ಸಾರ್ವಜನಿಕರಲ್ಲಿ ವಿನಂತಿ: ಕೊಲೆಯೊಂದರ ಸುತ್ತ ಸರಿದಾಡೋ ಥ್ರಿಲ್ಲರ್ ಕಥನ! ರೇಟಿಂಗ್: 4/5

ಹೊಸಬರ ತಂಡವೇ ಸೇರಿ ರೂಪಿಸಿದ್ದರೂ ಭರಪೂರ ಪಾಸಿಟಿವ್ ವಾತಾವರಣವನ್ನು ತನ್ನದಾಗಿಸಿಕೊಂಡಿದ್ದ ಚಿತ್ರ ಸಾರ್ವಜನಿಕರಲ್ಲಿ ವಿನಂತಿ. ಹೊಸಬರಿದ್ದಲ್ಲಿ ಹೊಸತನದ ಚಿಗುರು ಮೂಡಿಕೊಳ್ಳದಿರೋದಿಲ್ಲ ಎಂಬ ಮಾತಿಗೆ ತಕ್ಕುದಾಗಿಯೇ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಬಂದಿದೆ. ನೋಡಿದ ಪ್ರತಿಯೊಬ್ಬರ ಮುಖಗಳಲ್ಲಿಯೂ ಅಪರೂಪದ ಕಥಾನಕದ, ಭಿನ್ನ ಬಗೆಯ ನಿರೂಪಣೆಯ ಚಿತ್ರವೊಂದನ್ನು ನೋಡಿದ ಖುಷಿಯೇ ಮಿರುಗುತ್ತಿದೆ.

ಕೃಪಾ ಸಾಗರ್ ಮೊದಲ ಬಾರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಅವರು ಇಷ್ಟೂ ವರ್ಷದ ಕನಸನ್ನು ಅಪರೂಪದ, ಸವಾಲಿನಂಥಾ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡೇ ನನಸಾಗಿಸಿಕೊಂಡಿದ್ದಾರೆಂಬುದು ಮೆಚ್ಚಿಕೊಳ್ಳುವಂಥಾ ಅಂಶ. ಇಲ್ಲಿ ನಿರೀಕ್ಷೆಯಂತೆಯೇ ನೋಡುಗರನ್ನು ಬೆಚ್ಚಿ ಬೀಳಿಸುತ್ತಲೇ ಎಚ್ಚರವೊಂದನ್ನು ಮನಸಲ್ಲಿ ಪ್ರತಿಷ್ಠಾಪಿಸುವಂಥಾ ಘಟನಾವಳಿಗಳಿವೆ. ಅದೆಲ್ಲವನ್ನು ಹುಡುಗರದ್ದೊಂದು ಗುಂಪಿನ ಮೂಲಕ, ಕೊಲೆಯೊಂದರ ಬೆಂಬೀಳುವ ಪೊಲೀಸ್ ಅಧಿಕಾರಿಗಳ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಲೀಲಾಜಾಲವಾಗಿ ನಿರೂಪಣೆ ಮಾಡಿದ್ದಾರೆ.

ಈ ಕಥೆಯ ಮೂಲವಿರೋದು ಒಂದು ಹಳ್ಳಿಯಲ್ಲಿ. ಅಲ್ಲೊಂದು ಭೋಳೇ ಮನಸ್ಥಿತಿಯ ಯುವಕರ ಗುಂಪು. ಮಾಡಲು ನಿರ್ಧಿಷ್ಟವಾದ ಕೆಲಸ ಗುರಿ ಇಲ್ಲದಿದ್ದರೂ ಎಲ್ಲರೂ ಒಬ್ಬೊಬ್ಬ ಹುಡುಗಿಯ ಹಿಂದೆ ಬಿದ್ದಿರುತ್ತಾರೆ. ಅವರೆಲ್ಲರ ಲವ್ ಟ್ರ್ಯಾಕುಗಳನ್ನೂ ಮೋಹಕವಾಗಿಯೇ ಕಟ್ಟಿ ಕೊಡಲಾಗಿದೆ. ಈ ಗುಂಪಿನಲ್ಲಿಯೇ ಒಬ್ಬ ಪರಮ ಸೋಮಾರಿ ಯುವಕ. ಆತನಿಗೂ ಒಂದು ಲವ್ವು. ಹೇಗೋ ಪಡಿಪಾಟಲು ಪಟ್ಟು ಹುಡುಗಿಯನ್ನು ಪಟಾಯಿಸಿ ಮದುವೆಯೂ ಸಂಪನ್ನವಾಗುತ್ತೆ. ಆದರೆ ಆ ಹೆಣ್ಣು ಮಗಳು ಈ ಅಪಾಪೋಲಿಯ ವಿಚಿತ್ರ ಮನಸ್ಥಿತಿಯನ್ನು ಕಷ್ಟಪಟ್ಟು ಸಹಿಸಿ ಸಂಸಾರ ನಡೆಸುತ್ತಿರುತ್ತಾಳೆ.

ಈ ಹೊತ್ತಿನಲ್ಲಿಯೇ ಆ ಹಳ್ಳಿಯ ಹೊರ ಭಾಗದ ತೋಟದಲ್ಲಿ ನಿಗೂಢ ಕೊಲೆಯೊಂದು ನಡೆಯುತ್ತೆ. ಸ್ಥಳಕ್ಕಾಗಮಿಸಿದ ಪೊಲೀಸರ ಚಿತ್ರ ಸೋಂಭೇರಿ ಗಂಡನತ್ತ ನೆಡುತ್ತದೆ. ಸೀದಾ ಬಂದು ಆತನನ್ನು ಹೆಡೆಮುರಿ ಕಟ್ಟಿ ಎಳೆದೊಯ್ದು ವಿಚಾರಣೆ ನಡೆಸಿದಾಗ ಆ ಕೊಲೆಗೂ ಆತನಿಗೂ ಸಂಬಂಧವಿಲ್ಲ ಎಂಬ ವಿಚಾರ ಜಾಹೀರಾಗುತ್ತೆ. ಅಷ್ಟರಲ್ಲಿಯೇ ಅದೊಂದು ಸುಪಾರಿ ಹತ್ಯೆ ಎಂಬ ಗುಮಾನಿಗೆ ಬೀಳೋ ಪೋಲಿಸರು ಮತ್ತಷ್ಟು ಗೊಂದಲಕ್ಕೀಡಾಗೋ ಸನ್ನಿವೇಶಗಳೇ ಎದುರಾಗುತ್ತವೆ. ಹಾಗಾದರೆ ಕೊಲೆ ಮಾಡಿದೋರ‍್ಯಾರು, ಸುಪಾರಿ ಕೊಟ್ಟೋರ‍್ಯಾರೆಂಬುದರ ಸುತ್ತಾ ಕಥೆ ಸಾಗುತ್ತದೆ. ಈ ಹಾದಿಯಲ್ಲಿ ಕಥೆ ರೋಚಕವಾಗಿಯೇ ಚಲಿಸುತ್ತದೆ.

ಇದು ಚೂರು ಎಚ್ಚರ ತಪ್ಪಿದರೂ ಹಿಡಿತಕ್ಕೆ ಸಿಗದಷ್ಟು ಸಿಕ್ಕಾಗೋ ಕಥೆ. ಆದರೆ ಅದನ್ನು ಎಲ್ಲಿಗೂ ಗೊಂದಲ ಕಾಡದಂತೆ, ಕ್ಯೂರಿಯಾಸಿಟಿಗೆ ಬ್ರೇಕು ಬೀಳದಂತೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ನಾಯಕನಾಗಿ ಮದನ್ ರಾಜಾ ಮನದುಂಬಿ ನಟಿಸಿದ್ದರೆ ನಾಯಕಿ ಅಮೃತಾ ಕೂಡಾ ಅದಕ್ಕೆ ಸರಿಯಾಗಿಯೆ ಸಾಥ್ ಕೊಟ್ಟಿದ್ದಾರೆ. ಪ್ರತೀ ಪಾತ್ರವನ್ನೂ ಕೂಡಾ ನೋಡುಗರ ಮನಸಲ್ಲುಳಿಯುವಂತೆಯೇ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಕೃಪಾ ಸಾಗರ್ ಕಲ್ಪನೆಯನ್ನು ಪರಿಣಾಮಕಾರಿಯಾಗಿಸಿದೆ. ಇದು ಹೊಸಬರೇ ಶ್ರದ್ಧೆಯಿಂದ ರೂಪಿಸಿರುವ ಚಿತ್ರ. ಇದನ್ನು ಕುಟುಂಬ ಸಮೇತರಾಗಿ ನೋಡಿದರೆ ಒಂದೊಳ್ಳೆ ಚಿತ್ರ ನೋಡಿದ ಅನುಭವ ಎಲ್ಲರದ್ದಾಗುತ್ತೆ. ಜೊತೆಗೆ ಹೊಸಬರ ಪ್ರಯತ್ನಕ್ಕೆ ಉತ್ತೇಜನ ನೀಡಿದ ಖುಷಿಯೂ ನಿಮ್ಮದಾಗುತ್ತೆ.

LEAVE A REPLY

Please enter your comment!
Please enter your name here