ಟ್ರೈಲರ್ ಮೂಲಕ ಜಾಹೀರಾಯ್ತು ‘ಹಫ್ತಾ’ ವಿರಾಟ್ ರೂಪ!

ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಹಫ್ತಾ ಈಗಾಗಲೇ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ವರ್ಧನ್ ತೀರ್ಥಹಳ್ಳಿ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿರೋ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೇಕಿಂಗ್ ಸೇರಿದಂತೆ ಎಲ್ಲ ಕೋನಗಳಿಂದಲೂ ಗೆಲುವಿನ ಲಕ್ಷಣಗಳನ್ನೇ ಹೊಂದಿರುವ ಈ ಈ ಟ್ರೈಲರ್ ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗಾಗಿಯೇ ಸಾಮಾಜಿಕ ಜಾಲತಾಣಗಳ ತುಂಬಾ ಹರಿದಾಡುತ್ತಾ, ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಮುನ್ನುಗ್ಗುತ್ತಿದೆ.

ಪ್ರಕಾಶ್ ಹೆಬ್ಬಾಳ ನಿರ್ದೇಶನದ ಈ ಚಿತ್ರ ಕರಾವಳಿ ತೀರದಲ್ಲಿನ ಭೂಗತ ಜಗತ್ತಿನ ವಿಶಿಷ್ಟವಾದ ಕಥೆ ಹೊಂದಿದೆ ಎಂಬ ವಿಚಾರ ಚಿತ್ರತಂಡದ ಕಡೆಯಿಂದಲೇ ಹೊರಬಿದ್ದಿತ್ತು. ಆದರೀಗ ಅದ ಅಸಲೀ ಖದರ್ ಏನೆಂಬುದರ ಸ್ಪಷ್ಟ ಅಂದಾಜು ಈ ಟ್ರೈಲರ್ ಮೂಲಕವೇ ಸಿಕ್ಕಿದೆ. ಬೆರಗಾಗಿಸುವ ಮೇಕಿಂಗ್, ಕಡಲ ಕಿನಾರೆಯ ದೃಷ್ಯ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ರಗಡ್ ಕಥೆಯೊಂದು ಚಲಿಸೋ ಸೋಜಿಗವನ್ನೂ ಈ ಟ್ರೈಲರ್ ಪ್ರೇಕ್ಷಕರೆದುರು ತೆರೆದಿಟ್ಟಿದೆ.

ಈ ವರೆಗೂ ಹಲವಾರು ಚಿತ್ರಗಳಲ್ಲಿ ನಟಿಸುತ್ತಲೇ ನಟನಾಗಿ ಗುರುತಿಸಿಕೊಂಡಿರುವವರು ವರ್ಧನ್ ತೀರ್ಥಹಳ್ಳಿ. ಸಣ್ಣಪುಟ್ಟ ಪಾತ್ರಗಳಲ್ಲಿಯೂ ಗಮನೀಯ ಅಭಿನಯ ನೀಡುತ್ತಾ ಬಂದಿದ್ದ ವರ್ಧನ್ ಅವರ ಪ್ರತಿಭೆಯ ವಿರಾಟ್ ರೂಪದ ಝಲಕ್ ಕೂಡಾ ಈ ಟ್ರೈಲರ್ ಮೂಲಕವೇ ಜಾಹೀರಾಗಿದೆ. ವರ್ಧನ್ ಈ ಚಿತ್ರದಲ್ಲಿ ನಾಯಕನಾಗಿ, ವಿಲನ್ ಶೇಡಿನಲ್ಲಿಯೂ ನಟಿಸಿದ್ದಾರೆ. ವಿಶೇಷವೆಂದರೆ ಮಂಗಳಮುಖಿಯ ಪಾತ್ರದಲ್ಲಿಯೂ ಅವರು ವಿಜೃಂಭಿಸಿದ್ದಾರೆ.

ಈ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಬಾಲರಾಜ್ ಕೂಡಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ನಿರ್ಮಾಪಕರಂತೆಯೇ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರಿಗೂ ಇದು ಮೊದಲ ಹೆಜ್ಜೆ. ಆದರೆ ಆರಂಭದಲ್ಲಿಯೇ ವಿರಳವಾದೊಂದು ಕಥೆಯ ಮೂಲಕ ಈ ತಂಡ ಮ್ಯಾಜಿಕ್ ಮಾಡಲಿದೆ ಎಂಬುದಕ್ಕೆ ಈಗ ಹೊರಬಂದಿರೋ ಟ್ರೈಲರ್‌ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ.

LEAVE A REPLY

Please enter your comment!
Please enter your name here