ನೀನೆಂದರೆ ನಿಟ್ಟುಸಿರು ಮತ್ತು ನಿರಾಳ!

[adning id="4492"]


ಪತಂಗ…

ನಿಜಾ ಕಣೇ… ನೀನು ಫಕ್ಕನೆ ಅದೆಲ್ಲಿಂದಲೋ ಹಾರಿ ಬಂದು ಚೆಂದವೆಂಬುದು ಕಣ್ಣ ಪಾಪೆಗಳಲ್ಲಿ ಲೀನವಾಗೋ ಮುನ್ನವೇ ಹಾರಿ ಮರೆಯಾದ ಪತಂಗದಂತವಳು. ಆದರೆ, ಮುಂಗುರುಳ ಜೊತೆಗಿನ ನಿನ್ನ ಕಣ್ಣ ಕೀಟಲೆ, ಜಗತ್ತಿನ ಅಷ್ಟೂ ಬೆರಗುಗಳನ್ನೂ ಬಚ್ಚಿಕೊಂಡಂಥಾ ಮುಗುಳ್ನಗೆ ಮತ್ತು ಅಂಥಾ ದಂಡಿ ದಂಡಿ ನವಿರು ನೆನಪುಗಳ ಪರಾಗವಿನ್ನೂ ಎದೆಯ ಮಿದುವಿಗೆ ಅಂಟಿಕೊಂಡಂತಿದೆ. ಅದನ್ನು ಹೊರತಾಗಿಸಿ ನೋಡಿದರೆ ಈ ಬದುಕು ಸಹಾರಾ ಮರುಭೂಮಿಗಿಂತಲೂ ಭಣ ಭಣ. ಅಷ್ಟಕ್ಕೂ ಈ ಭಣಗುಡುವ ಸ್ಥಿತಿಯೇ ನನ್ನ ಜೀವಿತದ ಮೂಲ ಕೇಂದ್ರ. ಅದ್ಯಾವ ಮಾಯಕದಲ್ಲಿ ನಿನ್ನು ಮುದ್ದು ಮುದ್ದು ಪಾದಗಳು ಸೋಕಿದವೋ, ಆವತ್ತಿಂದಲೇ ಅಲ್ಲೊಂದು ಮಲೆನಾಡು ಸೃಷ್ಟಿಯಾಗಿ ಬಿಟ್ಟಿದೆ. ಮನಸೆಂಬುದು ಸದಾ ತುಂಬಿ ತುಳುಕೋ ನೀರ ಝರಿ. ಬದುಕೋದಕ್ಕೆ ಏನೋ ಅನೂಹ್ಯ ಕಾರಣವೊಂದು ಏಕಾಏಕಿ ಸೃಷ್ಟಿಯಾದಂಥಾ ಆಹ್ಲಾದ. ಸಣ್ಣ ಸಣ್ಣ ಖುಷಿಗಳನ್ನೂ ಮೈದಡವಿ ಸಂಭ್ರಮಿಸಿ ಯಾವುದೋ ಮಹಾ ಗೆಲುವೊಂದಕ್ಕೆ ಅಣಿಯಾಗುವಂಥಾ ಸಂಭ್ರಮ. ಸ್ಮಶಾಣವೇ ಆಗಿಹೋಗಿದ್ದ ಮನಸಲ್ಲೀಗ ನಿತ್ಯವೂ ಸಡಗರದ ಸಂತೆ… ಇದೆಲ್ಲವೂ ನಿನ್ನಿಂದಲೇ…

ದಿನಾ ಬೆಳಗೆದ್ದರೆ ಅದದೇ ಕೆಲಸ, ತಡರಾತ್ರಿ ಕಸುವೆಲ್ಲ ಬಸಿದು ಹೋದಂತಾದಾಗ ಒಂದಷ್ಟು ನಿದ್ದೆ… ಬದುಕೆಂದರೆ ಇಷ್ಟು ಮತ್ತು ಇಷ್ಟೇ ಎಂಬಂಥಾ ಯಾಂತ್ರಿಕ ಜಡತ್ವ ನನ್ನಿಡೀ ಬದುಕನ್ನೇ ಆವರಿಸಿಕೊಂಡು ಅದೆಷ್ಟು ದಿನವಾಗಿತ್ತೋ… ತುತ್ತಿನ ಚೀಲದ ಮುಲಾಜು ಮತ್ತು ಕಟ್ಟಿಕೊಂಡ ಅಷ್ಟಿಷ್ಟು ಕನಸುಗಳ ದೆಸೆಯಿಂದ ಸ್ವರ್ಗದಂಥಾ ನನ್ನೂರು ಬಿಟ್ಟು ಭೈರಾಗಿಯಂತೆ ಬಂದು ಸ್ವರ್ಗ ಕಂ ನರಕದಂಥಾ ಈ ರಾಕ್ಷಸ ನಗರಿಗೆ ಬಂದು ಬಿದ್ದೆನಲ್ಲಾ? ಆ ಕ್ಷಣದಿಂದ ನನ್ನೊಳಗಿನ ನಾನು ಸತ್ತೇ ಹೋಗಿದ್ದೇ. ಅಂಥಾ ನನ್ನತನಗಳೆಲ್ಲಾ ಚಿಗುರು ಮೊಳೆತು ಹೂವಾಗಿ ನಕ್ಕಿದ್ದು ನಿನ್ನಿಂದ. ಇದೆಲ್ಲದರ ಮೊತ್ತದಂತಿರೋ ಸಾವಿರ ಮಾತುಗಳು ಎದೆಯೊಳಗೆ ಪಿತಗುಡುತ್ತಿರುವಾಗಲೇ ನೀನೊಂದು ತೀರ ನಾನೊಂದು ತೀರವಾದದ್ದು ಯಾವ ವಿಧಿಯ ಕರಾಮತ್ತೋ ಗೊತ್ತಿಲ್ಲ. ಆದರೆ ಈ ಕಡು ವಿರಹವೇ ಹೊಸಾ ರೀತಿಯಲ್ಲಿ ಬದುಕಲು ಕಲಿಸುತ್ತಿವೆ.

ಬೆಳಕೆಂಬುದೇ ಭ್ರಮೆ ಅನ್ನಿಸುವ ಗಾಢ ಕತ್ತಲಲ್ಲಿ ಮಾರನೇ ದಿನ ಮುಂಜಾವ ತೆರೆದುಕೊಳ್ಳುತ್ತದೆಯೆಂಬೋ ಅಚಲ ನಂಬುಗೆಯಿಂದ ನಿದ್ದೆ ಹೋಗುತ್ತೇವಲ್ಲಾ? ಅಂಥಾದ್ದೇ ಒಂದು ಗಾಢ ನಂಬಿಕೆಯಿಂದ ನೀ ಸಿಗುತ್ತಿಯೆಂಬ ನಿರೀಕ್ಷೆಯನ್ನೇ ಧ್ಯಾನವಾಗಿಸಿಕೊಂಡು ಬದುಕುತ್ತಿದ್ದೇನೆ. ಈ ಧ್ಯಾನವೇ ನನಗೀಗ ಹೊಸಾ ಕಣ್ಣುಗಳನ್ನೂ ಸೃಷ್ಟಿಸಿದೆ. ಅರೇ… ಈ ಜಗತ್ತು ಎಷ್ಟು ಸುಂದರವಾಗಿದೆಯಲ್ಲಾ ಅಂತ ಹೆಜ್ಜೆ ಹೆಜ್ಜೆಗೂ ಬೆರಗಾಗುತ್ತೇನೆ. ಇಂಥಾ ಬೆರಗುಗಳಲ್ಲೆಲ್ಲಾ ನಿನ್ನನ್ನೇ ಧ್ಯಾನಿಸುತ್ತಾ ಹಾಯಾಗಿದ್ದೇನೆ. ನಿನ್ನಿಂದ, ನಿನ್ನಿಂದ ಮಾತ್ರವೇ ಒಂದು ಬರಡು ಜೀವ ಮೈತುಂಬಾ ಹೂ ಮೂಡಿಸಿಕೊಂಡು ನಿಂಗಾಗೇ ಕಾಯುತ್ತಿದೆ ಎಂಬ ಕಲ್ಪನೆ ನಿನಗಿದೆಯೋ ಇಲ್ಲವೋ ಗೊತ್ತಿಲ್ಲ. ಇದೆಲ್ಲ ಬರಿದೇ ಭ್ರಮೆಯಾ ಎಂಬುದೂ ಖಾತರಿಯಿಲ್ಲ. ಜೀವಾ… ಇದೆಲ್ಲವೂ ನಿನ್ನೊಬ್ಬಳಿಂದಲೇ ನಡೆದ ಪವಾಡ!

ನಾನು ಮೂಲತಃ ಕನಸಿನ ಹುಳ. ಕುಂತಲ್ಲಿ ನಿಂತಲ್ಲಿ ಕನಸಾಗೋದಕ್ಕಿಂತ ಬೇರೆ ಸುಖ ಈ ಜಗತ್ತಿನಲ್ಲಿ ಬೇರ‍್ಯಾವುದೂ ಇಲ್ಲ ಅಂತಲೇ ಅಂದುಕೊಂಡಿದ್ದವನು; ಅಂಥಾ ಸಾವಿರ ಕನಸುಗಳ ಪುಟ್ಟ ಬೊಂಬೆಯಂತಿರೋ ನೀನೆದುರಾಗುವವರೆಗೂ… ಕನಸು ಅಂದೆನಲ್ಲಾ? ಜೀವನದಲ್ಲೊಂದು ಕಾರು ಕೊಂಡು ಬೇಸರಾದಾಗ ಜಿಟಿ ಜಿಟಿ ಹನಿವ ಮಳೆಯಲ್ಲಿ ನನ್ನಿಷ್ಟದ ಹಾಡು ಕೇಳಿಕೊಂಡು ಗೊತ್ತುಗುರಿಯಿಲ್ಲದೆ ದೇಶಾಂತರ ಹೊರಟು ಬಿಡಬೇಕು, ಯಾವೂರು ತಲುಪಿದೆ ಎಂಬ ಬಗ್ಗೆ ನಂಗೇ ಗೊತ್ತಿಲ್ಲದಂತೆ ನಿಂತು ಕಂಗಾಲಾಗಬೇಕು, ಮತ್ತೆ ಆ ಯಾನವನ್ನ ಹಾಗೆಯೇ ಮುಂದುವರೆಸಬೇಕು… ಇಂಥಾ ಹುಚ್ಚುಚ್ಚು ಕನಸುಗಳು ಅದೆಷ್ಟಿದ್ದವೋ… ಈಗ ನಿನ್ನ ದಯೆಯಿಂದ ಅದೊಂದು ಕನಸು ಸಾಕಾರಗೊಂಡಿದೆ. ನೀನು ಬೇಕೇ ಬೇಕಂತ ಮನಸು ರಚ್ಚೆ ಹಿಡಿದಾಗೆಲ್ಲಾ ಲಾಂಗ್ ಡ್ರೈವ್ ಹೊರಡುತ್ತೇನೆ. ಹೊರಗಡೆ ತುಂತುರು ಮಳೆ ಮತ್ತು ಒಳಗೆ ಮಳೆಯಂಥಾದ್ದೇ ಆರ್ದ್ರವಾದ ಜಗಜಿತ್ ಸಿಂಗ್ ಧ್ವನಿಯ ಗಝಲುಗಳು… ಆಗಾಗ ದುಃಖ ಒತ್ತರಿಸಿ ಕಣ್ಣಾಲಿಗಳು ತುಂಬಿ ಬಂದರೂ ಇಂಥಾ ಯಾನದ ಮಜವೇ ಬೇರೆ!

ಇದೆಲ್ಲದರ ಹಿಂದೆಯೂ ನಿನ್ನನ್ನು ಸೇರುವ ಹಂಬಲವಿದೆ. ನನ್ನ ಪ್ರತೀ ಹೆಜ್ಜೆಯಲ್ಲಿಯೂ ನಿನ್ನೆಡೆಗಿನ ಹಸಿಹಸೀ ನಿರೀಕ್ಷೆಗಳಿವೆ. ಈ ನಡುವೆ ಈ ಜನುಮದಲ್ಲಿ ನೀ ಸಿಗದೇ ಹೋದರೆ, ಎದೆಯ ಮಾತುಗಳೆಲ್ಲ ಅಲ್ಲಿಯೇ ಉಳಿಯುವಂತಾದರೆ… ಎಂಬಂಥ ತಲ್ಲಣಗಳೂ ಇವೆ. ಇಂಥಾ ಜಂಜಡಗಳಾಚೆಗೂ ನಿನ್ನ ನೆನಪಲ್ಲಿಯೇ ನಿಟ್ಟುಸಿರಾಗುತ್ತೇನೆ. ಅದರ ಗರ್ಭದಲ್ಲಿಯೇ ನಿರಾಳವಾಗುತ್ತೇನೆ. ಯಾಕೆಂದರೆ ನೀನು ನನ್ನ ಬದುಕಿನ ಶಾಶ್ವತ ನಿಟ್ಟುಸಿರು ಮತ್ತು ನಿರಾಳ!
– ನಿನ್ನವನು

[adning id="4492"]

LEAVE A REPLY

Please enter your comment!
Please enter your name here