ಮೋದಿ ಮೇಲೆ ಮಾತಿನ ಪ್ರಹಾರ ನಡೆಸಿದ ಸೀನಿಯರ್ ಮಣ್ಣಿನಮಗ!

ಮಾಜಿ ಪ್ರಧಾನಿ ದೇವೇಗೌಡರು ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬೇಲೂರು ತಾಲೂಕಿನ ವಿವಿಧ ಊರುಗಳಲ್ಲಿ ಬಿಸಿಲನ್ನೂ ಲೆಕ್ಕಿಸದೆ ಓಡಾಡಿದ ಗೌಡರು ವಿರೋಧಿ ಪಾಳೆಯದ ಮೇಲೆ ಮಾತಿನ ಪ್ರಹಾರ ನಡೆಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಪ್ರಧಾನಿ ಮೋದಿಗೇ ಮಾಜೀ ಪ್ರಧಾನಿಯ ನೇರ ಟಾರ್ಗೆಟ್ ಆಗಿರೋದು ವಿಶೇಷ!

ಎಲ್ಲ ಕಡೆ ಮೋದಿ ಬಿಟ್ಟರೆ ಬೇರ‍್ಯಾರಿಗೂ ದೇಶವನ್ನು ಮುನ್ನಡೆಸಲು ಶಕ್ತಿ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಮಾಧ್ಯಮಗಳೂ ಕೂಡಾ ಅಂಥಾದ್ದೇ ಭ್ರಮೆ ಬಿತ್ತುತ್ತಿವೆ. ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಮುಂತಾದ ಅದೆಷ್ಟೋ ಸಮರ್ಥ ನಾಯಕರು ಇಲ್ಲಿದ್ದಾರೆಂದು ದೇವೇಗೌಡರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಆರು ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಮೋದಿ ಐದು ವರ್ಷ ಪ್ರಧಾನಿಯಾಗಿದ್ದಾರೆ. ಆದರೆ ಅಟಲ್ ಯಾವತ್ತೂ ಇಷ್ಟು ಕೆಟ್ಟದಾಗಿ ಆಡಳಿತ ನಡೆಸಿಲ್ಲ ಅಂದಿರೋ ದೇವೇಗೌಡರು, ಈ ಬಾರಿ ಬೆಂಗಳೂರು ಸೀಮೆಯಲ್ಲಂತೂ ಬಿಜೆಪಿ ಒಂದು ಸೀಟನ್ನೂ ಗೆಲ್ಲುವುದಿಲ್ಲ ಎಂಬ ಭವಿಷ್ಯ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ತಾವು ಮುನಿಸು ಮರೆತು ಒಂದಾಗಿರೋ ಸುಳಿವು ನೀಡಿರೋ ದೇವೇಗೌಡರು, ಹಾಸನ ಕ್ಷೇತ್ರಾಧ್ಯಂತ ಒಟ್ಟಾಗಿಯೇ ಓಡಾಡಿ ಪ್ರಜ್ವಲ್‌ನನ್ನು ಗೆಲ್ಲಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅದೇನೇ ಬಂದರೂ ಗೆಲುವಿನತ್ತ ಮುನ್ನುಗ್ಗುವಂತೆ ಕಾರ್ಯಕರ್ತರಿಗೂ ಹುರುಪು ತುಂಬಿದ್ದಾರೆ.

LEAVE A REPLY

Please enter your comment!
Please enter your name here