ಹಾರುತ್ತಿದ್ದ ವಿಮಾನದಲ್ಲೇ ಪೈಲೆಟ್‌ಗಳ ಕಾಳಗ! – ಆ ಪೈಲೆಟ್ ಲೇಡಿ ಪೈಲೆಟ್‌ಗೆ ಏನು ಮಾಡಿದ್ದ ಗೊತ್ತಾ?

ಸಿಟ್ಟು ಬಂದಾಗ ಕಂಟ್ರೋಲು ಮೀರಿದರೆ ಕೆಲವರು ವಿಪರೀತವಾಗಿಯೇ ಹಾರಾಡುತ್ತಾರೆ. ಆದರೆ ಹಾರಾಡೋ ವಿಮಾನದೊಳಗೇ, ಅದೂ ಪೈಲಟ್ ಮತ್ತು ಕೋ ಪೈಲಟ್ ನಡುವೆಯೇ ಕಾಳಗ ಶುರುವಾದರೆ ಗತಿಯೇನು? ಇಂಥಾದ್ದೇ ಒಂದು ಘನ ಗಂಭೀರ ಕಾಳಗವೊಂದು ಜೆಟ್ ಏರ್ ವೇಸ್ ವಿಮಾನದಲ್ಲಿ ನಡೆದಿದೆ!

ಜೆಟ್ ಏರ್ ವೇಸ್‌ನ ಈ ವಿಮಾನ ಲಂಡನ್‌ನಿಂದ ಮುಂಬೈನತ್ತ ಪ್ರಯಾಣ ಬೆಳೆಸುತ್ತಿತ್ತು. ಆ ವಿಮಾನದಲ್ಲಿ ಪೈಲೆಟ್ ಜೊತೆಗೊಬ್ಬಾಕೆ ಲೇಡಿ ಪೈಲಟ್ ಕೂಡಾ ಇದ್ದಳು. ಆದರೆ ವಿಮಾನ ಹಾರಾಟ ಶುರುವಿಟ್ಟಾಕ್ಷಣವೇ ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಶುರುವಾಗಿತ್ತು. ತದ ನಂತರ ಇದು ತಾರಕಕ್ಕೇರಿ ಕೂಗಾಟ ಆರಂಭವಾಗಿತ್ತು.

ವಿಮಾನ ಚಲಾಯಿಸುವಂಥಾ ಗಣವಾದ ಜವಾಬ್ದಾರಿ ಹೊತ್ತ ಆ ಪೈಲೆಟ್ ಆಸಾಮಿಯಂತೂ ವಿಮಾನ ಚಾಲನೆಯನ್ನೇ ಮರೆತವನಂತೆ ಜೊತೆಗಾರ್ತಿ ಪೈಲಟ್ ಮೇಲೆ ಎಗರಾಡಲಾರಂಭಿಸಿದ್ದ. ಕಡೆಗೂ ಆತ ಕಾಕಕ್ ಫೀಟ್‌ನಲ್ಲಿಯೇ ಆ ಲೇಡಿ ಪೈಲೆಟ್‌ಗೆ ರಪ ರಪನೆ ಬಾರಿಸಿದ್ದ. ಇದರಿಂದ ಆಘಾತಗೊಂಡು ಕಣ್ಣೀರು ಸುರಿಸುತ್ತಾ ಆ ಲೇಡಿ ಪೈಲೆಟ್ ಕಾಕ್‌ಫೀಟ್‌ನಿಂದ ಹೊರ ಬಿದ್ದಿದ್ದಳು!

ವಿಮಾನಯಾನದ ನಿಯಮಾವಳಿಗಳ ಪ್ರಕಾರವಾಗಿ ಪೈಲಟ್ ಮತ್ತು ಕೋ ಪೈಲಟ್‌ಗಳಿಲ್ಲದೇ ವಿಮಾನ ಯಾನ ಮಾಡುವಂತಿಲ್ಲ. ಆದರೆ ಸಿಟ್ಟಿನಲ್ಲಿದ್ದ ಆ ಪೈಲಟ್ ಅದರ ಗೊಡವೆಯೇ ಇಲ್ಲದೇ ಪಕ್ಕದ ಜಾಗ ಖಾಲಿ ಇದ್ದರೂ ವಿಮಾನ ಚಾಲನೆ ಮುಂದುವರೆಸಿದ್ದ. ಆ ಕ್ಷಣದಲ್ಲಿ ಏನಾದರೂ ಕೊಂಚ ಯಾಮಾರಿದ್ದರೂ ವಿಮಾನದಲ್ಲಿದ್ದ ಅಷ್ಟೂ ಜನ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸಂದರ್ಭ ಬಂದೊದಗುತ್ತಿತ್ತು.

ಇದನ್ನು ಮನಗಂಡ ಡಿಜಿಸಿಎ ಅಧಿಕಾರಿಗಳು ಕರ್ತವ್ಯ ಲೋಪದ ಆಧಾರದ ಮೇಲೆ ಈ ಇಬ್ಬರು ಪೈಲಟ್‌ಗಳ ಲೈಸೆನ್ಸ್ ರದ್ದುಗೊಳಿಸಿದ್ದಾರೆ. ಆದರೆ ವಿಮಾನ ಚಾಲನೆಯಲ್ಲಿದ್ದ ಸಂದರ್ಭದಲ್ಲೇ ಕಚ್ಚಾಡಿಕೊಂಡ ಈ ವಿದ್ಯಾಮಾನ ಕಂಡು ಜೆಟ್ ಏರ್‌ವೇಸ್ ಅಧಿಕಾರಿಗಳೇ ಕಂಗಾಲಾಗಿದ್ದಾರೆ. ಈ ಘಟನೆಯಿಂದ ಈ ವಿಮಾನದಲ್ಲಿ ಪ್ರಯಾಣಿಸಲು ಜನ ಕೂಡಾ ಹಿಂದೇಟು ಹಾಕುವಂತಾಗಿದೆ. ಈ ವಿದ್ಯಮಾನ ಜಾಗತಿಕ ಮಟ್ಟದಲ್ಲಿ ಈ ವಿಮಾನ ಯಾನ ಸಂಸ್ಥೆಯ ಪ್ರತಿಷ್ಠೆಗೂ ಕುತ್ತು ತಂದಿದೆ.

LEAVE A REPLY

Please enter your comment!
Please enter your name here