ಸಿದ್ಧಾಂತ ಒಪ್ಪದವರನ್ನು ದೇಶದ್ರೋಹಿ ಅನ್ನುವಂತಿಲ್ಲ ಅಂದ್ರು ಅಡ್ವಾಣಿ!

[adning id="4492"]

– ಸ್ವಪಕ್ಷೀಯರಿಗೇ ಮನುಷ್ಯತ್ವದ ಪಾಠ!

– ಇದು ನೇಪಥ್ಯಕ್ಕೆ ಸರಿದ ನಾಯಕನ ಆತ್ಮಾವಲೋಕನ!

ಕಾಲ ಎಲ್ಲವನ್ನೂ ಬದಲಿಸುತ್ತದೆ ಅನ್ನೋದು ಲೋಕರೂಢಿಯ ಮಾತು. ಇದುವೇ ಮನಸುಗಳನ್ನೂ ಮಾಗಿಸುತ್ತೆ. ನಂಬಿಕೊಂಡ ವಿಚಾರಗಳನ್ನು ಬದಲಿಸುತ್ತೆ. ನೆಚ್ಚಿಕೊಂಡ ಸಿದ್ಧಾಂತಗಳನ್ನೂ ಒರೆಗೆ ಹಚ್ಚಿ ನೋಡುವಂತೆಯೂ ಪ್ರೇರೇಪಿಸುತ್ತೆ. ಈ ಲೋಕಸಭಾ ಚುನಾವಣೆಯ ಹೊತ್ತಿಗೆ ಸಕ್ರಿಯ ರಾಜಕಾರಣದಿಂದ ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿದಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಕೂಡಾ ಅಂಥಾದ್ದೊಂದು ಬದಲಾವಣೆಗೆ ಪಕ್ಕಾಗಿದ್ದಾರೆನ್ನಿಸುತ್ತೆ. ಇಲ್ಲದಿದ್ದರೆ ಅವರ ಕಡೆಯಿಂದ ತಾವೇ ಕಟ್ಟಿ ಬೆಳೆಸಿದ ತಮ್ಮದೇ ಪಕ್ಷಕ್ಕೆ ಈ ರೀತಿಯಲ್ಲೊಂದು ಕಿವಿಮಾತು ರವಾನಿಸೋದು ಸಾಧ್ಯವಾಗುತ್ತಿರಲಿಲ್ಲ!

ದೇಶವೆಂಬುದು ಮೊದಲು. ಪಕ್ಷ ಆನಂತರದ್ದು. ನಮ್ಮ ಸಿದ್ಧಾಂತಗಳನ್ನು ಒಪ್ಪಿಕೊಳ್ಳದವರನ್ನು ದೇಶದ್ರೋಹಿಗಳೆಂದು ಜರಿಯಬೇಡಿ ಎಂದಿರೋ ಅಡ್ವಾಣಿ ಈ ಮೂಲಕ ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯವನ್ನು ಗೌರವಿಸಿ ಅಂತ ಬಿಜೆಪಿಗರಿಗೇ ತಿಳಿ ಹೇಳಿದ್ದಾರೆ.

ಈ ಬಾರಿ ಲಾಲ್ ಕೃಷ್ಣ ಅಡ್ವಾಣಿಯವರ ಶಕ್ತಿಯಂತಿದ್ದ, ಅವರ ರಾಜಕೀಯ ಜೀವನವನ್ನು ಪೊರೆದಿದ್ದ ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾ ಕಣಕ್ಕಿಳಿದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರಿಗೂ ಗೆಲುವಿನ ರಂಗು ತುಂಬಿದ್ದ ಕ್ಷೇತ್ರವಿದು. ಅಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರದ ಮೆರವಣಿಗೆ ನಡೆಯುತ್ತಿದ್ದರೆ, ಒಬ್ಬಂಟಿಗರಾದಂತಿರೋ ಅಡ್ವಾಣಿ ತಮ್ಮ ಬ್ಲಾಗ್ ಮೂಲಕ ಹೀಗೊಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆತ್ಮಾವಲೋಕನದ ಧಾಟಿಯಲ್ಲಿ ಒಂದಷ್ಟು ಎಚ್ಚರದಂಥಾ, ಮಾನವೀಯ ನೆಲೆಗಟ್ಟಿನ ಸಂದೇಶವನ್ನೂ ತಮ್ಮದೇ ಪಕ್ಷದವರಿಗೆ ದಾಟಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಬಿಜೆಪಿ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಂಬಿಕೆಯಿರಿಸಿತ್ತು. ನಮ್ಮ ರಾಷ್ಟ್ರೀಯವಾದದ ಸಿದ್ಧಾಂತವನ್ನು ಒಪ್ಪಿಕೊಳ್ಳದ ಯಾರನ್ನೂ ದೇಶದ್ರೋಹಿಗಳೆಂದು ಪರಿಗಣಿಸಿರಲಿಲ್ಲ. ಸೈಂದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರನ್ನು ಶತ್ರುಗಳಂತೆಯೂ ನೋಡಿರಲಿಲ್ಲ. ಈ ತತ್ವಕ್ಕೆ ಬಿಜೆಪಿ ಬದ್ಧವಾಗಿರಬೇಕೆಂದು ಅಡ್ವಾಣಿ ಕಿವಿ ಮಾತು ಹೇಳಿದ್ದಾರೆ.

ಬಹುಶಃ ದೇಶಾಧ್ಯಂತ ಹರಡಿಕೊಂಡಿರೋ ಬಿಜೆಪಿಯ ನಡಾವಳಿಗಳನ್ನು ಗಮನಿಸಿ, ಅದರ ಸಂಭಾವ್ಯ ದುರಂತಗಳನ್ನು ಅಂದಾಜಿಸಿಯೇ ಅಡ್ವಾಣಿಯವರು ಇಂಥಾ ಮಾತುಗಳನ್ನಾಡಿದ್ದಾರೆಂದೇ ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ. ಅಷ್ಟಕ್ಕೂ ಅಡ್ವಾಣಿಯವರ ಮಾತುಗಳನ್ನು ಬಿಜೆಪಿ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ, ಏನೇನೂ ಪ್ರಭಾವವಿರದಿದ್ದ ಭಾರತೀಯ ಜನತಾ ಪಾರ್ಟಿ ಇಷ್ಟು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರೋದರ ಹಿಂದಿರೋ ಶಕ್ತಿಯಂಥವರು ಅಡ್ವಾಣಿ. ಸೈದ್ಧಾಂತಿಕವಾಗಿ ವಿರೋಧ ಹೊಂದಿರುವವರು, ಅವರ ಕೆಲ ನಿರ್ಧಾರಗಳನ್ನು ವಿರೋಧಿಸುವವರೂ ಕೂಡಾ ಇದನ್ನೊಪ್ಪಿಕೊಳ್ಳುತ್ತಾರೆ.

[adning id="4492"]

LEAVE A REPLY

Please enter your comment!
Please enter your name here