ರಶ್ಮಿಕಾ ಸೃಷ್ಟಿಸಿದ್ದ ಮೌನ ಸಿಡಿಲಾಗೋ ಲಕ್ಷಣ!


ಸಿಂಪಲ್ಲಾಗೊಂದ್ ಲವ್ ಸ್ಟೋರಿಯಿಂದೀಚೆಗೆ ಜಾಲಿಬಾಯ್, ಲವರ್ ಬಾಯ್ ಆಗಿ ಓಡಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ವರ್ಷಂದಿಂದೀಚೆಗೆ ಥೇಟು ದುರಂತ ನಾಯಕನ ಅವತಾರವೆತ್ತಿದ್ದರು. ಈ ಲವ್ವು, ಫೇಲ್ಯೂರುಗಳೆಲ್ಲವೂ ತೀರಾ ಖಾಸಗಿ ಸಂಗತಿ. ಆದರೆ ಹೇಳಿಕೇಳಿ ರಕ್ಷಿತ್ ನಟ. ರಶ್ಮಿಕಾಳೊಂದಿಗಿನ ಪ್ರೀತಿಯೂ ಪಬ್ಲಿಕ್ಕಾಗಿ, ಎಂಗೇಜ್‌ಮೆಂಟು ಭಯಂಕರ ಈವೆಂಟಿನಂತೆ ಟೀವಿ ಚಾನೆಲ್ಲುಗಳಲ್ಲಿ ಪ್ರಸಾರವಾಯ್ತೆಂದ ಮೇಲೆ ಫೇಲ್ಯೂರ್ ಆದ ಲವ್ವು ಬೀದಿಗೆ ಬೀಳದಿರುತ್ತಾ?

ಅದರಂತೆಯೇ ರಶ್ಮಿಕಾಳೊಂದಿಗಿನ ಬ್ರೇಕಪ್ ಪ್ರಸಂಗದ ನಂತರ ರಕ್ಷಿತ್ ಶೆಟ್ಟಿಗೆ ದುರಂತ ನಾಯಕನ ಪಟ್ಟ ತಂತಾನೇ ಸಿಕ್ಕಿತ್ತು. ಈ ಡಿಪ್ರೆಸ್ ಮೂಡಿಗಿಳಿದ ರಕ್ಷಿತ್ ಸಾಮಾಜಿಕ ಜಾಲತಾಣಗಳಿಂದಲೂ ಸಂಪೂರ್ಣವಾಗಿಯೇ ಹೊರ ನಡೆದಿದ್ದರು. ಅಲ್ಲಿಗೆ ರಶ್ಮಿಕಾ ದೆಸೆಯಿಂದ ಅಭಿಮಾನಿಗಳ ಜೊತೆಗಿನ ಸಂಪರ್ಕವನ್ನೂ ಶೆಟ್ಟರು ತಾತ್ಕಾಲಿಕವಾಗಿ ಕಡಿದುಕೊಂಡಿದ್ದರು.

ಹೀಗೆ ವರ್ಷಾಂತರದ ವನವಾಸದಿಂದ ಬರ್ತಡೇ ನೆಪದಲ್ಲಿ ರಕ್ಷಿತ್ ಶೆಟ್ಟಿ ವಾಪಾಸಾಗಿದ್ದಾರೆ. ಹಾಗೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟ ರಕ್ಷಿತ್ ‘ಸಿಡಿಲು ಬರೋ ಮುಂಚೆ ಮೌನವಿರುತ್ತಾ’? ಎಂಬರ್ಥದ ಮಾರ್ಮಿಕವಾದೊಂದು ಪೋಸ್ಟ್ ಹಾಕಿದ್ದಾರೆ. ಅದ ರಕ್ಷಿತ್ ರೀ ಎಂಟ್ರಿಯ ಮೊದಲ ಪೋಸ್ಟ್. ಇದುವೇ ರಶ್ಮಿಕಾ ವರ್ಷದಿಂದೀಚೆಗೆ ಸೃಷ್ಟಿಸಿದ್ದ ಮೌನವನ್ನು ಶೆಟ್ಟರು ಏಕಾಂತದಲ್ಲಿ ಸಿಡಿಲಾಗಿ ಪಳಗಿಸಿಕೊಂಡು ಆಸ್ಫೋಟಗೊಳ್ಳಲು ತಯಾರಾದ ಸೂಚನೆಯಂತೆಯೂ ಕಾಣಿಸುತ್ತಿದೆ.

ಇದೆಲ್ಲ ಏನೇ ಇದ್ದರೂ ರಕ್ಷಿತ್ ಶೆಟ್ಟಿಯ ಈ ಎನರ್ಜಿಟಿಕ್ ಪೋಸ್ಟಿನಿಂದ ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ. ವರ್ಷದ ಹಿಂದೆ ಆವರಿಸಿಕೊಂಡಿದ್ದ ವಾತಾವರಣ ಕಂಡು ಎಲ್ಲರಲ್ಲಿಯೂ ಒಂದು ಆತಂಕ ಇದ್ದೇ ಇತ್ತು. ಆದರೆ ಈ ಹುಟ್ಟುಹಬ್ಬದ ಆಚೆಗೇ ಅದೆಲ್ಲವನ್ನೂ ರಕ್ಷಿತ್ ಕಳಚಿಟ್ಟಿದ್ದಾರೆ. ಈಗ ಅವರು ನಟಿಸಿರೋ ಅವನೇ ಶ್ರೀಮನ್ನಾರಾಯಣ ಚಿತ್ರ ಸದ್ದು ಮಾಡುತ್ತಿದೆ. ಅದರ ಹಿಂದೆಯೇ ಮತ್ತೊಂದಷ್ಟು ಪ್ರಾಜೆಕ್ಟುಗಳೊಂದಿಗೆ ಶೆಟ್ಟರು ಹ್ಯಾಪಿ ಮೂಡಿನೊಂದಿಗೆ ಮರಳಿದ್ದಾರೆ!

LEAVE A REPLY

Please enter your comment!
Please enter your name here