ಐ ಲವ್ ಯೂ: ಮನಸಿಗೆ ಮುತ್ತಿಡುವ ಪ್ರೇಮ ವ್ಯಾಖ್ಯಾನ! ರೇಟಿಂಗ್ 4/5

ಅದೆಷ್ಟೇ ಕೋನಗಳಲ್ಲಿ ಸೆರೆಹಿಡಿದರೂ ಬೆರಗೊಂದನ್ನು ಸದಾ ಬಚ್ಚಿಟ್ಟುಕೊಂಡಿರೋ ಮಾಯೆಯಂಥಾದ್ದು ಪ್ರೀತಿ. ಇದನ್ನು ಬೊಗಸೆಯಲ್ಲಿಟ್ಟುಕೊಂಡು ತಮ್ಮದೇ ಧಾಟಿಯಲ್ಲಿ ದೃಷ್ಯ ಕಟ್ಟುತ್ತಾ ಆ ಬಲದಿಂದಲೇ ಗೆಲ್ಲುತ್ತಾ ಬಂದವರು ನಿರ್ದೇಶಕ ಆರ್. ಚಂದ್ರು. ಇದೇ ಪ್ರೇಮವನ್ನು ವಾಸ್ತವದ ಒರೆಗೆ ಹಚ್ಚಿ ದಶಕದ ಹಿಂದೆಯೇ ಮಡಿವಂತಿಕೆಯ ಮಂದಿಯನ್ನೂ ಬೆಚ್ಚಿ ಬೀಳಿಸಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿರೋ ಐ ಲವ್ ಯೂ ಚಿತ್ರೆದ ಬಗ್ಗೆ ಕುತೂಹಲ ಹುಟ್ಟಲು ಇಷ್ಟು ವಿವರ ಸಾಕು. ಈ ಕಾರಣದಿಂದಲೇ ಭರಪೂರ ನಿರೀಕ್ಷೆ ಹುಟ್ಟಿಸಿದ್ದ ಐ ಲವ್ ಯೂ ಚಿತ್ರವೀಗ ತೆರೆ ಕಂಡಿದೆ. ಪ್ರೀತಿಯನ್ನು ನಿಕಷಕ್ಕೊಡ್ಡುತ್ತಲೇ ಗಟ್ಟಿ ಕಥೆಯೊಂದರ ಮೂಲಕ ಈ ಚಿತ್ರ ನೋಡುಗರನ್ನೆಲ್ಲ ಮುದಗೊಳಿಸುವಂತೆ ಮೂಡಿ ಬಂದಿದೆ.

ರಿಯಲ್ ಸ್ಟಾರ್ ಉಪೇಂದ್ರರ ಪ್ರೀತಿಯ ಫಿಲಾಸಫಿ, ಬಿಡುಬೀಸಾದ ಡೈಲಾಗುಗಳ ಮೂಲಕವೇ ಪ್ರೇಕ್ಷಕರನ್ನ ಸೆಳೆದಿದ್ದ ಈ ಚಿತ್ರ, ರಚಿತಾಳ ಹಾಟ್ ದೃಷ್ಯಾವಳಿಗಳ ಮೂಲಕವೂ ಸದ್ದು ಮಾಡಿತ್ತು. ಇದರ ಬೆನ್ನಿಗೇ ಚಂದ್ರು ಅವರು ಇದು ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರ ಅಂದಾಗ ಎಲ್ಲರಿಗೂ ಸಹಜವಾಗಿಯೇ ಗೊಂದಲ ಕಾಡಿತ್ತು. ಆದರೀಗ ಚಿತ್ರದುದ್ದಕ್ಕು ಅದಕ್ಕೆ ಕಾರಣ ಸಿಕ್ಕಿದೆ. ಎಲ್ಲ ಗೊಂದಲಗಳಿಗೆ ಉತ್ತರವೂ ದಕ್ಕಿದೆ.

ಇಲ್ಲಿ ಉಪೇಂದ್ರ ನಾಯಕನಾಗಿ ಸಂತೋಷ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ರಚಿತಾ ರಾಮ್ ಪಿಎಚ್‌ಡಿ ಅಧ್ಯಯನ ಮಾಡೋ ಧಾರ್ಮಿಕ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಬ್ಬರದ್ದೂ ಒಂದೇ ಕಾಲೇಜು. ಆದರೆ ಆಲೋಚನಾ ಕ್ರಮ, ವ್ಯಕ್ತಿತ್ವ ಮಾತ್ರ ತದ್ವಿರುದ್ಧ. ಧಾರ್ಮಿಕಳ ಪಾಲಿಗೆ ಭಾವನೆಗಳೇ ಜಗತ್ತು. ಪ್ರೀತಿಯ ನವಿರು ಭಾವಗಳಿಲ್ಲದ ಬದುಕು ನಶ್ವರ ಎಂಬಂಥಾ ಮನಸ್ಥಿತಿ ಆಕೆಯದ್ದು. ಆದರೆ ನಾಯಕನದ್ದು ಪ್ರೀತಿ ಎಂಬುದು ಕಾಮದ ಕರೊಯೋಲೆ. ಸಂಬಂಧಗಳೆಲ್ಲ ತೋರಿಕೆಯವುಗಳು ಎಂಬಂಥಾ ಮನಸ್ಥಿತಿ.

ಇವರಿಬ್ಬರ ನಡುವೆ ಲವ್ವಾದರೆ ಎಂತೆಂಥಾ ಅವಘಡಗಳು ಸಂಭವಿಸಬಹುದೆಂದು ಯಾರಿಗಾದರೂ ಅರ್ಥವಾಗುತ್ತೆ. ಆದರೆ ಅಲ್ಲೊಂದು ಟ್ವಸ್ಟು. ಯಾವ ಜವಾಬ್ದಾರಿಯನ್ನೂ ಹೊರದೆ ಗೂಳಿಯಂತೆ ಬದುಕೋ ನಾಯಕನ ಹೆಗಲಿಗೆ ಬದುಕೆಂಬ ಚಾಲೆಂಜಿನ ನೊಗ ತಗುಲಿಕೊಳ್ಳುತ್ತೆ. ಅಪ್ಪನ ಆಸೆಯಂತೆ ಆತ ದೊಡ್ಡ ಉದ್ಯಮಿಯಾಗಿ ಬೆಳೆದು ಬಿಡುತ್ತಾನೆ. ಆತನ ಇಚ್ಛೆಯಂತೆಯೇ ಮದುವೆಯನ್ನೂ ಆಗುತ್ತಾನೆ. ಒಂದು ಮುದ್ದಾದ ಮಗುವಿನ ಅಪ್ಪನಾಗಿ ಸಂತೃಪ್ತ ಜೀವನದ ಒಡೆಯನಾದರೂ ಆತನನ್ನು ಧಾರ್ಮಿಕಾಳ ಮೋಹ ಕೈ ಜಗ್ಗಲಾರಂಭಿಸುತ್ತೆ. ಮುಂದೇನಾಗಬಹುದೆಂಬ ಕುತೂಹಲವಿದ್ದರೆ ಅದಕ್ಕೆ ಮಜವಾದ ಶೈಲಿಯಲ್ಲಿಯೇ ಆರ್ ಚಂದ್ರು ಉತ್ತರಿಸಿದ್ದಾರೆ.

ಪ್ರೀತಿ, ಅದರ ಸುತ್ತಲಿನ ತೊಯ್ದಾಟಗಳಿಗೆ ಮಾತ್ರವೇ ಸೀಮಿತವಾಗಿದ್ದರೆ ಬಹುಶಃ ಐ ಲವ್ ಯೂ ಮಾಮೂಲಿಯಾಗಿ ದಾಖಲಾಗಿ ಬಿಡುತ್ತಿತ್ತು. ಆದರೆ ಆರ್ ಚಂದ್ರು ಒಂದಿಡೀ ಬದುಕಿನ ದರ್ಶನವಾಗುವಂಥಾ ಜಾಣ್ಮೆಯಿಂದಲೇ ಈ ಕಥೆಯನ್ನು ರೂಪಿಸಿದ್ದಾರೆ. ಅಷ್ಟೇ ಪರಿಣಾಮಕಾರಿಯಾಗಿ ದೃಷ್ಯ ಕಟ್ಟಿದ್ದಾರೆ. ಉಪೇಂದ್ರ ಅವರ ಟಿಪಿಕಲ್ ಶೈಲಿಗೆ ತಮ್ಮ ಶೈಲಿಯನ್ನು ನಾಜೂಕಿನಿಂದಲೇ ಬ್ಲೆಂಡ್ ಮಾಡಿದ್ದಾರೆ. ಐ ಲವ್ ಯೂ ಆಪ್ತವಾಗಿ ಕಾಣಿಸೋದರ ಹಿಂದೆ ಆ ಕೈ ಚಳಕವೂ ಪರಿಣಾಮಕಾರಿಯಾಗಿಯೇ ಕೆಲಸ ಮಾಡಿದೆ.

ಇನ್ನುಳಿದಂತೆ ಉಪೇಂದ್ರ, ರಚಿತಾ ರಾಮ್ ಮತ್ತು ಸೋನು ಗೌಡ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಬ್ರಹ್ಮಾನಂದಂ ಸೇರಿದಂತೆ ಪ್ರತೀ ಪಾತ್ರಗಳೂ ಪ್ರೇಕ್ಷಕರ ಮನಸಲ್ಲುಳಿಯುವಂತಿವೆ. ಉಪೇಂದ್ರ ಮತ್ತು ಆರ್ ಚಂದ್ರು ಜೋಡಿ ಈ ಮೂಲಕ ಎರಡನೇ ಬಾರಿ ಕಮಾಲ್ ಸೃಷ್ಟಿಸಿದೆ. ಕುಟುಂಬ ಸಮೇತರಾಗಿ ಯಾವ ಮುಜುಗರವೂ ಇಲ್ಲದೇ ನೋಡುವಂತೆ ಈ ಚಿತ್ರವನ್ನು ರೂಪಿಸಿರುವ ಚಂದ್ರು ನಿರ್ದೇಶಕರಾಗಿ ತಮ್ಮ ಗೆಲುವಿನ ಯಾನವನ್ನ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here