ಸುಮಲತಾ-ನಿಖಿಲ್ ಕಿತ್ತಾಟದಲ್ಲಿ ಮಂಡ್ಯದ ಸಮಸ್ಯೆಗಳೇ ಗಾಯಬ್!

[adning id="4492"]

– ಉನ್ಮಾದದ ಅಲೆಯಲ್ಲಿ ಕೊಚ್ಚಿಹೋಯ್ತೇ ಪ್ರಜಾಪ್ರಭುತ್ವದ ಮೌಲ್ಯ?

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿಕೊಂಡಿದೆ. ಇಡೀ ಕರ್ನಾಟಕದಲ್ಲಿ ಬೇರ‍್ಯಾವ ಕ್ಷೇತ್ರಗಲ್ಲಿಯೂ ಚುನಾವಣೆ ನಡೆಯುತ್ತಲೇ ಇಲ್ಲವೇನೋ ಎಂಬಂತೆ ಮಾಧ್ಯಮಗಳೂ ಕೂಡಾ ಮಂಡ್ಯದತ್ತಲೇ ಫೋಕಸ್ ಮಾಡಿವೆ. ಲೋಕಸಭಾ ಚುನಾವಣೆಯೂ ಸೇರಿದಂತೆ ಯಾವುದೇ ಚುನಾವಣೆಗಳು ನಡೆದಾಗಲೂ ಆಯಾ ಕ್ಷೇತ್ರದ ಸಮಸ್ಯೆಗಳು ಮುನ್ನೆಲೆಗೆ ಬರಬೇಕು. ಎದುರಾಳಿಗಳು ಅದೇನೇ ಟೀಕಾ ಪ್ರಹಾರ ನಡೆಸಿದರೂ ಅದರ ಭೂಮಿಕೆ ಅಭಿವೃದ್ಧಿ ಪರವಾದದ್ದೇ ಆಗಿರಬೇಕೆಂಬುದು ಪ್ರಜಾಪ್ರಭುತ್ವದ ಆಶಯ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಅದಕ್ಕೆ ತದ್ವಿರುದ್ಧವಾದದ್ದೇ ನಡೆಯುತ್ತಿರೋದು ನಿಜಕ್ಕೂ ದುರಂತ.

ಈ ರಾಜಕಾರಣಿಗಳ ಬೂಟಾಟಿಕೆ ಪಕ್ಷಾತೀತವಾದದ್ದು. ಅಭಿವೃದ್ಧಿ ಸಂಬಂಧಿತ ಚರ್ಚೆಗಳಿಗಿಂತಲೂ ಭಾವನಾತ್ಮಕ ವಿಚಾರಗಳಿಗೆ, ಅರಚಾಟಗಳಿಗೇ ಮಾರ್ಕೆಟ್ಟು ಜಾಸ್ತಿ ಎಂಬುದು ಬರಗೆಟ್ಟ ರಾಜಕಾರಣಿಗೆ ಸ್ಪಷ್ಟವಾಗಿಯೇ ಗೊತ್ತಿದೆ. ಆದರೆ ಆಯಾ ಕ್ಷೇತ್ರದ ಮತದಾರರಿಗಾದರೂ ತಮ್ಮ ನಡುವಿನ ಸಮಸ್ಯೆಗಳೇ ಮುಖ್ಯವಾಗಬೇಕಲ್ಲಾ? ಅವರೂ ಕೂಡಾ ಖಾದಿ ಫಟಿಂಗರ ಪುಂಗಿನಾದಕ್ಕೆ ಗೋಣಾಡಿಸಲು ನಿಂತರೆ ಪರಿಸ್ಥಿತಿ ಏನಾಗಬೇಡ? ಇಷ್ಟೆಲ್ಲ ಆತಂಕಗಳನ್ನು ಈ ನೆಲದ ಪ್ರತೀ ಪ್ರಜ್ಞಾವಂತರಲ್ಲಿಯೂ ಮಂಡ್ಯ ಲೋಕಸಭಾ ಕಣದ ಸದ್ಯದ ವಾತಾವರಣ ತುಂಬಿ ಬಿಟ್ಟಿದೆ. ಆದರೆ ಈವತ್ತಿಗೆ ಮಂಡ್ಯ ರಾಜಕೀಯ ಮಾರುಕಟ್ಟೆಯಲ್ಲಿ ಇಂಥಾ ಸಮಾಜಮುಖಿ ಆಲೋಚನೆ ಯಾರೂ ಮೂಸಿ ನೋಡದ ಸರಕಾಗಿ ಬಿಟ್ಟಿದೆ!

ರೆಬೆಲ್ ಸ್ಟಾರ್ ಅಂಬರೀಶ್ ಮಡದಿ ಸುಮಲತಾ ಪಾಲಿಗೆ ಕಾಂಗ್ರೆಸ್ ನಿಂದ ತಮಗೆ ಟಿಕೆಟ್ ದೋಖಾ ಆಗಿದ್ದೇ ರಾಷ್ಟ್ರೀಯ ಸಮಸ್ಯೆ. ತಾನು ಕಣದಿಂದ ಹಿಂದೆ ಸರಿದರೆ ಮಂಡ್ಯಕ್ಕೆ ಮಂಡ್ಯವೇ ಕಾವೇರಿಯಲ್ಲಿ ಕೊಚ್ಚಿ ಹೋಗಿ ಬಿಡುತ್ತದೇನೋ ಎಂಬಂಥಾ ಧಾವಂತ ಸುಮಲತಾ ಅವರದ್ದು. ತನ್ನ ಪುತ್ರರತ್ನ ನಿಖಿಲ್ ಗೆಲ್ಲೋದೊಂದೇ ಮೂಲ ಗುರಿ ಅನ್ನೋ ಮೆಂಟಾಲಿಟಿ ಮುಖ್ಯಮಂತ್ರಿ ಕುಮಾರಸ್ವಾಮಿಯವರದ್ದು. ಎರಡೂ ಕಡೆಗಳಲ್ಲಿನ ಈ ಅಧಿಕಾರದಾಹವೆಂಬುದು ಸಪಾಟಾಗಿ ಮಂಡ್ಯ ಜನರ ಪಾಲಿಗೆ ಮಂಕುಬೂದಿ ಎರಚಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಹಳವಂಡದಲ್ಲಿ ಕಳೆದು ಹೋಗಿರುವಾಗ ಭಾರತೀಯ ಜನತಾ ಪಾರ್ಟಿಯ ಮಂದಿ ಹಿತ್ತಲಿಂದಲೇ ಸುಮಲತಾಗೆ ಸಪೋರ್ಟು ಮಾಡುತ್ತಾ ಆಟಕಟ್ಟುವ ಮೂಡಿನಲ್ಲಿದೆ.

ಇದರೊಂದಿಗೆ ಸುಮಲತಾ ಪರವಾಗಿ ಸಿನಿಮಾ ನಟರಾದ ದರ್ಶನ್ ಮತ್ತು ಯಶ್ ಕಣಕ್ಕಿಳಿಯುತ್ತಲೇ ಮಂಡ್ಯಕ್ಕೆ ಮಂಡ್ಯವನ್ನೇ ಸಮೂಹ ಸನ್ನಿಯೊಂದು ಆವರಿಸಿಕೊಂಡಿದೆ. ಇದರಿಂದಾಗಿ ಈ ಬಾರಿಯ ಕದನ ಸುಮಲತಾ ಮತ್ತು ಕುಮಾರನ ಫ್ಯಾಮಿಲಿ ನಡುವಿನ ಕಿತ್ತಾಟದ ಲೆವೆಲ್ಲಿಗಿಳಿದಿದೆ. ಸುಮಲತಾಗಾಗಲಿ, ಕುಮಾರಸ್ವಾಮಿಯ ಪಟಾಲಮ್ಮಿಗಾಗಲಿ ಇಲ್ಲಿನ ಸಮಸ್ಯೆಗಳು ಮುಖ್ಯವಾಗುತ್ತಿಲ್ಲ.

ಇವರ ಕಥೆ ಹಾಳು ಬಿದ್ದು ಹೋಗಲಿ. ಇಲ್ಲಿನ ಜನರಿಗಾದರೂ ಈ ಕಿತ್ತಾಟಕ್ಕಿಂತ ಸಮಸ್ಯೆಗಳು ಮುಖ್ಯ ಅನ್ನಿಸುತ್ತಿಲ್ಲವಾ? ಇವರ ಕಿತ್ತಾಡುವಾಗ ಬಿಸಿ ಮುಟ್ಟಿಸಿ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕಿದ್ದ ಮಾಧ್ಯಮಗಳೂ ಕೂಡಾ ಎರಡೂ ಪಾಳೆಯಗಳಲ್ಲಿನ ತಲೆಎಣಿಸುವ ಕೆಲಸದಲ್ಲಿ ಬ್ಯುಸಿಯಾಗಿವೆ. ನಾಳೆ ಈ ನವರಂಗೀ ನಾಟಕ ಮತದಾನದ ಮೂಲಕ ಮುಕ್ತಾಯವಾಗುತ್ತೆ. ಅಲ್ಲಿ ಯಾರು ಗೆದ್ದು ಯಾರು ಸೋತರೂ ಎಲ್ಲರೂ ಪೇರಿ ಕೀಳುತ್ತಾರೆ. ಆ ಘಳಿಗೆಯಲ್ಲಿ ಮಂಡ್ಯದ ಜನರಿಗೆ ಮುಖ್ಯವಾಗೋದು ತಂತಮ್ಮ ಸಮಸ್ಯೆಗಳೇ ಹೊರತು ಈ ಕಿತ್ತಾಟದಲ್ಲಿ ಕಾಲಾಳುಗಳಾಗೋ ಬಂಡಾಟವಲ್ಲ. ಮಂಡ್ಯದ ಮತದಾರರು ಈ ಬಗ್ಗೆ ಯೋಚಿಸಬೇಕಿದೆ.

[adning id="4492"]

LEAVE A REPLY

Please enter your comment!
Please enter your name here