ಸೈಲೆಂಟಾಗುವ ಸನ್ನಾಹದಲ್ಲಿರೋ ಸುನೀಲನ ಪಕ್ಕೆಗೆ ತಿವಿದ ‘ಸಲಗ’!

[adning id="4492"]


ದುನಿಯಾ ವಿಜಯ್ ಮೊದಲ ಸಲ ನಿರ್ದೇಶನಕ್ಕಿಳಿದು ನಾಯಕನಾಗಿ ನಟಿಸುತ್ತಿರೋ ಚಿತ್ರ ಸಲಗ. ಈ ಚಿತ್ರದ ಕೆಲ ಪೋಸ್ಟರ್‌ಗಳು ಇತ್ತೀಚೆಗೆ ಹೊರಬಿದ್ದದ್ದೇ ಅದಕ್ಕೊಂದು ಸಂಗತಿಯನ್ನೂ ತಾಳೆಹಾಕಲಾಗಿತ್ತು. ಈ ಫೋಟೋದಲ್ಲಿ ಅಯ್ಯಪ್ಪ ಮಾಲಾಧಾರಿ ಪೊಲೀಸ್ ಪಾತ್ರಧಾರಿ ಧನಂಜಯ್ ಅವರನ್ನು ದುನಿಯಾ ವಿಜಿ ಗುರಾಯಿಸೋ ಸೀನಿತ್ತಲ್ಲಾ? ಅದಕ್ಕೂ ರೌಡಿ ಸೈಲೆಂಟ್ ಸುನೀಲ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್‌ರನ್ನು ಗುರಾಯಿಸಿದ್ದಕ್ಕೂ ತುಲನೆ ಮಾಡಲಾಗಿದೆ. ಅದರ ಫಲವಾಗಿ ಇದು ಸೈಲೆಂಟ್ ಸುನೀಲನ ಕಥೆಯಾಧಾರಿತ ಚಿತ್ರ ಅಂತೊಂದು ಸುದ್ದಿಯೂ ಹರಡಿಕೊಂಡಿತ್ತು.

ಈ ಸುದ್ದಿ ಯಾವಾಗ ಸೋಶಿಯಲ್ ಮೀಡಿಯಾಗಳಲ್ಲಿ ಸುಳಿದಾಡುತ್ತಾ ಮಾಧ್ಯಮಗಳಲ್ಲಿಯೂ ಸದ್ದು ಮಾಡಲಾರಂಭಿಸಿತ್ತೋ ಆಗ ಎಚ್ಚೆತ್ತುಕೊಂಡ ವಿಜಿ ಸ್ಪಟ್ಷೀಕರಣವನ್ನೂ ನೀಡಿದ್ದಾರೆ. ಈ ಚಿತ್ರಕ್ಕೂ ಸೈಲೆಂಟ್ ಸುನೀಲನ ಕಥೆಗೂ, ಅಲೋಕ್ ಕುಮಾರ್ ಅವರ ಸಮ್ಮುಖದಲ್ಲಿ ನಡೆದಿದ್ದ ಘಟನೆಗೂ ಯಾವ ಸಂಬಂಧವೂ ಇಲ್ಲ ಅಂದಿದ್ದಾರೆ. ಆದರೆ ಇದರಾಚೆಗೂ ಇದು ಸುನೀಲನ ಕಥೆಯೇ ಇದ್ದರೂ ಇರಬಹುದೆಂಬ ಗುಮಾನಿಯೊಂದು ಈ ಕ್ಷಣಕ್ಕೂ ಉಸಿರಾಡುತ್ತಿದೆ. ಆ ಮೂಲಕವೇ ಸಲಗದ ಚೂಪು ದಂತ ವಿನಾ ಕಾರಣ ಸುನೀಲನ ಪಕ್ಕೆಗೆ ತಿವಿದಂತಾಗಿದೆ!

ಅಷ್ಟಕ್ಕೂ ಒಂದು ಕಾಲಕ್ಕೆ ಇಡೀ ಬೆಂಗಳೂರನ್ನೇ ಅದುರಿಸಿದ್ದ ಸೈಲೆಂಟ್ ಸುನೀಲ ಈಗ ಪರ್ಮನೆಂಟಾಗಿಯೇ ಸೈಲೆಂಟಾಗೋ ಮೂಡಿನಲ್ಲಿದ್ದಾನೆ. ಈ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಿಸಿಬಿ ಆವರಣದಲ್ಲಿ ಅಲೋಕ್ ಕುಮಾರ್ ರೌಡಿಗಳ ಪೆರೇಡು ನಡೆಸಿದ್ದರಲ್ಲಾ? ಆ ಸಂದರ್ಭದಲ್ಲಿ ಅಲ್ಲಿ ಜಮೆಯಾದ ರೌಡಿಗಳ ಗುಂಪಿನಲ್ಲಿ ಸುನೀಲನೂ ಇದ್ದ. ಅದೇನು ಕಿಸುರಿತ್ತೋ… ಅಂತೂ ಸುನೀಲ ವಾರ್ನಿಂಗ್ ಮಾಡಿದ ಅಲೋಕ್ ಕುಮಾರ್ ಅವರನ್ನ ಗುರಾಯಿಸಿದ್ದ ಬಗ್ಗೆ ಸುದ್ದಿಯಾಗಿತ್ತು.

ಆ ನಂತರದಲ್ಲಿ ತನ್ನನ್ನು ಇಂಥಾ ಪೆರೇಡುಗಳಲ್ಲಿ ಭಾಗಿಯಾಗಿಸೋದರಿಂದ ಬದಲಾವಣೆಯ ಹಾದಿಗೆ ಮುಳ್ಳಾಗುತ್ತದೆ, ಇದರಿಂದ ತನಗೆ ವಿನಾಯಿತಿ ಕೊಡಬೇಕೆಂದು ಕೋರಿ ಸುನೀಲ ನ್ಯಾಯಾಲಯದ ಮೊರೆ ಹೋಗಿದ್ದನೆಂದೂ ಹೇಳಲಾಗಿತ್ತು. ಇದೆಲ್ಲ ಎಷ್ಟು ನಿಜವೋ… ಆದರೆ ಒಂದು ಮೂಲದ ಪ್ರಕಾರ ಸುನೀಲ ಸೈಲೆಂಟ್ ಆಗೋ ಮೂಡಿನಲ್ಲಿದ್ದಾನೆ. ಜಗತ್ತಿನ ದೃಷ್ಟಿಯಿಂದ ಮರೆಯಾಗಿ ಬೇರೆಯದ್ದೇ ಬದುಕು ಕಟ್ಟಿಕೊಳ್ಳೋ ಸನ್ನಾಹದಲ್ಲಿದ್ದಾನೆ. ಆದರೆ ಇದೀಗ ಸಲಗ ವಿನಾಕಾರಣ ಸುನೀಲನ ಪಕ್ಕೆಗೆ ತಿವಿದಿದೆ. ಮತ್ತೆ ಹಳೇ ಪ್ರಕರಣ ಮಗುಚಿ ಬಿದ್ದು ಮತ್ತೆ ಜನರ ದೃಷ್ಟಿ ಸುನೀಲನತ್ತ ಹೊರಳಿಕೊಳ್ಳುವಂತಾಗಿದೆ

[adning id="4492"]

LEAVE A REPLY

Please enter your comment!
Please enter your name here