ಅಪ್ಪ ಮಕ್ಕಳ ವಿರುದ್ಧ ಗುಟುರು ಹಾಕಿದ ವಾಲೆ ಮಂಜು!

– ದೊಡ್ಡಗೌಡರ ಭದ್ರಕೋಟೆ ಈ ಬಾರಿ ಛಿದ್ರವಾಗುತ್ತಾ?

– ಅಕಟಕಟಾ ಅಮಾಸೆ ರೇವಣ್ಣಗೆ ಇದೆಂಥಾ ಸಂಕಟ!

ಬಾರಿ ಕರ್ನಾಟಕದ ಅಷ್ಟೂ ಲೋಕಸಭಾ ಕ್ಷೇತ್ರಗಳಲ್ಲಿ ಹಾಸನ ಜಿಲ್ಲೆಯ ಕದನ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಚುನಾವಣೆಯ ಹೊಸ್ತಿಲಲ್ಲಿಯೇ ಹಾಸನ ರಾಜಕೀಯದಲ್ಲಿ ನಡೆದಿರೋ ಅಚ್ಚರಿದಾಯಕ ಪಲ್ಲಟ. ಹೇಳಿಕೇಳಿ ಹಾಸನ ಮಾಜಿ ಪ್ರಧಾನಿ ದೇವೇಗೌಡರ ತವರು ನೆಲ. ಅದು ಗೌಡರ ಭದ್ರಕೋಟೆ ಅನ್ನೋ ಮಾತೂ ಇದೆ. ಆದರೆ ಈ ಬಾರಿ ಅದನ್ನು ಛಿದ್ರ ಮಾಡೋ ಉಮೇದಿನಿಂದಲೇ ವಾಲೆ ಮಂಜು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ!

ದೊಡ್ಡಗೌಡರ ಫ್ಯಾಮಿಲಿ ವಿರುದ್ಧ ವಾಗ್ಬಾಣ ಬಿಡಲು ಸಿಗೋ ಯಾವ ಅಪಾರ್ಚುನಿಟಿಯನ್ನೂ ಕೂಡಾ ಮಂಜು ಮಿಸ್ ಮಾಡಿಕೊಳ್ಳುವವರಲ್ಲ. ಅವರೀಗ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಮಣಿಸಿಯೇ ತೀರಬೇಕೆಂಬ ಉಮೇದಿನಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇದೀಗ ಬಿರುಸಿನ ಪ್ರಚಾರ ನಡೆಸುತ್ತಿರೋ ಅವರು ಮತ್ತೊಮ್ಮೆ ದೊಡ್ಡಗೌಡರ ವಿರುದ್ಧ ಬುಲೆಟ್ಟು ಚಿಮ್ಮಿಸಿದ್ದಾರೆ. ‘ಹಾಸನ ಜಿಲ್ಲೆಯಲ್ಲಿ ಬ್ರಿಟೀಷರಂತೆ ಅಧಿಕಾರ ಚಲಾಯಿಸಲಾಗುತ್ತಿದೆ. ವಂಶ ಪಾರಂಪರ್ಯವಾಗಿ ಇಲ್ಲಿ ಅಧಿಕಾರ ನಡೆಸಲಾಗುತ್ತಿದೆ. ಇದಕ್ಕೆ ಈ ಬಾರಿ ಬ್ರೇಕ್ ಹಾಕಬೇಕಿದೆ’ ಅಂದಿರುವ ಎ. ಮಂಜು, ಈ ಕಾರಣದಿಂದಲೇ ತಾವು ಕಣಕ್ಕಿಳಿದಿರೋದಾಗಿ ಅಬ್ಬರಿಸಿದ್ದಾರೆ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಹರಿ ಹಾಯ್ದಿದ್ದಾರೆ. ಹಾಸನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೀಗೆ ಹ್ಞೂಂಕರಿಸಿರುವ ಮಂಜು ಈ ಬಾರಿ ದೇವೇಗೌಡರ ಭದ್ರ ಕೋಟೆಯನ್ನು ಛಿದ್ರ ಮಾಡುವ ಉಮೇದಿನಲ್ಲಿಯೇ ಮಾತಾಡಿದ್ದಾರೆ.

ಎ ಮಂಜು ಕಾಂಗ್ರೆಸ್ ಪಕ್ಷದಲ್ಲಿದ್ದವರು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣಕ್ಕೆ ನಿಷ್ಠರಾಗಿದ್ದ ಅವರು ಆರಂಭ ಕಾಲದಿಂದಲೂ ದೇವೇಗೌಡರ ಪಾಳೆಯದ ವಿರುದ್ಧ ಗುಟುರು ಹಾಕುತ್ತಲೇ ಹಾಸನದ ರಾಜಕೀಯದ ಮೇಲೆ ಹಿಡಿತ ಹೊಂದಿದ್ದರು. ಸದಾ ಒಂದಲ್ಲ ಒಂದು ಕಾರಣಕ್ಕೆ ದೊಡ್ಡಗೌಡರ ಫ್ಯಾಮಿಲಿಗೂ ಮಂಜು ಅವರಿಗೂ ಕದನ ಚಾಲ್ತಿಯಲ್ಲಿಯೇ ಇತ್ತು. ಇಂಥಾ ಮಂಜು ಪಾಲಿಗೆ ಆಘಾತದಂಥಾ ಸನ್ನಿವೇಶ ಎದುರಾದದ್ದು ಮೈತ್ರಿ ಸರ್ಕಾರದ ಕಾರ್ಯ ಯೋಜನೆಗಳು.

ರಾಜ್ಯಾಧ್ಯಂತ ಕಾಂಗ್ರೆಸ್ ಮತ್ತು ಜೆಡಿಎಸ್ ಒಡಂಬಡಿಕೆಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅದರನ್ವಯ ಹಾಸನದಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಕಣಕ್ಕಿಳಿಸುವ ಪ್ರಸ್ತಾಪ ಬಂದೇಟಿಗೆ ಮೊದಲು ರೆಬೆಲ್ ಆಗಿದ್ದೇ ವಾಲೆ ಮಂಜು. ಕಡೆಗೆ ಕಾಂಗ್ರೆಸ್ ಪಕ್ಷದಿಂದಲೇ ಪ್ರಜ್ವಲ್ ಪರವಾಗಿ ಪ್ರಚಾರ ನಡೆಸಬೇಕೆಂಬ ಬುಲಾವು ಬಂದಾಗಲಂತೂ ಮಂಜು ಕುದ್ದು ಹೋಗಿದ್ದರು. ರಾಜಕೀಯ ಬದುಕಿನುದ್ದಕ್ಕೂ ಯಾವ ಪಕ್ಷದ ವಿರುದ್ಧ ಹೋರಾಡಿಕೊಂಡು ಬಂದಿದ್ದೆನೋ ಅದೇ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಸಾಧ್ಯವೇ ಇಲ್ಲ ಅಂದಿದ್ದರು. ಅದರಲ್ಲಿಯೂ ದೇವೇಗೌಡರ ಕುಟುಂಬದ ಮಂದಿ ಕಣಕ್ಕಿಳಿದರೆ ಅತ್ತ ಸುಳಿಯುವುದೂ ಇಲ್ಲ ಎಂಬರ್ಥದಲ್ಲಿ ರೆಬೆಲ್ ಆಗಿದ್ದರು.

ಯಾವಾಗ ಪ್ರಜ್ವಲ್ ರೇವಣ್ಣನೇ ಹಾಸನಕ್ಕೆ ಫಿಕ್ಸು ಅನ್ನೋ ವಿಚಾರ ಪಕ್ಕಾ ಆಯ್ತೋ ಆಗ ಎ ಮಂಜು ಪಕ್ಷದಿಂದಲೇ ಕಾಲ್ಕೀಳುವ ನಿಧಾರ ಮಾಡಿದ್ದರು. ಅತ್ತ ಬಿಜೆಪಿಗೂ ಕೂಡಾ ಹಾಸನದಲ್ಲಿ ನೆಲೆ ಕಂಡುಕೊಳ್ಳುವ ತಹ ತಹವಿತ್ತು. ಪ್ರೀತಂ ಗೌಡ ಶಾಸಕನಾಗುವ ಮೂಲಕ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಖಾತೆ ತೆರೆದಿತ್ತಷ್ಟೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಗೆಲುವು ದಾಖಲಿಸಬೇಕೆಂದರೆ ಮಂಜು ಅವರಂಥಾ ನಾಯಕ ಬೇಕೇ ಬೇಕು ಎಂದರಿತ ಬಿಜೆಪಿ ನಾಯಕರು ಕಡೆಗೂ ಮಂಜುಗೆ ಗಾಳ ಹಾಕಿದರು.
ಇದೀಗ ಮಂಜು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ಕಾರಣದಿಂದಲೇ ಈ ಬಾರಿ ಜೆಡಿಎಸ್ ಪಾಲಿಗೆ ಗೆಲುವೆಂಬುದು ಸುಲಭವಲ್ಲ. ಸಚಿವ ಅಮಾಸೆ ರೇವಣ್ಣ ಕೈಲಿ ಮಾತ್ರವಲ್ಲ, ಇಡೀ ಮೈಗೆ ಲಿಂಬೆಹಣ್ಣಿನ ಮಾಲೆ ನೇತುಹಾಕಿಕೊಂಡರೂ ಈ ಬಾರಿ ಮಗನನ್ನು ಗೆಲ್ಲಿಸಿಕೊಳ್ಳೋದು ಕಷ್ಟ ಎಂಬಂಥಾ ವಾತಾವರಣವಿದೆ. ಇದು ರೇವಣ್ಣನಿಗೂ ಗೊತ್ತಾಗಿದೆ. ದೇವೇಗೌಡರ ಕುಟುಂಬ ವ್ಯಾಮೋಹ ಅವರದ್ದೇ ಪಕ್ಷಕ್ಕೆ ಮುಳುವಾಗಲಿದೆ ಅನ್ನೋ ಮಾತು ಕೂಡಾ ಹಾಸನದಲ್ಲಿಯೇ ಕೇಳಿ ಬರುತ್ತಿದೆ!

LEAVE A REPLY

Please enter your comment!
Please enter your name here