ ಅರ್ದ ಕಪ್ ಕಾಫಿ ಇಳಿಸಿ, ಒಂದೇ ಒಂದು ಸಿಗರೇಟು ಸುಟ್ಟೇಟಿಗೆ ಯಾವತ್ತಿಂದಲೋ ಅಮರಿಕೊಂಡಿದ್ದ ಹುಚ್ಚು ಮತ್ತಷ್ಟು ಕೆರಳಿಕೊಂಡಂತಾಗಿತ್ತು. ನೀ ದಿನಾ ಸಿಗುತ್ತಿ. ಉಸಿರಿಗೆ ಉಸಿರು ತಾಕುವಷ್ಟು ಹತ್ತತ್ತಿರ ನಿಂತು ಮಾತಾಡೋ ಸುಯೋಗ ಒಂದು ದಿನವೂ ತಪ್ಪಿದ್ದಲ್ಲ. ಈ ಅವಧಿಯಲ್ಲಿ ಅದೆಷ್ಟು ಕೀಟಲೆ, ಖುಷಿ, ಸುಳ್ಳೇ ಸರಿದು ಹೋಗುವ ಮುನಿಸು ಮತ್ತು ಮಣಗಟ್ಟಲೇ ಮಾತು. ನಿಂಗೆ ಹುಚ್ಚುತನ ಅನ್ನಿಸೀತೇನೋ… ಆದರೆ ಇಷ್ಟೆಲ್ಲ ಆದ ಮೇಲೂ ಹೇಳದೆ ಅದೇನೋ ಉಳಕೊಂಡಿದೆಯೆಂಬ ಭಾವ. ಎದೆಯೊಳಗೆ ಸಿಕ್ಕಿಕೊಂಡಂತಿರೋ ಮಾತಿನ ಮರ್ಮರ. ಅದೆಲ್ಲವನ್ನೂ ನಿನಗೊಪ್ಪಿಸಬೇಕೆಂದೇ ಈ ಪತ್ರ ಬರೆಯಲು ಕೂತಿದ್ದೇನೆ. ಇನ್ನೇನು ಒಂದಷ್ಟು ಹೊತ್ತು ಕಳೆದರೆ ನೀ ಮತ್ತೆ ಸಿಗುತ್ತಿ. ಆಗ ಈ ಪತ್ರವನ್ನ ನಿನ್ನ ಕೈಗಿಟ್ಟು ಒಂದಷ್ಟು ಹೊತ್ತು ನಾಪತ್ತೆಯಾಗಿ ಬಿಡುತ್ತೇನೆ. ಆಮೇಲಿನದ್ದು ನಿನ್ನದೇ ಚಿತ್ತ!

ಎಲ್ಲಾ ಹುಡುಗೀರಂತೆಯೇ ನಿಂಗೂ ಪ್ರೀತಿಸೋ ಹುಡುಗ ಎದುರಾಬದುರಾಗಿ ನಿಂತು ಹೊಗಳಬೇಕು, ರಮಿಸಬೇಕೆಂಬ ಆಸೆ ಇದ್ದರೆ ತಪ್ಪೇನಲ್ಲ. ಹಲವು ಬಾರಿ ನಿನ್ನ ಕಣ್ಣುಗಳಲ್ಲೇ ಅಂಥಾದ್ದೊಂದು ಬಯಕೆ ಕಾಣಿಸಿಕೊಂಡಿದ್ದಿದೆ. ಆದರೆ, ಅಹಂಕಾರವೋ, ಪುಕ್ಕಲುತನವೋ ಗೊತ್ತಿಲ್ಲ. ಈ ಪ್ರೀತಿಯನ್ನ ಹಾಗೆಲ್ಲ ನೇರಾನೇರ ತೋರ್ಪಡಿಸೋದಂದ್ರೆ ಅದ್ಯಾಕೋ ನಂಗೆ ರಣ ಹಿಂಸೆ. ಈ ಮೆಸೇಜು ಮುಂತಾದವೂ ಕಿರಿಕಿರಿಯೇ. ಅದೆಲ್ಲಕ್ಕಿಂತಲೂ ಸರಾಗ ಅಂದ್ರೆ ಈ ಅಕ್ಷರ. ಆದುದರಿಂದಲೇ ನನ್ನೊಳಗೇ ಕೊಳೆಯುತ್ತಿರೋ ಮಾತುಗಳನ್ನ ನಿನ್ನ ಮಡಿಲು ಸೇರಿಸಲು ಅಕ್ಷರಗಳ ಮೊರೆ ಹೋಗಿದ್ದೇನೆ. ಈವತ್ತೇಕೋ ಏಳೇಳುತ್ತಲೇ ನಿಂಗೊಂದು ಪತ್ರ ಬರೀಬೇಕೆಂಬ ಹುಚ್ಚಿನ ಜೊತೆಗೆ ಹಾಡೊಂದರ ಗುಂಗೂ ಹತ್ತಿಕೊಂಡಿತ್ತು. ಆ ಗುಂಗೇ ಅಕ್ಷರ ಪ್ರಸವವನ್ನ ಮತ್ತಷ್ಟು ಸಲೀಸಾಗಿಸಿದೆ.

ನೀನೂ ಸಹ ಈ ಬದುಕಿಗೆ ಬೆಳುದಿಂಗಳಂತೆಯೇ ನಡೆದು ಬಂದವಳು. ನೀನು ಅಮಾಸೆ ಬದುಕಿನ ಇಕ್ಕೆಲದಲ್ಲಿ ಅಚಾನಕಾಗಿ ನಕ್ಕ ಶಾಶ್ವತ ಪೌರ್ಣಿಮೆ. ಈ ಯಾಂತ್ರಿಕ ಬದುಕಿನ ಸತ್ತು ಹೋಗುವಂಥಾ ಏಕತಾನತೆಗೆ ನಿನ್ನ ಉಸಿರು ಸೋಕಿಯೇ ವೇಗ ಹೆಚ್ಚಿದೆ. ಈಗ ನನ್ನಿಡೀ ಜೀವನವೇ ಹೊಸಾ ದಿಕ್ಕಿನತ್ತ ಮಗ್ಗುಲು ಬದಲಿಸಿದೆ. ಇದೆಲ್ಲವೂ ನಿನ್ನದೇ ಮಾಯಕ. ಈ ಜೀವಿತದ ಸಣ್ಣ ಸಣ್ಣ ಸಂತಸಗಳನ್ನೂ ಬೆರಗುಗಣ್ಣಿಂದ ದಿಟ್ಟಿಸಿ ಅನುಭವಿಸೋದನ್ನ ಕಲಿಸಿದವಳು ನೀನು. ಮನಸು ಕೊಂಚ ಕಸಿವಿಸಿಗೊಂಡರೂ ಅಸಹಾಯಕನಂತೆ ಅದೆಷ್ಟು ಸಲ ನಿನ್ನ ಬಳಿಬಂದಿದ್ದೇನಂತ ಬಹುಶಃ ನೀನೂ ಲೆಕ್ಕವಿಟ್ಟಿರಲಿಕ್ಕಿಲ್ಲ. ಆ ಕ್ಷಣ ಮತ್ತೇನೂ ಬೇಡ, ನೀನು ಒಂದಷ್ಟು ಹೊತ್ತು ಜೊತೆಗಿದ್ದುಬಿಟ್ಟರೆ ಅದೆಂಥಾದ್ದೋ ಸಮಾಧಾನ. ಅಂಥಾ ನೀನು ಇಡೀ ಜೀವಿತದ ತುಂಬಾ ಜೊತೆಗಿರುತ್ತಿ ಎಂಬುದಕ್ಕಿಂಲೂ ದೊಡ್ಡ ಸಂಭ್ರಮ ಬೇರ‍್ಯಾವುದಿದ್ದೀತು ಹೇಳು?

ಈ ವಾಟ್ಸಪ್, ವೀ ಚಾಟ್, ಫೇಸ್‌ಬುಕ್ಕಿನ ಕಿಷ್ಕಿಂಧೆಯ ಗೋಜಲುಗಳಿಂದ ಬೋರೆದ್ದು ಹೋಗಿದೆ. ನಿದ್ದೆಹತ್ತುವ ಕಡೇ ಘಳಿಗೆಯವರೆಗೂ ಇಂಥವುಗಳ ಸಂಗದಲ್ಲಿದ್ದರೆ ಅದೆಂಥಾದ್ದೋ ಕಸಿವಿಸಿ. ಆದರೆ ಇಂಥಾ ಲಕ್ಷಾಂತರ ಆವಿಷ್ಕಾರಗಳ ನಡುವೆಯೂ ಈ ಪತ್ರ ಬರೆಯೋದೇ ಪರಮ ಸುಖ. ಖಂಡಿತಾ ನೀನಿದನ್ನ ಮಿಸ್ ಮಾಡ್ಕೋಬೇಡ. ಈ ಪತ್ರ ನಿಂಗೆ ತಲುಪುತ್ತದೆಯಲ್ಲಾ? ಆ ಬಳಿಕ ಪ್ರತೀ ಕ್ಷಣವೂ ನಿನ್ನಿಂದೊಂದು ಪತ್ರಕ್ಕಾಗಿ ಕಾಯುತ್ತಲೇ ಇರುತ್ತೇನೆ. ಅರೇ ಇವನಿಗೇನಿದು ಪೊಸಾ ಹುಚ್ಚು ಅಂದುಕೊಳ್ತೀಯೇನೋ… ಆದರೂ ಅಡ್ಡಿಲ್ಲ. ಇನ್ನೊಂದಷ್ಟು ದಿನ ಬೇಕಂತಲೇ ಚೂರು ದೂರವಿದ್ದು ಬಿಡೋಣ. ಫೋನಲ್ಲಿಯೂ ಮಾತಾಡದೇ ತೆಪ್ಪಗಿರೋವಷ್ಟು ಬೈರಾಗಿಗಳಾಗೋಣ. ಕನಸಿನ ಕಡಲು ಮಗ್ಗುಲಲ್ಲೇ ಇದ್ದರೂ ಅದಕ್ಕಾಗಿ ಹಂಬಲಿಸೋಣ. ಇದೊಂದು ವೆರೈಟಿಯ ವಿರಹವನ್ನ ಇಬ್ಬರೂ ಬೇಕಂತಲೇ ಆವಾಹಿಸಿಕೊಳ್ಳೋಣ. ಈ ಪ್ರಾಣಿ ದೂರವಾಗೋದಕ್ಕೆ ಹಿಂಗೆಲ್ಲ ಪ್ಲಾನು ಹಾಕುತ್ತಿದೆ ಅಂದುಕೊಳ್ಳಬೇಡ. ನಿನ್ನಾಣೆಯೂ ಅದೆಷ್ಟೇ ತಿಕ್ಕಲುತನವಿದ್ದರೂ ಅಂಥಾ ಧೈರ್ಯ ನನಗಿಲ್ಲ. ಇದು ಒಬ್ಬರನ್ನೊಬ್ಬರು ಹೊಸತಾಗಿ ನೋಡಿಕೊಳ್ಳೋ ಹೊಸಾ ಸೂತ್ರ ಅಂದುಕೊಳ್ತೀನಿ.
ಆದರೂ ಇದು ಹುಚ್ಚು ಮನಸು. ಇನ್ನೇನು ಘಂಟೆಗಳ ಆಸುಪಾಸಲ್ಲಿ ನೀ ಸಿಗುತ್ತಿ. ಆದರೆ ಅದಕ್ಕೂ ಕಾಯುವ ಸೈರಣೆ ಸತ್ತು ಹೋದಂತಿದೆ. ಈವತ್ತು ತುಸು ಗಂಭೀರವಾಗಿಯೇ ನಿನಗೆದುರಾಗಿ, ಹೆಚ್ಚು ಮಾತಾಡದೇ ಈ ಪತ್ರವನ್ನ ನಿನ್ನ ಕೈಗಿಟ್ಟು ಹಾಗೇ ಕಳಚಿಕೊಳ್ಳುತ್ತೇನೆ. ಆ ಘಳಿಗೆಯಲ್ಲಿ ಮೌನವೇ ಮಾತಾಡಲಿ ಅಂತ ಆಶಿಸುತ್ತೇನೆ. ಆದರೆ, ನನಗಿಂತಲೂ ಹುಚ್ಚು ಹತ್ತಿ ವಾರಗಟ್ಟಲೆ ಕಾಣಿಸದಿದ್ದರೆ ಮಾತ್ರ ಖಂಡಿತಾ ನಂಗೆ ಹುಚ್ಚೇ ಹಿಡಿಯುತ್ತೆ. ನೋಡ ನೋಡುತ್ತಲೇ ಕತ್ತಲೆಯೂ ಕವಿಯುತ್ತೆ.

ಯಾಕೆಂದರೆ, ನೀನು ಈ ಅಮಾಸೆ ಬದುಕಿನ ಮಗ್ಗುಲಲ್ಲರಳಿದ ಶಾಶ್ವತ ಪೌರ್ಣಿಮೆ!
– ನಿನ್ನವನು

LEAVE A REPLY

Please enter your comment!
Please enter your name here