ಟ್ರೈಲರ್ ಮೂಲಕ ‘ಒಂಟಿ’ಯಾಗಿ ಅಬ್ಬರಿಸಿದರು ಆರ್ಯ!


ಕಿಚ್ಚಾ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಸೇರಿದಂತೆ ಒಂದಷ್ಟು ಚಿತ್ರಗಳ ಮೂಲಕ ನಟನಾಗಿ ಗುರುತಿಸಿಕೊಂಡಿರುವವರು ಆರ್ಯ. ಆ ನಂತರದಲ್ಲಿ ಈ ಸಂಜೆ ಎಂಬ ಚಿತ್ರದ ಮೂಲಕ ನಾಯಕನಟನಾಗಿದ್ದ ಅವರೀಗ ‘ಒಂಟಿ’ಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗೋ ತಯಾರಿಯಲ್ಲಿದ್ದಾರೆ. ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.

ಈ ಟ್ರೈಲರ್ ಮೂಲಕವೇ ಒಂಟಿ ಚಿತ್ರ ಪಕ್ಕಾ ಮಾಸ್ ಸ್ವರೂಪದಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದೆ. ನಾಯಕ ಆರ್ಯ ಪಕ್ಕಾ ಮಾಸ್ ಶೈಲಿಯಲ್ಲಿ ಹ್ಞೂಂಕರಿಸಿದ್ದಾರೆ. ಅವರ ಮಾಸ್ ಡೈಲಾಗುಗಳಂತೂ ಟ್ರೆಂಟ್ ಹುಟ್ಟುಹಾಕುವ ಲಕ್ಷಣಗಳೇ ಢಾಳಾಗಿವೆ. ಇಂದು ಬಿಡುಗಡೆಯಾಗಿರೋ ಈ ಟ್ರೈಲರ್‌ಗೆ ಅಭೂತಪೂರ್ವ ಮೆಚ್ಚುಗೆಗಳೂ ಕೇಳಿ ಬರುತ್ತಿವೆ. ಈ ಮೂಲಕವೇ ಹೊಸಾ ಸಾಹಸವೊಂದಕ್ಕೆ ಕೈ ಹಾಕಿರೋ ಆರ್ಯ ಕಣ್ಣಲ್ಲಿ ಗೆಲುವಿನ ಮಂದಹಾಸವೂ ಮೂಡಿಕೊಂಡಿದೆ.

ಸಾಯಿರಾಂ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಆರ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ ನಟಿ ಮೇಘನಾ ರಾಜ್ ಮದುವೆಯಾದ ನಂತರ ಮೊದಲ ಬಾರಿ ಒಂಟಿ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ಈವರೆಗೂ ಭಿನ್ನವಾದ ಪಾತ್ರಗಳನ್ನೇ ಆರಿಸಿಕೊಂಡು ಬಂದಿರೋ ಮೇಘನಾ ಪಾಲಿಗಿಲ್ಲಿ ತುಂಬಾ ಪ್ರಾಶಸ್ತ್ಯವಿರೋ ಭಿನ್ನವಾದ ಪಾತ್ರವೇ ಸಿಕ್ಕಿದೆಯಂತೆ. ಈ ಮೂಲಕ ಮೇಘನಾರ ಸೆಕೆಂಡ್ ಇನ್ನಿಂಗ್ಸ್‌ಗೆ ಭರ್ಜರಿ ಓಪನಿಂಗ್ ಸಿಗಲಿದೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಒಂಟಿ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ಒಂಟಿ ಅಬ್ಬರದಿಂದಲೇ ಸೌಂಡ್ ಮಾಡಲಾರಂಭಿಸಿದೆ. ಈ ಮೂಲಕ ಆರ್ಯ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೂ ಕೂಡಾ ಈ ಟ್ರೈಲರ್‌ನಲ್ಲಿ ಗೋಚರಿಸುತ್ತಿದೆ. ಅವರು ಫಿಟ್ನೆಸ್ ಸೇರಿದಂತೆ ಎಲ್ಲ ರೀತಿಯಿಂದಲೂ ಸನ್ನದ್ಧರಾಗಿಯೇ ಒಂಟಿ ಚಿತ್ರಕ್ಕೆ ನಾಯಕರಾದಂತಿದೆ. ಈಗಾಗಲೇ ಪೋಸ್ಟ್ ಪ್ರಡಕ್ಷನ್ ಕೆಲಸ ಮುಗಿಸಿಕೊಂಡಿರೋ ಒಂಟಿ ಇಷ್ಟರಲ್ಲಿಯೇ ತೆರೆಗಾಣಲಿ.

LEAVE A REPLY

Please enter your comment!
Please enter your name here