ಕಮಲ ಪತ್ರೆಯಿಂದ ಜಾರಿ ಕೈ ಹಿಡಿಯಲಿದೆಯಾ ಸುಮಲತೆ? ಇದು ಅಂಬಿ ಬೆನ್ನಿಗಿರಿದಿದ್ದ ಸಿದ್ದು ಮತ್ತು ಚೆಲುವನ ಗೇಮ್ ಪ್ಲ್ಯಾನ್!


ರಾಜಕಾರಣದಲ್ಲಿ ಯಾರೂ ಸ್ನೇಹಿತರಲ್ಲ, ಶತ್ರುಗಳೂ ಅಲ್ಲ ಅಂತೊಂದು ಮಾತಿದೆ. ಇದು ನಿಜವೂ ಹೌದು. ಯಾಕೆಂದರೆ ಅಲ್ಲಿ ಆತ್ಮಸಾಕ್ಷಿ ಇಟ್ಟುಕೊಂಡಿರುವವರ ಸಂಖ್ಯ ಕಡಿಮೆ ಇದೆ. ಆದ್ದರಿಂದಲೇ ಇಲ್ಲಿ ಎಲ್ಲವೂ ಸಾಧ್ಯ. ಇವತ್ತು ಬೀದಿಯಲ್ಲಿ ನಿಂತು ಶರಂಪರ ಕಿತ್ತಾಡಿಕೊಂಡವೂ ನಾಳೆಯ ಹೊತ್ತಿಗೆಲ್ಲ ಒಟ್ಟಿಗೇ ನಿಂತು ವಿಕ್ಟರಿ ಸಿಂಬಲ್ಲು ತೋರಿಸಿ ನಗಬಹುದು. ಈ ಮಾತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ವೀರೋಚಿತ ಗೆಲುವು ಕಂಡಿರುವ ಸುಮಲತಾ ಅಂಬರೀಶ್ ಅವರ ವಿಚಾರದಲ್ಲಿಯೂ ನಿಜವಾಗಲಿದೆಯಾ ಅಂತೊಂದು ಅನುಮಾನ ಇದೀಗ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾಗಿರೋದು ಮಂಡ್ಯ ಸೀಮೆಯಲ್ಲಿಯೇ ನಡೆಯುತ್ತಿರುವ ಕೆಲ ರಾಜಕೀಯ ಪಲ್ಲಟ!
ಸುಮಲತಾ ಅಂಬರೀಶ್ ಕಾಂಗ್ರೆಸ್ನಲ್ಲಿ ಟಿಕೆಟು ಸಿಕ್ಕದ್ದರಿಂದ ರೆಬೆಲ್ ಆಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಆ ನಂತರದ ಬೆಳವಣಿಗೆಗಳಲ್ಲಿ ಬಿಜೆಪಿ ಅವರಿಗೆ ಪರೋಕ್ಷ ಬೆಂಬಲ ನೀಡಿತ್ತು. ಈ ಕಾರಣದಿಂದಲೇ ಸುಮಕ್ಕ ಗೆದ್ದರೆ ಖಂಡಿತಾ ಬಿಜೆಪಿ ಸೇರಿಕೊಳ್ಳುತ್ತಾರೆಂಬ ಮಾತುಗಳೂ ಕೇಳಿ ಬಂದಿದ್ದವು. ಈಗ ಹೇಳಿ ಕೇಳಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದ್ದರಿಂದ ಸುಮಕ್ಕ ಬಿಜೆಪಿ ಸೇರಿಕೊಳ್ತಾರೆ, ಅವರಿಗೆ ಸಚಿವ ಸ್ಥಾನ ಪಕ್ಕಾ ಎಂಬಂಥಾ ಮಾತುಗಳೇ ಕೇಳಿ ಬಂದಿದ್ದವು. ಆದರೆ ಇದೀಗ ಸುಮಲತಾ ಕಾಂಗ್ರೆಸ್ ಸೇರಿಕೊಳ್ಳುತಿದ್ದಾರೆಂಬ ರೂಮರೊಂದು ಬಲವಾಗಿಯೇ ಕೇಳಿ ಬರಲಾರಂಭಿಸಿದೆ!


ಇದಕ್ಕೆ ಕಾರಣವಾಗಿರೋದು ದೇವೇಗೌಡರ ಪಾಳೆಯದಿಂದ ಹೊರ ಬಿದ್ದು ಕಾಂಗ್ರೆಸ್ ಸೇರಿಕೊಂಡಿರೋ ಚಲುವರಾಯಸ್ವಾಮಿಯ ಬರ್ತಡೇ ಆಚೀಚೆ ನಡೆಯುತ್ತಿರೋ ವಿದ್ಯಮಾನ. ಚಲುವರಾಯಿಯ ಬರ್ತಡೆ ವಿಶ್ ಮಾಡೋ ಫೋಸ್ಟರುಗಳು ಮಂಡ್ಯಾ ತುಂಬಾ ರಾರಾಜಿಸುತ್ತಿದೆ. ಅವುಗಳಲ್ಲಿ ಸುಮಲತಾ ಕಾಂಗ್ರೆಸ್ ರಾಜ್ಯ ನಾಯಕರೊಂದಿಗಿರೋ ಫೋಟೋಗಳೂ ಲಕಲಕಿಸುತ್ತಿವೆ. ಇದುವೇ ಸುಮಕ್ಕ ಬೇಗನೆ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆಂಬ ಮಾತುಗಳಿಗೆ ಪುಷ್ಟಿ ನೀಡುತ್ತಿವೆ. ಇದಲ್ಲದೇ ಸುಮಲತಾ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಚಲುವರಾಯಸ್ವಾಮಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವುದೂ ಕೂಡಾ ಈ ರೂಮರ್ ನಿಜವಾಗೋ ಲಕ್ಷಣದಂತೆಯೇ ಭಾಸವಾಗುತ್ತಿದೆ.
ಸುಮಲತಾ ಕಾಂಗ್ರೆಸ್ ಸೇರಿಕೊಳ್ಳುತ್ತಾರೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಕಡೇಯ ದಿನಗಳಲ್ಲಿ ಮಂಡ್ಯಾ ರಾಜಕಾರಣದಲ್ಲಿ ಎಂತೆಂಥಾ ಪಲ್ಲಟಗಳು ನಡೆದಿದ್ದವು, ಅದರಿಂದ ಅಂಬಿ ಹೇಗೆ ಘಾಸಿಗೊಂಡಿದ್ದರೆಂಬುದನ್ನಿಲ್ಲಿ ಮೆಲುಕು ಹಾಕಬೇಕಿದೆ. ಹೀಗೆ ಮಂಡ್ಯಾ ಕಾಂಗ್ರೆಸ್ನಲ್ಲಿ ಕಡೇಯ ದಿನಗಳಲ್ಲಿ ಅಂಬಿಯನ್ನು ಮೂಲೆಗುಂಪು ಮಾಡೋ ಷಡ್ಯಂತ್ರದಲ್ಲಿ ಇದೇ ಚಲುವರಾಯಸ್ವಾಮಿ ಅಸ್ತ್ರವಾಗಿ ಬಳಕೆಯಾಗಿದ್ದರು. ತಾವೇ ಅಂಬಿಗೆ ಪರ್ಯಾಯ ನಾಯಕನೆಂಬಂತೆ ಪೋಸು ಕೊಟ್ಟಿದ್ದರು. ಅಷ್ಟಕ್ಕೂ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕನಿಷ್ಠ ಕೃತಜ್ಞತೆಯೂ ಇಲ್ಲದೆ ಅಂಬಿಯನ್ನು ಹನನ ಮಾಡಲು ಅನುಸರಿಸಿದ ಮಾರ್ಗಗಳು ಒಂದೆರಡಲ್ಲ. ಅಂಬರೀಶ್ ಅವರನ್ನು ವ್ಯವಸ್ಥಿತವಾಗಿಯೇ ಮಂಡ್ಯ ಸೀಮೆಯಲ್ಲಿ ಮೂಲೆಗುಂಪು ಮಾಡಿ ಅವರಿಗೆ ಪರ್ಯಾಯವಾಗಿ ಒಕ್ಕಲಿಗ ನಾಯಕತ್ವವನ್ನು ಪ್ರತಿಷ್ಠಾಪಿಸುವ ಸಲುವಾಗಿ ಸಿದ್ದು ಹೊಸೆದ ವ್ಯರ್ಥ ಪ್ಲ್ಯಾನಿನ ಹೆಸರು ಚಲುವರಾಯಸ್ವಾಮಿ!


ಚಲುವರಾಯಸ್ವಾಮಿ ಜೆಡಿಎಸ್ ಎಲಿಮೆಂಟು. ಅವರನ್ನು ಕಳೆದ ರಾಜ್ಯಸಬಾ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನ ನಡೆಸುವಂತೆ ನೋಡಿಕೊಂಡ ಕಾಂಗ್ರೆಸ್ನ ಇತರೇ ನಾಯಕರ ಲೆಕ್ಕಾಚಾರಗಳು ಅದೇನಿದ್ದವೋ… ಆದರೆ ಸಿದ್ದುಗೆ ಮಾತ್ರ ಅಂಬಿಯನ್ನು ಚಲುವರಾಯಸ್ವಾಮಿಯ ಮೂಲಕ ಮೂಲೆಗುಂಪು ಮಾಡುವ ಸ್ಪಷ್ಟವಾದ ಯೋಜನೆಯಿತ್ತು. ಅದರ ಫಲವಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿಯೂ ಚಲುವನೆ ಮೆರೆಯುವಂತೆ ನೋಡಿಕೊಂಡರು. ಮಂಡ್ಯದಲ್ಲಿ ಚಲುವರಾಯಿಯೇ ಕಾಂಗ್ರೆಸ್ ಒಕ್ಕಲಿಗರ ಐಕಾನ್ ಎಂಬಂತೆ ಬಿಂಬಿಸಲು ಶತಪ್ರಯತ್ನ ನಡೆಸಿದರು. ಇದರಿಂದ ಅವಮಾನ ಮತ್ತು ಆಘಾತವಾಗಿದ್ದ್ದು ಅಂಬರೀಶ್ ಅವರಿಗೆ. ತಮ್ಮ ಕಣ್ಣೆದುರೇ ರಾಜಕೀಯಕ್ಕೆ ಬಂದ ಚೆಲುವ ತಮ್ಮದೇ ಪಕ್ಷಕ್ಕೆ ಹಾರಿ ತಮ್ಮನ್ನೇ ಮೂಲೆಗುಂಪು ಮಾಡಲು ನೋಡಿದರೆ ಯಾರಿಗಾದರೂ ಹೇಗಾಗಬೇಡ?


ಸಿದ್ದು ತಾಳಕ್ಕೆ ಕುಣಿಯುತ್ತಾ ತಮ್ಮ ಹುಡುಗರನ್ನೇ ಸೆಳೆದುಕೊಂಡ ಚಲುವನ ವಿರುದ್ಧ ಅಂಬರೀಶ್ ಅವರಿಗೆ ಅಗಾಧವಾದ ಸಿಟ್ಟಿತ್ತು. ಅದು ಆ ಚುನಾವಣೆಯಲ್ಲಿಯೇ ಜಾಹೀರಾಗಿ ಅಂಬಿ ವಿರೋಧಿಗಳಿಗೆ ಮರ್ಮಾಘಾತವೂ ಆಗಿತ್ತು. ಇವಿಷ್ಟು ವಿದ್ಯಮಾನಗಳನ್ನು ಮಂಡ್ಯ ಸೀಮೆಯ ಅಂಬಿ ಅಭಿಮಾನಿಗಳು ನೆನಪಿಟ್ಟುಕೊಂಡಿದ್ದಾರೆ. ಇದೆಲ್ಲದರಾಚೆಗೆ ಸುಮಲತಾ ಇನ್ನೇನು ಕಾಂಗ್ರೆಸ್ ಸೇರಿಯೇ ಬಿಟ್ಟರು ಎಂಬಂಥಾ ವಾತಾವರಣವಿದೆ. ಅದೆಷ್ಟು ನಿಜವೆಂಬುದು ಇಷ್ಟರಲ್ಲಿಯೇ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here