ಅನ್ನದಾತರೆದೆಗೆ ಗುಂಡಿಟ್ಟ ಕರಾಳ ನೆನಪಿಗೆ ಹನ್ನೊಂದು ವರ್ಷ!

[adning id="4492"]

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬೀಡಾಡಿ ಪುಢಾರಿಗಳೂ ಕೂಡಾ ರೈತಪರ ಕಾಳಜಿಯ ಪುಂಗಿಯೂದಲಾರಂಭಿಸುತ್ತಾರೆ. ಆದರೆ ಅಧಿಕಾರ ಮದವೇರಿಸಿಕೊಂಡರೆ ಇಂಥಾ ರಾಜಕಾರಣಿಗಳು ಅನ್ನದಾತರೆದೆಗೆ ಗುಂಡಿಟ್ಟು ಕೊಲ್ಲಲೂ ಹೇಸುವುದಿಲ್ಲ ಎಂಬ ಕರಾಳ ಸತ್ಯವೊಂದು ಬಯಲಾದದ್ದು ೨೦೦೮ರಲ್ಲಿ. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಈವತ್ತಿಗೆ ಆಗಾಗ ತಾನು ರೈತನಾಯಕ ಅಂತ ಹೇಳಿಕೊಳ್ಳುವ ಯಡಿಯೂರಪ್ಪ. ಅವರ ದರ್ಬಾರಿನಲ್ಲಿಯೇ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಬಡಪಾಯಿ ರೈತರೆದೆಗೆ ಪೊಲೀಸರು ಗುಂಡಿಟ್ಟಿದ್ದರು. ಇದಕ್ಕೆ ಇಬ್ಬರು ರೈತರು ಬಲಿಯಾದ ಕರಾಳ ನೆನಪಿಗೆ ಇಂದು ಭರ್ತಿ ಹನ್ನೊಂದು ವರ್ಷ ತುಂಬಿದೆ.

ಮುಂಗಾರು ಆರಂಭವಾದರೂ ಗೊಬ್ಬರ, ಬಿತ್ತನೆ ಬೀಜ ಸಿಗದಿದ್ದಾಗ ಕಾನೂನು ಸಮ್ಮತವಾಗಿಯೇ ೨೦೦೮ರ ಜೂನ್ ಹತ್ತರಂದು ಹಾವೇರಿಯ ರೈತರು ಪ್ರತಿಭಟನೆಗಿಳಿದಿದ್ದರು. ಅಲ್ಲಿ ಹಾಗೆ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ ಏಕಾಏಕಿ ಪೊಲೀಸರ ಬಂದೂಕು ಮೊರೆದಿದ್ದವು. ಇದಕ್ಕೆ ಹೇಮಪ್ಪ ಹೊನ್ನತ್ತಿ ಮತ್ತು ಸಿದ್ದಲಿಂಗಪ್ಪ ಚೂರಿ ಎಂಬ ನಿಷ್ಪಾಪಿ ರೈತರಿಬ್ಬರು ಬಲಿಯಾಗಿದ್ದರು. ಈ ಮೂಲಕ ಹನ್ನೊಂದು ವರ್ಷಗಳ ಹಿಂದಿನ ಈ ದಿನ ಹಾವೇರಿ ರೈತರ ಪಾಲಿಗೆ ಮಾತ್ರವಲ್ಲದೇ ಇಡೀ ನಾಡಿನ ರೈತ ಸಂಕುಲದ ಪಾಲಿಗೇ ಕರಾಳ ದಿನವಾಗಿ ಮಾರ್ಪಾಡು ಹೊಂದಿತ್ತು.

ಹೀಗೆ ನ್ಯಾಯಸಮ್ಮತವಾಗಿ ಬರಬೇಕಿದ್ದ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಸದ ಬರಗೆಟ್ಟ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿ ಜೀವ ಬಿಟ್ಟ ರೈತರ ನೆನಪಿನಲ್ಲಿ ಈ ದಿನವನ್ನು ವರ್ಷಂಪ್ರತೀ ರೈತ ಹುತಾತ್ಮ ದಿನಾಚರಣೆಯನ್ನಾಗಿ ಹಾವೇರಿ ಸೀಮೆಯಲ್ಲಿ ಘೋಶಿಸಲಾಗಿದೆ. ಇಂಥಾ ದುರ್ಘಟನೆಗಳು ಮತ್ತೆ ಮರುಕಳಿಸದಿರಲಿ ಎಂಬ ಕಾಳಜಿಯಿಂದ ಕೆಲ ರೈತ ಸಂಘಟನೆಗಳು ಈ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿವೆ.

ಇದು ರೈತನಾಯಕನೆಂದು ಪೋಸು ಕೊಡುತ್ತಾ, ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದ್ದ ಬೂಕನಕೆರೆ ಯಡಿಯೂರಪ್ಪನವರಿಗೆ ಅಂಟಿಕೊಂಡಿರೋ ಶಾಶ್ವತ ಕಳಂಕ. ಇದು ಯಾವನೇ ರಾಜಕಾರಣಿ ರೈತಪರವಾದ ಕಾಳಜಿ ತೋರ್ಪಡಿಸಿದರೂ ಅದು ಮತ ಬಾಚುವ ಗಿಮಿಕ್ ಮಾತ್ರ ಎಂಬುದನ್ನು ಸಾಕ್ಷೀಕರಿಸಿದ ಘಟನೆಯೂ ಹೌದು. ತೀರಾ ರೈತ ನಾಯಕ, ತಾನು ರೈತ ಪರ ಹೋರಾಟ ನಡೆಸುತ್ತಲೇ ಸಾಗಿ ಬಂದವರೆಂಬಂತೆ ಗೊಂಗ್ಗರು ಧ್ವನಿಯಲ್ಲಿ ಉಲಿಯುತ್ತಿದ್ದವರು ಯಡ್ಡಿ. ಅಂಥಾ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎಂಟೇ ದಿನಕ್ಕೆ ಅನ್ನದಾತರ ಎದೆಗೆ ಪೊಲೀಸರ ಬಂದೂಕು ಗುರಿಯಿಡುತ್ತದೆಯೆಂದರೆ, ಇದಕ್ಕಿಂತಾ ದುರಂತ ಬೇರೊಂದಿರಲು ಸಾಧ್ಯವಲ್ಲ.

ಹಾಗಂತ, ರೈತರ ವಿಚಾರದಲ್ಲಿ ಯಡಿಯೂರಪ್ಪ ಒಬ್ಬರೇ ವಿಲನ್ ಅಂದುಕೊಳ್ಳಬೇಕಿಲ್ಲ. ಬಹುತೇಕ ಈಗಿರೋ ಲಜ್ಜೆಗೇಡಿ ನಾಯಕರದ್ದೆಲ್ಲ ಇಂಥಾದ್ದೇ ಹಾಡು. ಯಡಿಯೂರಪ್ಪನ ಕಾಲದಲ್ಲಿದ್ದ ಸಮಸ್ಯೆಗಳೇ ಈ ಕ್ಷಣಕ್ಕೂ ಬೇರೆ ಬೇರೆ ರೂಪ ಧರಿಸಿ ಬಡಪಾಯಿ ರೈತರನ್ನು ಕಾಡುತ್ತಿವೆ. ಒಂದು ವೇಳೆ ಜನನಾಯಕರೆನ್ನಿಸಿಕೊಂಡವರಿಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ ಇಂಥಾ ದುರಂತ ಸಂಭವಿಸಿದ್ದ ಹಾವೇರಿ ಜಿಲ್ಲೆಯ ರೈತರ ಗೋಳು ಚೂರಾದರೂ ನೀಗುತ್ತಿತ್ತೇನೋ. ಆದರೆ ಇಂದಿಗೂ ಹಾವೇರಿ ಜಿಲ್ಲೆಯ ಪರಿಸ್ಥಿತಿ ಯಥಾ ರೀತಿಯಲ್ಲಿದೆ. ಅದು ಇಡೀ ಕರ್ನಾಟಕದ ಇತರೇ ಭಾಗಗಳ ರೈತರ ಪರಿಸ್ಥಿತಿಯ ಪ್ರತಿಫಲನವಷ್ಟೇ.

ಈವತ್ತಿಗೂ ಇಲ್ಲಿ ಬರಗಾಲ ತಾಂಡವವಾಡುತ್ತಿದೆ. ಕೃಷಿ ಭೂಮಿಗೆ ನೀರಿನ ಕಥೆ ಹಾಗಿರಲಿ ಕುಡಿಯುವ ನೀರಿಗೂ ಪರದಾಡೋ ವಾತಾವರಣವೇ ಜಿಲ್ಲೆಯ ತುಂಬಾ ತುಂಬಿಕೊಂಡಿದೆ. ಆದರೆ ಈ ಭಾಗದ ಖೂಳ ರಾಜಕಾರಣಿಗಳಿಗೆ ಮಾತ್ರ ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ರೈತರು ನೆನಪಾಗುತ್ತಾರೆ. ಬಣ್ಣದ ಮಾತಾಡಿ ಮುಗ್ಧ ರೈತರನ್ನು ಮರುಳು ಮಾಡಿ ಅಧಿಕಾರ ಸ್ಥಾನವನ್ನ ಸೇರಿಕೊಳ್ಳುತ್ತಾರೆ. ತುಂಗ ಭದ್ರಾ ನದಿಯಿಂದ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕೆಂಬುದೂ ಸೇರಿದಂತೆ ಈ ಭಾಗದ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದಿಟ್ಟಿರೋ ಬೇಡಿಕೆಗಳು ಧೂಳು ತಿನ್ನುತ್ತಿವೆ.

ಇದು ಒಟ್ಟಾರೆ ದುಷ್ಟ ವ್ಯವಸ್ಥೆಗೊಂದು ಸ್ಯಾಂಪಲ್ ಅಷ್ಟೆ. ಚುನಾವಣೆ ಅಂತ ಬಂದಾಗ ಈ ಖಬರುಗೇಡಿಗಳು ಜಾತಿ ಧರ್ಮಗಳ ಭಜನೆ ಮಾಡುತ್ತಾ ಜನರನ್ನು ಭಾವನಾತ್ಮಕವಾಗಿ ಹಾದಿ ತಪ್ಪಿಸುತ್ತಾರೆ. ಜಾತಿ ಮತಗಳ ಓಲೈಕೆ, ಮಂದಿರ ಮಸೀದಿಯಂಥಾ ಕೆಲಸಕ್ಕೆ ಬಾರದ ವಿಚಾರಗಳೇ ಚುನಾವಣಾ ವಸ್ತುವಾಗುತ್ತವೆ. ಆದರೆ ಚುನಾವಣೆಯ ಕಣಕ್ಕಿಳಬೇಕಿರೋದು ಇಂಥಾ ಜ್ವಲಂತ ಸಮಸ್ಯೆಗಳು ಮಾತ್ರ. ಇದು ಎಮ್ಮೆ ಚರ್ಮದ ರಾಜಕಾರಣಿಗಳಿಗೆ ಮನದಟಾಗದಿದ್ದರೆ ಹೋರಾಟದ ಹಾದಿಯಲ್ಲಿಯೇ ಮನದಟ್ಟು ಮಾಡಿಸೋ ತುರ್ತು ಈಗಿದೆ. ರೈತ ಹೋರಾಟಗಳೇ ಭಳಾಂಗು ಬೊಬ್ಬೆಗಳಾಗಿರೋ ಈ ಸಂದರ್ಭದಲ್ಲಿ ಅನ್ನದಾತನ ಮುಂದೆ ಭರವಸೆಯ ಬೇಳಕು ಬೀರುವವರ‍್ಯಾರು?

[adning id="4492"]

LEAVE A REPLY

Please enter your comment!
Please enter your name here