
ಚಿರಂಜೀವಿ ಸರ್ಜಾ ಪಕ್ಕಾ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿರೋ ಚಿತ್ರ ಸಿಂಗ. ಈಗಾಗಲೇ ಹಾಡುಗಳೂ ಸೇರಿದಂತೆ ಎಲ್ಲ ರೀತಿಯಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಸಿಂಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಚಿತ್ರಮಂದಿರದಲ್ಲಿ ಘರ್ಜಿಸೋ ತಯಾರಿಯಲ್ಲಿದೆ. ಹೀಗೆ ಪ್ರೇಕ್ಷಕರ ಮುಂದೆ ಬರುವ ಮುನ್ನ ಈ ಚಿತ್ರದ ಹೂರಣದ ಅಂದಾಜು ಕೊಡುವಂಥಾ ಟ್ರೈಲರ್ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.
ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಈ ಹಿಂದೆ ರಾಮ್ಲೀಲಾ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಅಂಶಗಳೇ ಪ್ರಧಾನವಾಗಿದ್ದರೂ ಹೊಸತನದ ಕಥೆಯನ್ನು ಒಳಗೊಂಡಿರೋ ಈ ಚಿತ್ರದ ಟ್ರೈಲರ್ ಇದೇ ತಿಂಗಳ ಹದಿನಾಲಕ್ಕನೇ ತಾರೀಕಿನಂದು ಬಿಡುಗಡೆಯಾಗಲಿದೆ.
ಸಿಂಗ ಎಂಬ ಹೆಸರೇ ಮಾಸ್ ಇಮೇಜನ್ನು ಹೊಮ್ಮಿಸುತ್ತದೆ. ಇಲ್ಲಿ ಸಾಹಸ ಸನ್ನಿವೇಶವೇ ಪ್ರಧಾನವಾದದ್ದರಿಂದ ಇಬ್ಬರು ಸಾಹಸ ನಿರ್ದೇಶಕರು ಅದನ್ನು ನಿರ್ವಹಿಸಿದ್ದಾರೆ. ಡಾ. ಕೆ ರವಿವರ್ಮ ಮತ್ತು ಪಳನಿರಾಜ್ ಸಿಂಗನನ್ನು ಮೈ ನವಿರೇಳಿಸುವ ಸಾಹಸ ಸನ್ನಿವೇಶಗಳಿಂದ ಶೃಂಗರಿಸಿದ್ದಾರೆ. ಡಾ ವಿ ನಾಗೇಂದ್ರಪ್ರಸಾದ್, ಕವಿರಾಜ್ ಮತ್ತು ಚೇತನ್ ಬರೆದಿರೋ ಹಾಡುಗಳೂ ಕೂಡಾ ಸಿಂಗ ಚಿತ್ರದ ಪ್ರಧಾನ ಆಕರ್ಷಣೆ. ಈಗಾಗಲೇ ಶ್ಯಾನೇ ಟಾಪಗೌವ್ಳೆ ಎಂಬ ಹಾಡಂತೂ ಟ್ರೆಂಡಿಂಗ್ನಲ್ಲಿದೆ.
ರವಿಶಂಕರ್, ತಾರಾ, ಶಿವರಾಜ್ ಕೆಆರ್ ಪೇಟೆ, ಅರುಣಾ, ಬಾಲರಾಜ್, ರಂಜಿತಾ ಮುಂತಾದವರ ತಾರಾಗಳವಿರೋ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಎಲ್ಲ ತಯಾರಿಯನ್ನೂ ಮಾಡಿಕೊಂಡಿರೋ ಚಿತ್ರತಂಡ ಒಂದೊಳ್ಳೆ ಮುಹೂರ್ತದಲ್ಲಿ ತೆರೆಗಾಣಿಸುವ ಸನ್ನಾಹದಲ್ಲಿದೆ.
