ಲವ್ ಜೋ಼ನ್ ನೀನು ಈ ಬದುಕಿನ ಪರ್ಮನೆಂಟು ಅಚ್ಚರಿ!

[adning id="4492"]

ಹ್ಯಾಗಿದ್ದಿ ಅಂತ ಪೀಠಿಕೆ ಹಾಕೋದೇ ಕ್ಲೀಷೆಯಾದೀತೇನೋ. ನೀ ಅದೇ ನಗುವಿನೊಂದಿಗೆ, ತುಸು ಮೌನ ಧರಿಸಿ ಖುಷಿ ಖುಷಿಯಾಗಿಯೇ ಇರಬೇಕೆಂದು ಪ್ರತೀ ಕ್ಷಣವೂ ಬಯಸೋ ನಾನು ಯಾವತ್ತಿಗೂ ನಿನ್ನನ್ನು ನೊಂದ ಸ್ಥಿತಿಯಲ್ಲಿ ಕಾಣಲಾರೆ. ನಿನ್ನ ಬೊಗಸೆ ಕಣ್ಣುಗಳಲ್ಲಿ ಫಳ್ಳನೆ ಹೊಳೆಯೋ ಮಿಂಚಿರಬೇಕೇ ಹೊರತು, ಚಿಂತೆಯ ಛಾಯೆಯಿಂದ ಮಂಕಾಗಕೂಡದು. ಇದೆಲ್ಲವೂ ನನ್ನಾಸೆ. ಇಂಥಾ ಸಾವಿರ ಆಸೆಗಳನ್ನು ಎದೆಯೊಳಗಿಟ್ಟುಕೊಂಡು ನಿನ್ನ ಧ್ಯಾನದಲ್ಲಿಯೇ ದಿನಗಳೂ ಕ್ಷಣಗಳಂತೆ ಹೊರಳುತ್ತಿವೆ. ಈ ಬದುಕನ್ನು ಸವರಿಕೊಂಡು ಸಾಗೋ ಕ್ಷಣಗಳಿಗೆ ಇಂಥಾದ್ದೊಂದು ಕರುಣೆ ಇರದೇ ಹೋಗಿದ್ದಿದ್ದರೆ ಬಹುಶಃ ನಾ ಸತ್ತೇ ಹೋಗುತ್ತಿದ್ದೆನೇನೋ. ಹೀಗೆ ನಿನ್ನನ್ನೇ ಆವಾಹಿಸಿಕೊಂಡು ಧ್ಯಾನಸ್ಥನಾದ ದಿವ್ಯ ಘಳಿಗೆಗೀಗ ಮೂರೂ ಮುಕ್ಕಾಲು ವರ್ಷ!

ಓಹ್… ನೀನೊಂದು ದಿನ ಕಾಣಿಸದಿದ್ದರೂ ಕಂಗಾಲಾಗಿ, ಏರಿಯಾದ ಸಮಸ್ಥ ಬೇಕರಿಗಳೂ ಉದ್ಧಾರಾಗಿ ಹೋಗುವಂತೆ ಪ್ಯಾಕೆಟ್ಟುಗಟ್ಟಲೆ ಸಿಗರೇಟು ಸುಟ್ಟು ಸಮಾಧಾನಿಸಿಕೊಳ್ಳುತ್ತಿದ್ದ ನಾನು ಇಷ್ಟು ಕಾಲ ನಿನ್ನನ್ನು ನೋಡದೆ ಹ್ಯಾಗಿದ್ದೆ? ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಂಡಾಗ ಅಚ್ಚರಿಯೊಂದೇ ಉತ್ತರವಾಗುಳಿಯುತ್ತೆ. ನಿನ್ನ ಪುಟ್ಟ್‌ಪುಟ್ಟ ಪಾದದ ಪ್ರತೀ ಕದಲಿಕೆಗಳೂ ನನ್ನೆದೆಯೊಳಗೆ ಅಚ್ಚಾದಂತಿದ್ದವು. ಮನಸ್ಸು ಅದರ ಸೂಕ್ಷ್ಮ ರೂಹುಗಳನ್ನು ಕಂಡುಕೊಂಡಿತ್ತು. ನೀನು ಇಂತಿಷ್ಟೇ ಹೊತ್ತಿಗೆ ಸ್ನಾನ ಮಾಡಿ ತಲೆ ಒದರಿಕೊಂಡು ಬಾಲ್ಕನಿಯಲ್ಲಿ ಕಾಣಿಸಿಕೊಳ್ಳುತ್ತಿಯೆಂಬುದರಿಂದ ಮೊದಲ್ಗೊಂಡು, ನೀ ಕಾಲೇಜಿಗಿ ಹೋಗಿ ಬರೋ ಕಾಲಗಳಿಗೆ ಗಡಿಯಾರದ ಹಂಗಿರಲಿಲ್ಲ. ಕಾಲವನ್ನು ನಿನ್ನ ಕದಲಿಕೆಗಳಿಂದಲೇ ಅಂದಾಜಿಸುವಷ್ಟು ನೀ ನನ್ನನ್ನಾವರಿಸಿಕೊಂಡ ಪರಿ ಇದೆಯಲ್ಲಾ? ಅದು ನನ್ನ ಜೀವಿತದ ಪರ್ಮನೆಂಟು ಅಚ್ಚರಿ!

ಒಂದೇ ಒಂದು ಮಾತೂ ಆಡದೇನೇ ಹುಟ್ಟಿಕೊಂಡ ಈ ಪ್ರೀತಿ ಒಂದೆರಡು ಮಾತುಗಳು ಮಥಿಸುವ ಅವಕಾಶವೂ ಇಲ್ಲದಂತೆ ಅನಾಥವಾಗಿದ್ದು ನನ್ನ ತಪ್ಪೋ, ಕಾಲದ ಕುಹಕವೋ ಸ್ಪಷ್ಟವಾಗಿ ಹೇಳಲಾರೆ. ಹೀಗೆ ಹೇಳಲೇಬೇಕಿದ್ದ ಮಾತುಗಳನ್ನೆಲ್ಲ ಎದೆಯೊಳಗಿಟ್ಟುಕೊಂಡು ಅನುಕ್ಷಣವೂ ನಿಟ್ಟುಸಿರಾಗುತ್ತಾ, ಆ ಮೂಲಕವೇ ದೂರದಲ್ಲೆಲ್ಲಿಯೋ ಇರುವ ನಿನ್ನನ್ನು ಮುಟ್ಟುತ್ತಾ ಬದುಕೋದು ಸ್ವರ್ಗವೂ ಹಾದು, ನರಕವೂ ಹೌದು. ಸುತ್ತಲ ಜನರಿರಲಿ, ಹತ್ತಿರದ ಗೆಳೆಯರ ಪಾಲಿಗೂ ಇದು ನಗೆಪಾಟಲಿನ ವಿಷಯ. ಈ ಜಗತ್ತಿನ ಬೂಟಾಟಿಕೆಯ ಕೊಂಡಿಯನ್ನೇ ಕಳಚಿಕೊಂಡು ಕಡುಮೌನವನ್ನ ಆವಾಹಿಸಿ ಕೂತವನಿಗೆ ಅಲ್ಲಿನ ಮಾತು, ಮೂದಲಿಕೆಗಳಿಂದ ಏನಾಗಬೇಕಾದೀತು ಹೇಳು?

ನನಗೀ ದೇವರ ಮೇಲೆ ನಂಬಿಕೆಯಿಲ್ಲ. ಆದರೆ ಮನಸಲ್ಲಿ ಮಾರ್ಧನಿಸೋ ಮಾತುಗಳ ಮೇಲೆ ಇನ್ನೊಂದು ಜನುಮಕ್ಕೂ ಬಾಕಿ ಇಟ್ಟುಕೊಳ್ಳುವಷ್ಟು ವಿಶ್ವಾಸವಿದೆ. ಅದು ಈ ಬದುಕಿನ ಯಾವುದಾದರೊಂದು ತಿರುವಲ್ಲಿ ನೀ ಜೊತೆಯಾಗುತ್ತಿ, ಎದೆಯೊಳಗೆ ಪೇರಿಸಿಟ್ಟುಕೊಂಡಿರೋ ಮಾತುಗಳನ್ನೆಲ್ಲ ನಿನ್ನ ಮುಂದೆ ಹರಡಿ ನಿರಾಳಕವಾಗೋ ಕಾಲವೊಂದು ಬಂದೇ ಬರುತ್ತದೆಂದು ಪದೇ ಪದೆ ಹೇಳುತ್ತಿದೆ. ಮಾತಿನ ಚಹರೆಯೇ ಮರೆತು ಹೋಗುವಂಥಾ ಈ ಕಡು ಮೌನದೊಳಗೂ ನಾನು ಜೀವಂತವಾಗಿದ್ದೇನೆಂದರೆ ಅದಕ್ಕೆ ಅಂಥಾದ್ದೊಂದು ಅಸೀಮ ನಂಬಿಕೆಯಷ್ಟೇ ಕಾರಣ ಅಂತ ನಿಖರವಾಗಿ ಹೇಳಬಲ್ಲೆ

ಜೀವಾ… ಜಾಸ್ತಿ ಬಳಸಿದರೆ ನಿರೀಕ್ಷೆಗಳು ಕೂಡಾ ಸವೆದು ಹೋಗುತ್ತವೇನೋ. ಆದರೆ ನಾನು ಉಸಿರಾಡುತ್ತಿರೋದೇ ನೀನು ಸಿಕ್ಕೇ ಸಿಗುತ್ತಿಯೆಂಬೋ ಪ್ರಾಂಜಲ ನಿರೀಕ್ಷೆಯಿಂದ. ನಾನಾಗಿ ನಾನೇ ಸೃಷ್ಟಿ ಮಾಡಿಕೊಂಡಿರೋ ಈ ದಿವ್ಯ ಏಕಾಂತದಲ್ಲಿ ಮೌನವೆಂಬುದೂ ಮೆಲುವಾಗಿ ಮಾತನಾಡುತ್ತೆ; ನಂಗೊಬ್ಬನಿಗೇ ಕೇಳಿಸುವಂತೆ. ಆ ಮಾತುಗಳಲ್ಲಿ ನಿನ್ನೊಲವಿನ ಸ್ವರವಷ್ಟೇ ಸ್ಪಷ್ಟ. ಆದರೆ ಇತ್ತಿತ್ತಲಾಗಿ ಅದೇಕೋ ಕ್ಷಣ ಕ್ಷಣವೂ ನಿನ್ನನ್ನು ತಲುಪೋ ದಾರಿ ಏಕಾಏಕಿ ಉದ್ದಾನುದ್ದ ಬೆಳೆದುಕೊಂಡಂತಿದೆ. ನನ್ನೊಳಗಿನ ತಾಕಲಾಟಗಳೆಲ್ಲ ಬರೀ ಭ್ರಮೆಯಾ ಅಂತ ಬೆಚ್ಚಿ ಬೀಳುವಂಥಾ ಯಾತನಾದಾಯಕ ಸ್ಥಿತಿ. ಈಗೀಗಂತೂ ನನ್ನ ಜಗತ್ತಿನಲ್ಲಿ ಮೌನವೂ ಮಿಸುಕಾಡೋದನ್ನು ನಿಲ್ಲಿಸಿದೆ. ಬಹುಶಃ ನಿನ್ನ ಕಣ್ಣ ಬೆಳಕಷ್ಟೇ ನನ್ನನ್ನೀ ಕೂಪದಿಂದ ಎತ್ತಿ ಹೊರಗೊಯ್ಯ ಬಹುದೇನೋ… ಆ ಗಾಢ ನಂಬಿಕೆಯಲ್ಲಿಯೇ ಕತ್ತಲ ಪರಿಧಿಯಾಚೆಗಿನ ಅಸ್ಪಷ್ಟ ಹಾದಿಯತ್ತ ಕಣ್ಣು ಕೀಲಿಸಿ ಕೂತಿದ್ದೇನೆ; ನಿನ್ನ ನೆರಳು ಸೋಕೋ ಕ್ಷಣವೊಂದಕ್ಕೆ ಹಂಬಲಿಸುತ್ತಾ…

-ನಿನ್ನವನು

[adning id="4492"]

LEAVE A REPLY

Please enter your comment!
Please enter your name here