ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ರೆಬೆಲ್ ಸಾಂಗ್ಲಿಯಾನ!

ಇತ್ತ ಎಲ್ಲ ಪಕ್ಷಗಳೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಚುನಾವಣಾ ಕಣಕ್ಕಿಳಿದಿರೋ ಹೊತ್ತಿನಲ್ಲಿ ಅಷ್ಟದಿಕ್ಕುಗಳಿಂದಲೂ ಅಸಮಾಧಾನಗಳು ಹೊಗೆಯಾಡಲಾರಂಭಿಸಿವೆ. ಕಾಂಗ್ರೆಸ್, ಬಿಜೆಪಿ, ಜೇಡಿಎಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಇದೇ ವಾತಾವರಣವಿದೆ.

ಆದರೆ, ರಾಷ್ಟ್ರೀಯ ಪಕ್ಷದ ಕರ್ನಾಟಕದ ಕಾಂಗ್ರೆಸ್ ನಾಯಕರು ಮಾತ್ರ ಇಂಥಾ ಅಸಮಾಧಾನದ ಆಫ್ಟರ್ ಎಫೆಕ್ಟಿನಿಂದ ತುಸು ಹೆಚ್ಚೇ ಕಂಗಾಲಾಗಿದ್ದಾರೆ. ಯಾಕೆಂದರೆ ಆಂತರಿಕ ಭಿನ್ನಮತವೆಂಬುದು ಅವರ ಕೈ ಮೀರಿ ಬೆಳೆದು ಬಿಟ್ಟಿದೆ. ಇದೀಗ ರಾಜ್ಯದ ಕ್ರಿಶ್ಚಿಯನ್ ಸಮುದಾಯದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಸಾಂಗ್ಲಿಯಾನ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಎಸೆದು ರೆಬೆಲ್ ಆಗಿದ್ದಾರೆ.

ಹತ್ತು ವರ್ಷಗಳಿಂದೀಚೆಗೆ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದರೂ ಈ ಬಾರಿ ಕರ್ನಾಟಕದಲ್ಲಿ ತಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬುದು ಸಾಂಗ್ಲಿಯಾನರ ಸಿಟ್ಟಿಗೆ ಕಾರಣ. ರಾಜ್ಯದ ಇಪ್ಪತ್ತೆಂಟು ಕ್ರೇತ್ರಗಳಲ್ಲಿ ಕ್ರೈಸ್ಥರನ್ನು ಕಡೆಗಣಿಸಿದ್ದನ್ನು ವಿರೋಧಿಸಿ ಸಾಂಗ್ಲಿಯಾನ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಾರಿ ಸಾಂಗ್ಲಿಯಾನ ಬೆಂಗಳೂರು ಉತ್ತರ ಮತ್ತು ಕೇಂದ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು. ಕಡೆಗೂ ಅದು ಕೈಗೂಡದಿದ್ದಾಗ ಪಕ್ಷೇತರನಾಗಿ ಸ್ಪರ್ಧಿಸೋದಾಗಿಯೂ ಗುಟುರು ಹಾಕಿದ್ದರು. ಅದ್ಯಾವುದಕ್ಕೂ ನಾಯಕರು ಕ್ಯಾರೇ ಅನ್ನದಿದ್ದುದರಿಂದ ರೊಚ್ಚಿಗೆದ್ದಿರೋ ಸಾಂಗ್ಲಿಯಾನ ಈಗ ಕಾಂಗ್ರೆಸ್ ನಿಂದಲೇ ಹೊರ ನಡೆಯಲು ತೀರ್ಮಾನಿಸಿದ್ದಾರೆ.

LEAVE A REPLY

Please enter your comment!
Please enter your name here